ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಧ್ಯ ಕರ್ನಾಟಕದಲ್ಲಿ ಮೊದಲ ಬಾರಿಗೆ ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದು, ಡಿ.20ರಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ, ನಗರದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಸರ್ಜಿ ಆಸ್ಪತ್ರೆ ಸಮೂಹ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಎದೆಹಾಲಿನ ಬ್ಯಾಂಕ್‌ನಿಂದ ಮಗುವಿನ ತಾಯಿ ಅನಾರೋಗ್ಯಕ್ಕೆ ಒಳಗಾದಾಗ, ತಾಯಿಗೆ ಎದೆ ಹಾಲು ಕೊರತೆಯಾದಾಗ, ಅನಾಥ ಮಗು, ಅವಧಿ ಪೂರ್ವ ಜನಿಸಿದ ಮಗು ಹೆಚ್ಚಿನ ಸಮಯ ಆಸ್ಪತ್ರೆಯಲ್ಲಿ ಇರುವಾಗ ಒಟ್ಟಾರೆ ತನ್ನ ಹೆತ್ತ ತಾಯಿಯಿಂದ ಸೂಕ್ತ ಕಾಲಕ್ಕೆ ಹಾಲನ್ನು ಕುಡಿಯಲಾಗದ ಮಗುವಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ತಿಳಿಸಿದರು.
ಎಲ್ಲ ಮಗುವಿಗೂ ದೊರೆಯಬೇಕು:ಅಂಕಿ ಅಂಶಗಳ ಪ್ರಕಾರ ಶೇ.46ರಷ್ಟು ನವಜಾತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯಪಾನವಾಗುತ್ತಿಲ್ಲ ಎಂದು ತಿಳಿದುಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ ಆಗಿರಬಹುದು. ಇವೆಲ್ಲದರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಪ್ರಾಮುಖ್ಯತೆ ಅರಿತೇ ಎಲ್ಲ ಮಗುವಿಗೂ ತಾಯಿಂದಿರ ಎದೆಹಾಲು ದೊರೆಯಬೇಕೆಂಬ ಉದ್ದೇಶದಿಂದ ಎದೆಹಾಲಿನ ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಇಲ್ಲವೆಂಬ ಕೊರಗು ನೀಗಿತು:ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಇಂತಹ ಮಿಲ್ಕ್ ಬ್ಯಾಂಕ್ ಸ್ಥಾಪನೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಬೆಳಗಾವಿ, ಮಂಗಳೂರು, ಧಾರವಾಡದಂತಹ, ನಗರದಲ್ಲಿ ತಾಯಂದಿರ ಎದೆಹಾಲಿನ ಸ್ಥಾಪನೆಗೊಂಡಿವೆ. ಕರ್ನಾಟಕದ ಮಧ್ಯ ಭಾಗದ ಬಯಲುಸೀಮೆ ಮತ್ತು ಮಲೆನಾಡ ಹೆಬ್ಬಾಗಿಲಾಗಿರುವ ಶಿವಮೊಗ್ಗದಂತಹ ಪ್ರಮುಖ ಸ್ಥಳದಲ್ಲಿ ಬ್ಯಾಂಕ್ ಕೊರತೆ ಕಾಡುತ್ತಿತ್ತು. ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎದೆಹಾಲಿನ ಬ್ಯಾಂಕ್ ಇಲ್ಲ. ಈ ಕೊರತೆಯನ್ನು ನೀಗಿಸಲು ಹಾಗೂ ನವಜಾತ ಶಿಶುಗಳಿಗೆ ಪ್ರಯೋಜನ ಆಗಲೆಂದೇ ರೋಟರಿ ಗ್ಲೋಬಲ್ ಗ್ರ್ಯಾಂಟ್ ಹಾಗೂ ಸರ್ಜಿ ಆಸ್ಪತ್ರೆ ನೆರವಿನೊಂದಿಗೆ ತಾಯಂದಿರ ಎದೆಹಾಲಿನ ಮಿಲ್ಕ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಶಿವಮೊಗ್ಗದ ಖ್ಯಾತ ವೈದ್ಯರಾದ ಡಾ. ಪಿ.ನಾರಾಯಣ್, ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ. ಶಿವರಾಜ್, ಜೆ.ಪಿ.ಚಂದ್ರು, ಕಿರಣ್ ಕುಮಾರ್, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಪ್ರಶಾಂತ್ , ಡಾ.ವಿಶ್ವನಾಥ್ ಉಪಸ್ಥಿತರಿದ್ದರು.- - - ಬಾಕ್ಸ್ ಅಮೃತ ಬಿಂದು ಡಿ.20ರಂದು ಬೆಳಗ್ಗೆ 11 ಗಂಟೆಗೆ ಅಮೃತ ಬಿಂದು ಹೆಸರಿನಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್‌ನ್ನು ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರು ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ, ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಆಶಾ ಬೆನಕಪ್ಪ ಆಗಮಿಸುವರು ಎಂದರು. ಶಿವಮೊಗ್ಗದ ಖ್ಯಾತ ವೈದ್ಯರಾದ ಡಾ. ಪಿ.ನಾರಾಯಣ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಜೀ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ ಹಾಗೂ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಭಾಗವಹಿಸುವರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ.ಶಿವರಾಜ್ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
- - - -18ಎಸ್‌ಎಂಜಿಕೆಪಿ03:ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ತಾಯಂದಿರ ಎದೆಹಾಲಿನ ಬ್ಯಾಂಕ್ ವ್ಯವಸ್ಥೆ.