ಕರೋಕೆ ಗಾಯನ ಸ್ಪರ್ಧೆಗೆ 100ಕ್ಕೂ ಹೆಚ್ಚು ಮಂದಿ ನೋಂದಣಿ

| Published : Dec 20 2023, 01:15 AM IST

ಕರೋಕೆ ಗಾಯನ ಸ್ಪರ್ಧೆಗೆ 100ಕ್ಕೂ ಹೆಚ್ಚು ಮಂದಿ ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಕರೋಕೆ ಸ್ಪರ್ಧೆ ಆಯೋಜಿಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ‌ ಮಾಡಿಕೊಂಡಿದ್ದಾರೆ ಎಂದು ಸಂಘದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಚಾಲಕ ರಾಮಚಂದ್ರ ಗುಣಾರಿ ಹೇಳಿದ್ದಾರೆ.

ಮುಖ್ಯಾಂಶಗಳು- 22ರಂದು 36ರಿಂದ 55 ವರ್ಷ, 23ರಂದು 20ರಿಂದ 35ರ ವಯೋಮಿತಿಯ ವಿಭಾಗದವರ ಅರ್ಹತಾ ಸುತ್ತಿನ ಸ್ಪರ್ಧೆ

- ಎರಡೂ ವಿಭಾಗದಿಂದ 20ರಿಂದ 25 ಸ್ಪರ್ಧೆಗಳನ್ನು ಮುಂದಿನ ಹಂತಕ್ಕೆ ಆಯ್ಕೆಗೊಳಿಸಲಾಗುವುದು

- ಹಾಡುಗಾರಿಕೆಗೆ 3ರಿಂದ 4 ನಿಮಿಷ ಕಾಲಾವಕಾಶ, ಅಭ್ಯರ್ಥಿ 2 ಹಾಡುಗಳಿಗೆ ಸಿದ್ಧವಿರಬೇಕು

- ತೀರ್ಪುಗಾರರ ತೀರ್ಮಾನವೇ ಅಂತಿಮ, ಸ್ಪರ್ಧೆ ಹಾಡಿನ ರೆಕಾರ್ಡ್‌ಗಳು ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರ- - - ಕನ್ನಡಪ್ರಭ ವಾರ್ತೆ, ಶಿವಮೊಗ್ಗ

ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ನಡೆಯಲಿರುವ ಕರೋಕೆ ಸ್ಪರ್ಧೆಗೆ 100ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ‌ ಮಾಡಿಕೊಂಡಿದ್ದಾರೆ ಎಂದು ಸಂಘದ ನಿರ್ದೇಶಕ ಹಾಗೂ ಕಾರ್ಯಕ್ರಮ ಸಂಚಾಲಕ ರಾಮಚಂದ್ರ ಗುಣಾರಿ ಹೇಳಿದರು.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಎರಡು ವಿಭಾಗದಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. 36ರಿಂದ 55 ವರ್ಷದವರೆಗಿನವರ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಡಿ.22ರಂದು ಮಧ್ಯಾಹ್ನ 2 ಗಂಟೆಗೆ ಪ್ರಸ್‌ ಟ್ರಸ್ಟ್‌ ನೂತನ ಸಂಭಾಗಣದಲ್ಲಿ ನಡೆಯಲಿದೆ. 20ರಿಂದ 35ರ ವಯೋಮಿತಿಯ ವಿಭಾಗದ ಅರ್ಹತಾ ಸುತ್ತಿನ ಸ್ಪರ್ಧೆಗಳು ಡಿ.23ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿವೆ. ಅರ್ಹತಾ ಸುತ್ತಿನಲ್ಲಿ ಈ ಎರಡೂ ವಿಭಾಗದದ 20ರಿಂದ 25 ಸ್ಪರ್ಧೆಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರತಿ ಸ್ಪರ್ಧಿಗೆ ಹಾಡುಗಾರಿಕೆಗೆ 3ರಿಂದ 4 ನಿಮಿಷ ಕಾಲಾವಕಾಶ ಇರುತ್ತದೆ. ಅಭ್ಯರ್ಥಿಯು 2 ಹಾಡುಗಳಿಗೆ ಸಿದ್ಧರಾಗಿ ಬರಬೇಕು. ಸ್ಪರ್ಧಿಯು ಹಾಡಬಯಸುವ ಹಾಡಿನ ಕರೋಕೆ ಆಡಿಯೋ ಫೈಲ್‌ ಅನ್ನು ಪೆನ್ ಡ್ರೈವ್ ಅಥವಾ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಬರಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಪ್ರಯಾಣ ವೆಚ್ಚ, ಊಟ, ವಸತಿ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕಿದೆ ಎಂದು ವಿವರಿಸಿದರು.

ಅರ್ಹತಾ ಸುತ್ತಿನಲ್ಲಿ ಆಯ್ಕೆಯಾದ ಹಾಡುಗಾರರಿಗೆ ಮುಂದಿನ ಸುತ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅರ್ಹತಾ ಸುತ್ತಿನಲ್ಲಿ ಮೂವರು ತೀರ್ಪುಗಾರರು ಪಾಲ್ಗೊಳ್ಳುವರು. ಆಯ್ಕೆ ಸುತ್ತುಗಳಲ್ಲಿ ಪ್ರತಿ ಸುತ್ತಿಗೆ ಒಬ್ಬ ಅತಿಥಿಯನ್ನು ಆಹ್ವಾನಿಸಲಾಗುವುದು. ಒಟ್ಟು 8 ಸುತ್ತುಗಳು ನಡೆಯುತ್ತವೆ. ಎಲ್ಲ ಸುತ್ತುಗಳು ವಿಷಯಾಧಾರಿತ ಸುತ್ತುಗಳಾಗಿರುತ್ತವೆ. ಈ ಸುತ್ತುಗಳಲ್ಲಿ ತೀರ್ಪುಗಾರರೇ ಮುಂಚಿತವಾಗಿ ಹಾಡುಗಳನ್ನು ಸೂಚಿಸುತ್ತಾರೆ. ಅಭ್ಯರ್ಥಿಗಳು ಈ ಹಾಡುಗಳಿಗೆ ಸಿದ್ಧರಿರಬೇಕು. ಉತ್ತಮ ಕಂಠ, ಸ್ವರ, ಲಯ ಹಾಗೂ ತಾಳಗಳನ್ನು ಗಮನಿಸಲಾಗುವುದು. ಹೊರಊರಿನಿಂದ ಬರುವ ಗಾಯಕರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಸ್ಪರ್ಧೆಯ ಹಾಡಿನ ರೆಕಾರ್ಡ್‌ಗಳನ್ನು ವಾರದಲ್ಲಿ ಒಂದು ದಿನ ಸ್ಥಳೀಯ ಕೇಬಲ್ ಹಾಗೂ ಡಿಜಿಟಲ್ ವಾಹಿನಿಗಳಾದ ಕನ್ನಡ‌ ಮೀಡಿಯಂ 24x7 ಚಾನಲ್ ಹಾಗೂ ನಮ್ಮ ಶಿವಮೊಗ್ಗ ನ್ಯೂಸ್ ಚಾನಲ್‌ನಲ್ಲಿ ಹಾಡುಗಳನ್ನು ಪ್ರಸಾರ ಮಾಡಲಾಗುವುದು. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭ ವೇದಿಕೆ ಕಾರ್ಯಕ್ರಮ ಇರುತ್ತದೆ. ವಿಜೇತರಿಗೆ ನಗದು ಪುರಸ್ಕಾರ, ಟ್ರೋಫಿ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್‌ ಯಡಗೆರೆ, ಪ್ರೆಸ್‌ ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌, ಖಜಾಂಚಿ ಜೇಸುದಾಸ್‌ ಇದ್ದರು.

- - - (-ಸಾಂದರ್ಭಿಕ ಚಿತ್ರ)

ಮೈಕ್-ಸಾಂಗ್‌.ಜೆಪಿಜಿ: