ಕೆಲವರ ವಿರೋಧದ ನಡುವೆಯೂ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಮುಖ್ಯರಸ್ತೆ ಅಗಲೀಕರಣ ಕಾರ್ಯ ಜಿಲ್ಲಾಡಳಿತದಿಂದ ಎರಡನೇ ದಿನವಾದ ಭಾನುವಾರ ನಿರಾಂತಕವಾಗಿ ಪೂರ್ಣಗೊಂಡಿತು.
ಬ್ಯಾಡಗಿ: ಕೆಲವರ ವಿರೋಧದ ನಡುವೆಯೂ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಮುಖ್ಯರಸ್ತೆ ಅಗಲೀಕರಣ ಕಾರ್ಯ ಜಿಲ್ಲಾಡಳಿತದಿಂದ ಎರಡನೇ ದಿನವಾದ ಭಾನುವಾರ ನಿರಾಂತಕವಾಗಿ ಪೂರ್ಣಗೊಂಡಿತು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪಟ್ಟಣದಲ್ಲೇ ಬೀಡುಬಿಟ್ಟಿದ್ದು, ಅವರ ಮಾರ್ಗದರ್ಶನಲ್ಲಿ ಭಾನುವಾರವೂ 40ಕ್ಕೂ ಹೆಚ್ಚು ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಮುಖ್ಯರಸ್ತೆ ಸೇರಿದಂತೆ ಹಂಸಭಾವಿ ರಸ್ತೆಯ ಸುಮಾರು 750 ಮೀ. ವ್ಯಾಪ್ತಿಯ ರಸ್ತೆಯ ಎರಡೂ ಬದಿಗಳಲ್ಲಿ ಹಳೆಯ ಹಾಗೂ ಹೊಸ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯಿತು.ಮುಂದುವರೆದ ಜೆಸಿಬಿ ಗರ್ಜನೆ: ಭಾನುವಾರವೂ ಜೆಸಿಬಿಗಳ ಗರ್ಜನೆ ಮುಂದುವರಿಯಿತು. 6ಕ್ಕೂ ಹೆಚ್ಚು ಜೆಸಿಬಿಗಳು ಸುಭಾಸ್ ಸರ್ಕಲ್ ಹಾಗೂ ಹಳೇ ಪುರಸಭೆ ಎರಡೂ ಕಡೆಗಳಿಂದ ಕಟ್ಟಡಗಳನ್ನು ನೆಲಸಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದವು. ಬಹುತೇಕ ಕಟ್ಟಡಗಳು ಮಣ್ಣಿನ ಮಾಳಿಗೆಯಿಂದ ಕೂಡಿದ್ದು, ತೆರವು ಕಾರ್ಯಾಚರಣೆ ಸಹ ಬಹಳಷ್ಟು ಚುರುಕಾಗಿ ಮುಂದುವರಿದಿದೆ.
100ಕ್ಕೂ ಹೆಚ್ಚು ಜನರಿಗೆ ಕಟ್ಟಡ ತೆರವುಗೊಳಿಸಿಕೊಳ್ಳುವಂತೆ ನೋಟಿಸ್ ಜಾರಿಗೊಳಿಸುತ್ತಿದ್ದಂತೆ ಕೆಲವರು ಪ್ರತಿರೋಧ ವ್ಯಕ್ತಪಡಿಸಿದರು. ಇದಕ್ಕೆ ಸೊಪ್ಪು ಹಾಕದ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿ ಮುಂದೆ ಸಾಗಿತು.ಸಮಸ್ಯೆಗಳ ಅನಾವರಣ: ಶನಿವಾರದಂತೆ ಭಾನುವಾರವೂ ನಮಗೆ ಸ್ವಲ್ಪ ಕಾಲವಕಾಶ ನೀಡಬೇಕಿತ್ತು ಸರ್... ನಮ್ಮ ಕಟ್ಟಡ ನಾವೇ ಕೆಡವಿಕೊಳ್ಳುತ್ತೇವೆ ಸರ್... ಬಾಡಿಗೆ ಅಂಗಡಿ ಹುಡುಕಿಕೊಳ್ಳುವ ವರೆಗೂ ಕಾಲವಕಾಶ ಕೊಡಿ ಸರ್... ಎನ್ನುವ ಒಂದಿಷ್ಟು ಬೇಡಿಕೆಗಳು ಕೆಲವು ಕಟ್ಟಡ ಮಾಲೀಕರು ಅಧಿಕಾರಿಗಳೆದುರು ಇಟ್ಟರು. ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳು ಅಗಲೀಕರಣದ ಕಾರ್ಯಾಚರಣೆ ಮುಂದುವರಿಸಿದರು. ಜಿಲ್ಲಾಡಳಿತ ಸೇರಿದಂತೆ ಪೌರಾಡಳಿತ, ತಹಸೀಲ್ದಾರ್ ಕಚೇರಿ, ಮೋಜಣಿ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಹೆಸ್ಕಾಂ ಹಾಗೂ ರಕ್ಷಣಾ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಬಿಗಿ ಭದ್ರತೆ ಎರಡನೇ ದಿನವೂ ಮುಂದುವರಿದಿತ್ತು.ಜನರ ಸಹಕಾರವಿಲ್ಲದೇ ಅಭಿವೃದ್ಧಿ ಕೆಲಸ ಸಾಧ್ಯವಿಲ್ಲ, ಕಾನೂನು ವಿವಾದ ವಿಚಾರಗಳನ್ನು ಮುಂದಿಟ್ಟು ಮಾತನಾಡುವುದನ್ನು ನಿಲ್ಲಿಸಿ, ಸ್ವಾರ್ಥ ಬಿಟ್ಟು ಅಭಿವೃದ್ಧಿಗೆ ಸಾಥ್ ನೀಡಿದಲ್ಲಿ ಕ್ಷೇತ್ರದ ಜನರ ಬಹುದಿನದ ಬೇಡಿಕೆ ಮುಖ್ಯರಸ್ತೆ ಅಗಲೀಕರಣವನ್ನು ಸುಗಮವಾಗಿ ಪೂರ್ಣಗೊಳಿಸಲಿದ್ದೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಈ ಹೆದ್ದಾರಿ ಅಗಲೀಕರಣದಲ್ಲಿ 313 ಆಸ್ತಿಗಳನ್ನು ಭೂ ಸ್ವಾಧೀನ ಮಾಡಲಿದ್ದೇವೆ. ಯಾವುದೇ ಅಡೆತಡೆಗಳಿಗೆ ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ. ಜನರ ಸಹಕಾರ ಪಡೆದು ಮುಂದಿನ 6 ತಿಂಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮವರ, ಜಿಲ್ಲಾಧಿಕಾರಿ ಹೇಳಿದರು.