ಎರಡು ಬಾರಿ ಉದ್ಯೋಗಾಂಕ್ಷಿಗಳು ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿಗೆ ಕಾನೂನು ಸುವ್ಯವಸ್ಥೆ ನೆಪವೊಡ್ಡ ಪರವಾನಗಿ ನೀಡದೇ ಹೋರಾಟ ಹತ್ತಿಕ್ಕಿದ್ದ ಪೊಲೀಸ್‌ ಇಲಾಖೆ, ಇದೀಗ ಎಐಡಿಎಸ್‌ಒ, ಎಐಡಿವೈಒ, ಎಐಕೆಕೆಎಂಎಸ್ ರೈತ ಸಂಘಟನೆ ಸೇರಿದಂತೆ 16 ಸಂಘಟನೆಗಳು ಒಗ್ಗೂಡಿ ಸಾವಿರಾರು ಉದ್ಯೋಗಾಂಕ್ಷಿಗಳು ಬುಧವಾರ ಹೋರಾಟ ಮಾಡಲು ಸಜ್ಜಾದ ವೇಳೆ ನಸುಕಿನಲ್ಲಿಯೇ ಎನ್‌ಟಿಟಿಎಫ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಹೋರಾಟಗರನ್ನು ಬಂಧಿಸಲಾಗಿದೆ.

ಧಾರವಾಡ:

ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ನೇಮಕಾತಿ ಹಾಗೂ ನೇಮಕಾತಿ ವಯೋಮಿತಿ ಸಡಿಲಿಕೆಗಾಗಿ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ ಮೂರನೇ ಬಾರಿಯ ಉದ್ಯೋಗಾಂಕ್ಷಿಗಳ ಹೋರಾಟಕ್ಕೂ ಪರವಾನಗಿ ನೆಪವೊಡ್ಡಿ ಪೊಲೀಸ್‌ ಇಲಾಖೆಯು ಬ್ರೇಕ್‌ ನೀಡಿದೆ.

ಈಗಾಗಲೇ ಎರಡು ಬಾರಿ ಉದ್ಯೋಗಾಂಕ್ಷಿಗಳು ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿಗೆ ಕಾನೂನು ಸುವ್ಯವಸ್ಥೆ ನೆಪವೊಡ್ಡ ಪರವಾನಗಿ ನೀಡದೇ ಹೋರಾಟ ಹತ್ತಿಕ್ಕಿದ್ದ ಪೊಲೀಸ್‌ ಇಲಾಖೆ, ಇದೀಗ ಎಐಡಿಎಸ್‌ಒ, ಎಐಡಿವೈಒ, ಎಐಕೆಕೆಎಂಎಸ್ ರೈತ ಸಂಘಟನೆ ಸೇರಿದಂತೆ 16 ಸಂಘಟನೆಗಳು ಒಗ್ಗೂಡಿ ಸಾವಿರಾರು ಉದ್ಯೋಗಾಂಕ್ಷಿಗಳು ಬುಧವಾರ ಹೋರಾಟ ಮಾಡಲು ಸಜ್ಜಾದ ವೇಳೆ ನಸುಕಿನಲ್ಲಿಯೇ ಎನ್‌ಟಿಟಿಎಫ್‌ ಸೇರಿದಂತೆ ಹಲವು ಸ್ಥಳಗಳಲ್ಲಿ ಹೋರಾಟಗರನ್ನು ಬಂಧಿಸಲಾಗಿದೆ.

ಬಂಧಿತರು:

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ವಿವಿಧ ಸಂಘಟನೆಗಳ ಮುಖಂಡರಾದ ಭವಾನಿ ಶಂಕರ್ ಎಸ್ ಗೌಡ, ಚನ್ನಬಸವ ಜಾನೇಕಲ್, ಶರಣಪ್ಪ ಉದ್ಬಾಳ್, ಲಕ್ಷ್ಮಣ ಜಡಗಣ್ಣವರ್, ಜಗನ್ನಾಥ ಎಸ್.ಎಚ್, ಪಾಲಾಕ್ಷ ಕೆ. ಸೇರಿದಂತೆ 25ಕ್ಕೂ ಹೆಚ್ಚು ಪುರುಷ-ಮಹಿಳಾ ಹೋರಾಟಗಾರರನ್ನು ಬಂಧಿಸಲಾಯಿತು. ಈ ಮೂಲಕ ಪೊಲೀಸ್‌ ಇಲಾಖೆ ಮತ್ತೊಂದು ವಿದ್ಯಾರ್ಥಿ ಹೋರಾಟವನ್ನು ಶಾಂತಗೊಳಿಸಿದ ಕೀರ್ತಿ ಪಡೆಯಿತು.

ಪೊಲೀಸ್‌ ನಡೆಗೆ ತೀವ್ರ ಆಕ್ರೋಶ:

ಉದ್ಯೋಗಾಂಕ್ಷಿಗಳ ಬೇಗುದಿಗೆ ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದ ರಾಜ್ಯ ಕಾಂಗ್ರೆಸ್ ಸರ್ಕಾರವು ಬುಧವಾರ ಬೆಳಗ್ಗೆಯಿಂದಲೇ ಯಾವುದೇ ನೋಟಿಸ್ ನೀಡದೇ, ಧರಣಿಗೆ ಸಜ್ಜಾಗುತ್ತಿದ್ದ ಸಮಯದಲ್ಲೇ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಈ ಕ್ರಮವನ್ನು ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯು ಉಗ್ರವಾಗಿ ಖಂಡಿಸಿದೆ. ಇದು ಜನತಂತ್ರವನ್ನು ದಮನ ಮಾಡಿರುವ ಅತ್ಯಂತ ಹೀನಾಯ ನಡೆಯಾಗಿದೆ. ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಕನಿಷ್ಠ ಪ್ರತಿಭಟನೆಯ ಹಕ್ಕು ಲಭ್ಯವಿಲ್ಲವೇ ಎಂದು ವಿದ್ಯಾರ್ಥಿ ಮುಖಂಡರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಲವು ತಿಂಗಳಿಂದ ಖುದ್ದಾಗಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳುತ್ತಲಿದ್ದರೂ, ಮುಖ್ಯ ಕಾರ್ಯದರ್ಶಿಗೆ ಉದ್ಯೋಗಾಕಾಂಕ್ಷಿಗಳ ಹಕ್ಕೊತ್ತಾಯಗಳ ಆಗ್ರಹಪತ್ರ ತಲುಪಿಸಿದ್ದರೂ ಸಹ ಸ್ಪಂದಿಸಿಲ್ಲ. ಇದೀಗ ಉದ್ಯೋಗಾಂಕ್ಷಿಗಳನ್ನು ಬಂಧಿಸಿದ್ದು ನ್ಯಾಯವಲ್ಲ. ಯುವಜನ ವಿರೋಧಿ ಕ್ರಮ. ಯುವ ಜನಾಂಗ ಕೇವಲ ಮತ ಬ್ಯಾಂಕ್ ಅಷ್ಟೇ ಎಂಬ ಕಾಂಗ್ರೆಸ್ ಸರ್ಕಾರದ ನಿಲುವಿಗೆ ಇನ್ನೊಂದು ಸಾಕ್ಷಿ ಒದಗಿಸಿದೆ ಎಂದು ಉದ್ಯೋಗಾಂಕ್ಷಿಗಳ ಹೋರಾಟಗಾರರ ಪರವಾಗಿ ಸುನೀಲ ಟಿ.ಆರ್ ಮತ್ತು ವೀರೇಶ ನರೇಗಲ್ ಸರ್ಕಾರದ ನಡೆ ಪ್ರಶ್ನಿಸಿದರು.

ಯುವಜನರ ನ್ಯಾಯಯುತ ಹೋರಾಟ ಹಾಗೂ ಪ್ರಜಾತಾಂತ್ರಿಕ ಹಕ್ಕಿನ ಮೇಲೆ ದಾಳಿ ಮಾಡಿರುವ ಪೊಲೀಸರು ಹೋರಾಟ ಬೆಂಬಲಿಸಲು ಬಂದಿದ್ದ ಜನಪರ ಸಂಘಟನೆಗಳ ನಾಯಕರನ್ನು ಹಾಗೂ ಪತ್ರಿಕಾಗೋಷ್ಠಿ ಮಾಡಲು ಹೋಗುತ್ತಿದ್ದ ಮುಖಂಡರನ್ನು ಸಹ ಬಂಧಿಸಿದ್ದಾರೆ. ಸರ್ಕಾರದ ಈ ದಮನಕಾರಿ ನಡೆ ತಪ್ಪು. ಪೊಲೀಸರು ಕೇಳಿದ ಮಾಹಿತಿಯನ್ನು ಹಲವು ಬಾರಿ ನೀಡಿದ್ದಾಗಿಯೂ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಹೋರಾಟಗಾರ್ತಿ ಶಶಿಕಲಾ ಮೇಟಿ ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗಾಕಾಂಕ್ಷಿ ಹೋರಾಟದಲ್ಲಿ ಪಾಲ್ಗೊಳ್ಳಲು ಮಂಗಳವಾರ ರಾತ್ರಿ ಧಾರವಾಡಕ್ಕೆ ತಲುಪಿ ಸಂಬಂಧಿಗಳ ಮನೆಯಲ್ಲಿದ್ದೆನು. ಪ್ರತಿಭಟನೆಗೆ ಸಿದ್ಧವಾಗಿ ಕುಳಿತಿದ್ದೆ. ಪ್ರತಿಭಟನೆಯ ಮುಂಚೂಣಿಯಲ್ಲಿ ಇರುವವರನ್ನು ಬಂಧಿಸಿರುವ ಸುದ್ದಿ ತಿಳಿಯಿತು. ಇದು ಸರ್ವಾಧಿಕಾರದ ವ್ಯವಸ್ಥೆಯಾಗಿದೆ. ಸಮಾಜವಾದಿ, ರೈತ ಹೋರಾಟದ ಹಿನ್ನೆಲೆಯಲ್ಲಿ ಬಂದ ಸಿದ್ದರಾಮಯ್ಯ ಸರ್ಕಾರಕ್ಕೆ ಈ ನಡತೆ ಶೋಭಿಸದು. ವಿಧಾನಸಭೆ ನಡೆಯುವಾಗ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಅನೇಕ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು, ಸ್ನಾತಕೋತ್ತರ ಕೇಂದ್ರ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ, ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಇವೆಲ್ಲವುಗಳನ್ನು ತುಂಬಿದರೆ ಸರ್ಕಾರದ ಕೆಲಸಗಳು ತೀವ್ರವಾಗುತ್ತವೆ. ಗುಣಮಟ್ಟದ ಶಿಕ್ಷಣವೂ ಸಾಧ್ಯವಾಗುತ್ತದೆ ಎಂದು ಕೊಪ್ಪಳದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಸರ್ಕಾರದ ನಡೆ ಪ್ರಶ್ನಿಸಿದರು.

ಹೋರಾಟದ ಸಂದರ್ಭದಲ್ಲಿ ರೈತ ಸೇನಾ ಕರ್ನಾಟಕದ ಶಂಕರ ಅಂಬ್ಲಿ, ಸಿದ್ದನಗೌಡ ಮೂದಲಗಿ, ಶರಣು ಗೋನವಾರ, ದೀಪಾ ಧಾರವಾಡ, ಕೆ.ಉಮಾ, ಬಿ.ರವಿ ಸಹ ಇದ್ದರು.