ಸಾರಾಂಶ
ಕುಷ್ಟಗಿ: ಬಿಸಿಯೂಟ ಸೇವಿಸಿ 70ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ಅನ್ನ ಸಾಂಬಾರು ಊಟ ಮಾಡಿದ್ದು, ಬಿಸಿಯೂಟದಲ್ಲಿ ವ್ಯತ್ಯಾಸ ಉಂಟಾಗಿ, ವಾಂತಿ ಹಾಗೂ ಕೆಲವರಿಗೆ ಹೊಟ್ಟೆನೋವು ಆರಂಭವಾಗಿದೆ.ವಿದ್ಯಾರ್ಥಿಗಳನ್ನು ಕುಷ್ಟಗಿ, ದೋಟಿಹಾಳ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗಿದೆ.
ದೋಟಿಹಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ದಾಖಲಿಸಲಾಗಿದೆ. ಎಲ್ಲರಿಗೂ ಮಾತ್ರೆ, ಗ್ಲೂಕೋಸ್ ಹಾಗೂ ಒಆರ್‌ಎಸ್ ಪೌಡರ್ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ ಸ್ಥಳೀಯ ಬಿಜಕಲ್ ಗ್ರಾಮದಲ್ಲಿಯೆ ತಾತ್ಕಾಲಿಕ ಕ್ಲಿನಿಕ್ ತೆರೆಯುವ ಮೂಲಕ ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ತಾಲೂಕಾಡಳಿತ ಠಿಕಾಣಿ: ತಾಲೂಕಿನ ಬಿಜಕಲ್ ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ವರಾಗಿರುವ ಮಾಹಿತಿ ಪಡೆದುಕೊಂಡ ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ, ಸಿಪಿಐ ಯಶವಂತ ಬಿಸನಳ್ಳಿ, ಬಿಇಒ ಸುರೇಂದ್ರ ಕಾಂಬಳೆ, ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಗ್ರಾಮಕ್ಕೆ ಆಗಮಿಸಿ ಠಿಕಾಣಿ ಹೂಡಿದ್ದಾರೆ.
ಆರೋಗ್ಯ ವಿಚಾರಿಸಿದ ಬಿಇಒ: ತಾಲೂಕಿನ ದೋಟಿಹಾಳ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಬಿಇಒ ಸುರೇಂದ್ರ ಕಾಂಬಳೆ ಹಾಗೂ ಅಕ್ಷರ ದಾಸೋಹ ಅಧಿಕಾರಿ ಶರಣಪ್ಪ ಮಕ್ಕಳ ಆರೋಗ್ಯ ವಿಚಾರಿಸಿದರು. ಈ ಕುರಿತು ಮುಖ್ಯ ಶಿಕ್ಷಕಿ ಮಂಜುಳಾ ಅವರನ್ನು ವಿಚಾರಿಸಿದಾಗ, ಬಿಸಿಯೂಟದ ಕಾರದ ಪುಡಿಯಲ್ಲಿ ವ್ಯತ್ಯಾಸ ವಾಂತಿ-ಭೇದಿಗೆ ಕಾರಣವಾಗಿದೆ ಎಂದು ಹೇಳುತ್ತಾರೆ.ವಿದ್ಯಾರ್ಥಿಗಳ ಆಕ್ರೋಶ: ನಮ್ಮ ಶಾಲೆಯಲ್ಲಿ ಅಡುಗೆ ಮಾಡುವಾಗ ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ. ಉಪ್ಪಿಟ್ಟಿನಲ್ಲಿ ನುಸಿಯಂತಹ ಸಣ್ಣ ಸಣ್ಣ ಹುಳುಗುಳು ಇರುತ್ತವೆ. ಅನ್ನದಲ್ಲಿ ಹುಳುಗಳು ಕಂಡುಬರುತ್ತಿದ್ದು, ಈ ಕುರಿತು ಶಾಲಾ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಗಮನಕ್ಕೆ ತರಲಾಗಿದ್ದರೂ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ಈ ಕೂಡಲೆ ಅಧಿಕಾರಿಗಳು ಅಡುಗೆದಾರರು ಹಾಗೂ ಮುಖ್ಯಶಿಕ್ಷಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಸೇವನೆಯಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ತಪ್ಪು ಯಾರದು ಎಂದು ಕಂಡು ಹಿಡಿದು ಸೂಕ್ತ ಕ್ರಮಕ್ಕೆ ಮುಂದಾಗುತ್ತದೆ ಎಂದು ಕುಷ್ಟಗಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಹೇಳಿದರು.ಬಿಸಿಯೂಟ ಸೇವನೆಯಿಂದ ಮಕ್ಕಳು ಅಸ್ವಸ್ಥರಾಗಿದ್ದು, ದೋಟಿಹಾಳ ಹಾಗೂ ಕುಷ್ಟಗಿ, ಬಿಜಕಲ್ ಗ್ರಾಮದಲ್ಲಿ ಚಿಕಿತ್ಸಾ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭಯಪಡುವ ಅಗತ್ಯ ಇಲ್ಲ ಎಂದು ಕುಷ್ಟಗಿ ಟಿಎಚ್ಒ ಡಾ. ಆನಂದ ಗೋಟೂರು ಹೇಳಿದರು.ಕುಷ್ಟಗಿ ತಾಲೂಕಿನ ಬಿಜಕಲ್ ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಬಿಸಿಯೂಟ ಸೇವನೆ ಮಾಡಿದ್ದು, ಅದರಲ್ಲಿ ಕೆಲವು ವಿದ್ಯಾರ್ಥಿಗಳಿಗೆ ವಾಂತಿಯಾಗಿದೆ. ಇದು ಕಾರದ ಪುಡಿಯಲ್ಲಿ ವ್ಯತ್ಯಾಸ ಕಂಡು ಬಂದ ಪರಿಣಾಮವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ ಹೇಳಿದರು.