ಭಾರತದಲ್ಲಿ 57 ಸಾವಿರಕ್ಕೂ ಹೆಚ್ಚು ಮಹಿಳಾ ಸಂಶೋಧಕರು

| Published : Dec 17 2023, 01:45 AM IST

ಭಾರತದಲ್ಲಿ 57 ಸಾವಿರಕ್ಕೂ ಹೆಚ್ಚು ಮಹಿಳಾ ಸಂಶೋಧಕರು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತವು ಒಟ್ಟು 57 ಸಾವಿರಕ್ಕೂ ಹೆಚ್ಚು ಮಹಿಳಾ ಸಂಶೋಧಕರನ್ನು ಹೊಂದಿದೆ. ಇದು ದೇಶದ ಒಟ್ಟು ಸಂಶೋಧಕರ ಶೇ.16.6ರಷ್ಟಿದೆ. ಸಂಶೋಧನೆ, ವಿಜ್ಞಾನ-ತಂತ್ರಜ್ಞಾನದ ಮೇಲಿರುವ ಆಸಕ್ತಿ, ದೂರದೃಷ್ಟಿಯನ್ನು ಮಹಿಳೆಯರು ಸ್ವೀಕರಿಸಿರುವ ಮಹತ್ವವನ್ನು ಸಾರುತ್ತದೆ ಎಂದು ನವದೆಹಲಿಯ ಏಮ್ಸ್‌ ನ ಡಾ. ಉಮಾಕುಮಾರ್ ಹೇಳಿದರು

ವಿವಿಯಲ್ಲಿ 14 ನೆಯ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನಕ್ಕೆ ಚಾಲನೆ ನೀಡಿ ಡಾ. ಉಮಾಕುಮಾರ್

ಕನ್ನಡಪ್ರಭ ವಾರ್ತೆ ತುಮಕೂರು

ಭಾರತವು ಒಟ್ಟು 57 ಸಾವಿರಕ್ಕೂ ಹೆಚ್ಚು ಮಹಿಳಾ ಸಂಶೋಧಕರನ್ನು ಹೊಂದಿದೆ. ಇದು ದೇಶದ ಒಟ್ಟು ಸಂಶೋಧಕರ ಶೇ.16.6ರಷ್ಟಿದೆ. ಸಂಶೋಧನೆ, ವಿಜ್ಞಾನ-ತಂತ್ರಜ್ಞಾನದ ಮೇಲಿರುವ ಆಸಕ್ತಿ, ದೂರದೃಷ್ಟಿಯನ್ನು ಮಹಿಳೆಯರು ಸ್ವೀಕರಿಸಿರುವ ಮಹತ್ವವನ್ನು ಸಾರುತ್ತದೆ ಎಂದು ನವದೆಹಲಿಯ ಏಮ್ಸ್‌ ನ ಡಾ. ಉಮಾಕುಮಾರ್ ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಸ್ವದೇಶಿ ವಿಜ್ಞಾನ ಆಂದೋಲನ-ಕರ್ನಾಟಕದ ಮಾತೃ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 14ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಆರೋಗ್ಯ, ವಿಜ್ಞಾನ, ಸಂಶೋಧನ ಕ್ಷೇತ್ರಗಳಲ್ಲಿ ಮುಂದಿದ್ದೇವೆ. ಮನೆಯಿಂದ ಹೊರಗೆ, ನಾಲ್ಕು ಗೋಡೆಗಳಾಚೆಗೆ ಸಾಧನೆಯ ಮೆಟ್ಟಿಲೇರಲು ಹೊರಟಿದ್ದೇವೆ. ಹೋರಾಡುತ್ತಿದ್ದೇವೆ. ಸಮಾಜದಲ್ಲಿ ಹೆಣ್ಣಿನ ಪಾತ್ರ ದೊಡ್ಡದು. ಆಧ್ಯಾತ್ಮಿಕ ಆರೋಗ್ಯದ ಅಗತ್ಯವಿದೆ. ಸಮಾಜದ ಮೂಲತತ್ವದ ಮೌಲ್ಯವು ಆರೋಗ್ಯದ ಮೇಲೆ ಯೋಗ ಕ್ಷೇಮವನ್ನು ಕೇಂದ್ರೀಕರಿಸುವುದಾಗಿದೆ. ವಿದ್ವತ್ಪೂರ್ಣ ಮಹಿಳೆಯರು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದರು.

ವಿಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ತನ್ನ ಸುತ್ತಲಿರುವ ಸಮಾಜವನ್ನು ಪ್ರೇರೇಪಿಸುತ್ತಾರೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರವನ್ನು ಉತ್ಕೃಷ್ಟವಾಗಿ ರೂಪಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಇದಕ್ಕೆ ಉದಾಹರಣೆಎಂಬಂತೆ ವಿಜ್ಞಾನ ಜ್ಯೋತಿ ಅವರ ‘ಕಿರಣ್’ ಯೋಜನೆ. 2003 ರಲ್ಲಿ ಆರಂಭವಾದ ವಿಜ್ಞಾನ ಭಾರತಿ ಅವರ ‘ಶಕ್ತಿ’ ಯೋಜನೆ ಸಮಾಜಕ್ಕಾಗಿ ಮಹಿಳೆಯರನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಿದೆ. ಯೋಗ ಮತ್ತು ಆಯುರ್ವೇದವು ಮಹಿಳೆಯರ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ಎಡಿಇ-ಡಿಆರ್‌ಡಿಒನ ಸಹ ನಿರ್ದೇಶಕಿ, ವಿಜ್ಞಾನಿ ಡಾ.ಆಶಾ ಗರ್ಗ್ ಮಾತನಾಡಿ, ಮಹಿಳಾ ವಿಜ್ಞಾನ ಸಮ್ಮೇಳನಗಳು ಮಹಿಳೆಯರ ಸಾಮಾರ್ಥ್ಯವನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ. ಶಾಲಾ-ಕಾಲೇಜು, ಪದವಿ ಶಿಕ್ಷಣ ಮುಗಿಸಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯು ತನ್ನ ವಿಭಿನ್ನ ಕೌಶಲವನ್ನು ನಿರೂಪಿಸಲು, ತೊಡಗಲು ಮಹಿಳಾ ಸಂಘಟನೆಯ, ಸಮ್ಮೇಳನಗಳ ಅವಶ್ಯಕತೆಯಿದೆ ಎಂದರು.

ಲಘು ಯುದ್ಧ ವಿಮಾನ (ಎಲ್‌ಸಿಎ) ತಯಾರಿಕೆಯ ಪರೀಕ್ಷೆಯಲ್ಲಿ ಯಾವುದೇ ಅವಘಡಗಳಾಗದೆ ವಿಶ್ವದಾಖಲೆಯನ್ನು ಸಾಧಿಸಿರುವ ಏಕೈಕ ರಾಷ್ಟ್ರ ನಮ್ಮದು. ಎಲ್‌ಸಿಎ ತಂಡ ಮಹಿಳಾ ವಿಜ್ಞಾನಿಗಳಿಂದ ಕೂಡಿದ್ದಾಗಿದ್ದು, 240 ಎಲ್‌ಸಿಎ ತಯಾರಿಚಾಲ್ತಿಯಲ್ಲಿದೆ. ಇದರಲ್ಲಿ 40 ಎಲ್‌ಸಿಎ ಸ್ವದೇಶಿಯದ್ದಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಇಸ್ರೋ-ಡಿಆರ್‌ಡಿಒನ ಮುಖ್ಯ ಸಂಯೋಜಕಿ, ವಿಜ್ಞಾನಿ ಡಾ. ಮಣಿಮೋಳಿ ಥಿಯೋಡರ್ ಮಾತನಾಡಿ, ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್‌ ಅಭಿವೃದ್ಧಿಯಲ್ಲಿ (ಎಲ್‌ಆರ್‌ಡಿಇ) ಸಂವಹನಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಪಡೆದ ಮೊದಲ ಮಹಿಳೆ ನಾನೆಂಬ ಹೆಮ್ಮೆ ಇದೆ ಎಂದು ತಿಳಿಸಿದರು.

ಬೆಂಗಳೂರಿನ ಇಸ್ರೋ ಸಂಸ್ಥೆಯ ಖ್ಯಾತ ವಿಜ್ಞಾನಿ ಡಾ.ಎನ್. ವಲರ್ಮತಿ ಮಾತನಾಡಿ, ಸಂಶೋಧನೆ, ಆವಿಷ್ಕಾರಗಳ ಹಿಂದಿನ ಶ್ರಮವನ್ನು ಸಮಾಜ ಅರಿಯಬೇಕು. ವಿಜ್ಞಾನಿಗಳ ಸಾಧನೆಯ ವೈಭವವನ್ನು ಆಚರಿಸಬೇಕು ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರು ಮುಂದಾಗಬೇಕು. ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯದೆಡೆಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಬರಬೇಕು ಎಂದರು.

ಸಮ್ಮೇಳನದ ಮೊದಲನೆಯ ದಿನ ಧನ್ವಂತರೀಯಂ (ಆರೋಗ್ಯ, ವೈದ್ಯವಿಜ್ಞಾನ, ಆಯುರ್ವೇದ, ಯುನಾನಿ, ಭಾರತೀಯ ಪಾರಂಪರಿಕ ವೈದ್ಯಪದ್ಧತಿ), ನಾಗಾರ್ಜುನೀಯಂ (ರಸಾಯನಶಾಸ್ತ್ರ, ಜೀವವಿಜ್ಞಾನ, ಪದಾರ್ಥವಿಜ್ಞಾನ), ವಸುಂಧರೀಯಂ (ಭೂವಿಜ್ಞಾನ, ಪರಿಸರ ವಿಜ್ಞಾನ, ಜೀವಜಾಲವಿಜ್ಞಾನ ಮತ್ತುವಿಶ್ವವಿಜ್ಞಾನ), ಪರಾಶರೀಯಂ (ಕೃಷಿ, ತೋಟಗಾರಿಕೆ, ಅರಣ್ಯ, ಪಶುವೈದ್ಯಕೀಯ, ಮೀನುಗಾರಿಕೆ) ವಿಷಯಗಳ ವ್ಯಾಪ್ತಿಯಲ್ಲಿ ಗೋಷ್ಠಿಗಳು ನಡೆದವು. ಸಮ್ಮೇಳನದಲ್ಲಿ 200 ಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳ ಮಂಡನೆಯಾಗಲಿದ್ದು, ಅತ್ಯುತ್ತಮ ನಿರ್ವಹಣೆ ತೋರುವ ಪ್ರಬಂಧಕಾರರಿಗೆ ‘ಯುವವಿಜ್ಞಾನಿ ಪ್ರಶಸ್ತಿʼಹಾಗೂ‘ ಅತ್ಯುತ್ತಮಪ್ರಬಂಧ ಮಂಡನೆʼಪುರಸ್ಕಾರಗಳು ಲಭ್ಯವಾಗಲಿವೆ.

ತುಮಕೂರಿನ ಶ್ರೀದೇವಿ ಚಾರಿಟೆಬಲ್ ಟ್ರಸ್ಟ್‌ನ ಅಂಬಿಕಾ ಹುಲಿನಾಯ್ಕರ್, ಸ್ವದೇಶಿ ವಿಜ್ಞಾನ ಆಂದೋಲನದ ಅಧ್ಯಕ್ಷ ಕ್ಯಾ. ಗಣೇಶ್‌ ಕಾರ್ಣಿಕ್, ಪ್ರಧಾನ ಕಾರ್ಯದರ್ಶಿ ಡಾ. ರಮೇಶ್‌ ಎಚ್., ಸ್ವದೇಶಿ ವಿಜ್ಞಾನ ಆಂದೋಲನ ಮಾತೃ ವೇದಿಕೆಯ ಕೋಶಾಧಿಕಾರಿ ಹಾಗೂ ಅಧ್ಯಕ್ಷೆ ಡಾ. ವೈ.ಎಸ್. ಗಾಯತ್ರಿ, ವಿಜ್ಞಾನಿಗಳಾದ ಡಾ.ವಿ. ಶುಭ, ಡಾ.ಟಿ.ಕೆ. ಅನುರಾಧ, ವಿ.ವಿ. ಉಪಕುಲಸಚಿವೆ ಡಾ. ಮಂಗಳಾಗೌರಿ ಎಂ., ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ, ಡಾ. ಗೀತಾ ವಸಂತ ಇದ್ದರು.ಬಾಕ್ಸ್‌.......ಮಹಿಳಾ ವಿಜ್ಞಾನ ಪುರಸ್ಕಾರ

2023 ನೇ ಸಾಲಿನ ನೋಬಲ್ ಪುರಸ್ಕೃತ ಸರ್ ಸಿ.ವಿ.ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಎಡಿಇ-ಡಿಆರ್‌ಡಿಒನ ಸಹ ನಿರ್ದೇಶಕಿ, ವಿಜ್ಞಾನಿ ಡಾ. ಆಶಾ ಗರ್ಗ್ಅವರಿಗೆ, ನೋಬಲ್ ಪುರಸ್ಕೃತ ಮೇಡಂ ಮೇರಿಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರವನ್ನು ಬೆಂಗಳೂರಿನ ಇಸ್ರೋ-ಡಿಆರ್‌ಡಿಒನ ಮುಖ್ಯ ಸಂಯೋಜಕಿ, ವಿಜ್ಞಾನಿ ಡಾ. ಮಣಿಮೋಳಿ ಥಿಯೋಡರ್‌ ಅವರಿಗೆ ನೀಡಿ ಗೌರವಿಸಲಾಯಿತು.

ಫೋಟೊ:............

ತುಮಕೂರು ವಿ.ವಿ.ಯಲ್ಲಿ ಆಯೋಜಿಸಲಾಗಿದ್ದ 14ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳನದಲ್ಲಿ ನವದೆಹಲಿಯ ಏಮ್ಸ್‌ ನ ಡಾ. ಉಮಾಕುಮಾರ್ ಸಾಧಕರಿಗೆ ಮಹಿಳಾ ವಿಜ್ಞಾನ ಪುರಸ್ಕಾರವನ್ನು ನೀಡಿ ಗೌರವಿಸಿದರು. ಜತೆಗೆ ಇನ್ನಿತರರು ಇದ್ದರು.