ಸಾರಾಂಶ
ಜೂ. 4ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತಎಣಿಕೆ ಕಾರ್ಯ ಕುಮಟಾ ಬಾಳಿಗಾ ಕಾಲೇಜಿನಲ್ಲಿ ನಡೆಯಲಿದ್ದು, 496 ಸಿಬ್ಬಂದಿ ನಿಯೋಜಿಸಲಾಗಿದೆ.
ಕಾರವಾರ: ಈಗಾಗಲೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದು ಯಂತ್ರಗಳು ಸ್ಟ್ರಾಂಗ್ ರೂಮಿನಲ್ಲಿ ಭದ್ರವಾಗಿದ್ದು, ಜೂ. ೪ರಂದು ಮತಎಣಿಕೆಗೆ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ. ಈ ಬಾರಿಯ ಮತಎಣಿಕೆ ಕಾರ್ಯದಲ್ಲಿ ಒಟ್ಟೂ ೪೯೬ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.
ಒಂದು ಮತ ಎಣಿಕಾ ಕೊಠಡಿಯಲ್ಲಿ ೧೪ ಟೇಬಲ್ ಇರಲಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ೮ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ೧೧೨ ಟೇಬಲ್ ಆಗಲಿದೆ. ಜತೆಗೆ ಅಂಚೆ ಮತಯಂತ್ರಕ್ಕೆ ತಲಾ ೨೦ ಟೇಬಲ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ೧೫೮ ಸೂಪರ್‌ವೈಸರ್, ೧೮೦ ಸಹಾಯಕರು, ೧೫೮ ಮೈಕ್ರೋಆಬ್ಸರ್ವರ್ ನೇಮಕ ಮಾಡಿಕೊಳ್ಳಲಾಗಿದೆ. ೪೦೮ ಇವಿಎಂ, ೮೮ ಜನರು ಅಂಚೆ ಮತ ಎಣಿಕೆ ಕಾರ್ಯ ನಡೆಸಲಿದ್ದಾರೆ. ಒಟ್ಟೂ ೪೯೬ ನಿಯೋಜಿತ ಸಿಬ್ಬಂದಿಯಲ್ಲಿ ಇವಿಎಂಗೆ ೭೨, ಅಂಚೆ ಮತಕ್ಕೆ ೮ ಜನರನ್ನು ಹೆಚ್ಚವರಿ ನೇಮಕ ಮಾಡಿಕೊಳ್ಳಲಾಗಿದೆ.ತರಬೇತಿ: ಮತ ಎಣಿಕೆ ಮಾಡುವ ಸಿಬ್ಬಂದಿಗೆ ೨ ಹಂತದಲ್ಲಿ ತರಬೇತಿ ಕೂಡಾ ಆಯೋಜಿಸಲಾಗಿದ್ದು, ಮೊದಲ ಹಂತ ಮೇ ೨೮ರಂದು ಕುಮಟಾ ಹಾಲಕ್ಕಿ ಒಕ್ಕಲಿಗರ ಸಭಾಭವನ ಹಾಗೂ ಜೂ. ೩ರಂದು ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ನಡೆಯಲಿದೆ. ಬಾಳಿಗಾ ಕಾಲೇಜಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತ್ಯೇಕ ಸ್ಟ್ರಾಂಗ್ ರೂಮ್ ವ್ಯವಸ್ಥೆ ಮಾಡಲಾಗಿದ್ದು, ಜೂ. ೪ರಂದು ಅಲ್ಲಿಯೇ ಮತ ಎಣಿಕೆ ನಡೆಯಲಿದೆ.
ಮತ ಎಣಿಕೆಯ ದಿನ ವಿವಿಧ ಪಕ್ಷಗಳ ಸಾವಿರಾರು ಕಾರ್ಯಕರ್ತರು ಕುಮಟಾದಲ್ಲಿ ಸೇರುತ್ತಾರೆ. ಮತ ಎಣಿಕಾ ಕೇಂದ್ರದ ಸುತ್ತ ನಿಷೇಧಾಜ್ಞೆ ಇರುವುದರಿಂದ ಕುಮಟಾದ ಹೆಗಡೆ ಸರ್ಕಲ್ ವರೆಗೆ ಮಾತ್ರ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ನೂರಾರು ಪೊಲೀಸರು ಮತ ಎಣಿಕಾ ಕೇಂದ್ರದ ಸುತ್ತ ಬಂದೋಬಸ್ತ್ ಒದಗಿಸಿರುತ್ತಾರೆ.ನೇರ ಪೈಪೋಟಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟೂ ೧೩ ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ ಹಾಗೂ ಬಿಜೆಪಿ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ನೇರ ಪೈಪೋಟಿಯಿದೆ. ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎನ್ನುವ ಕುತೂಹಲ ಜನರಲ್ಲಿ ಸಾಕಷ್ಟಿದೆ.
ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ಈಗಾಗಲೇ ಮುಗಿದು ನಾಲ್ಕರಂದು ಮತ ಎಣಿಕೆ ನಡೆಯುವ ಕುಮಟಾದತ್ತ ಜನರ ಚಿತ್ತವಿದೆ. ಜೂ. ೪ರಂದು ಫಲಿತಾಂಶ ಹೊರಬೀಳಲಿದ್ದು, ಎಲ್ಲರ ಕುತೂಹಲಕ್ಕೆ ತೆರೆಬೀಳಲಿದೆ. ಯಾರು ವಿಜಯಪತಾಕೆ ಹಾರಿಸಲಿದ್ದಾರೆ ಎನ್ನುವುದು ತಿಳಿಯಲಿದೆ.