ತಾಯಿ ಎದೆಹಾಲು ದ್ರವರೂಪದ ಬಂಗಾರ: ಡಾ. ಆಶಾ ಬೆನಕಪ್ಪ

| Published : Dec 25 2023, 01:32 AM IST

ತಾಯಿ ಎದೆಹಾಲು ದ್ರವರೂಪದ ಬಂಗಾರ: ಡಾ. ಆಶಾ ಬೆನಕಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಹಡೆಯುವ ತಾಯಂದಿರಿಗೆ ತಮ್ಮ ಎದೆಹಾಲು ಶಿಶುವಿಗೆ ದ್ರವರೂಪದ ಬಂಗಾರ ಎಂಬುದೇ ಮರೆತಿರುತ್ತಾರೆ. ಮಗುವಿನ ಸಮಗ್ರ ಆರೋಗ್ಯಾಭಿವೃದ್ಧಿಗೆ ಈ ಎದೆ ಹಾಲೇ ಮೂಲಾಧಾರ ಆಗಿರುತ್ತದೆ ಎಂದು ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ದ್ರವರೂಪದ ಬಂಗಾರದಷ್ಟು ಮಹತ್ವದ್ದಾಗಿದೆ. ಮಗುವಿನ ಸಮಗ್ರ ಆರೋಗ್ಯಾಭಿವೃದ್ಧಿಗೆ ಇದೇ ಮೂಲಾಧಾರ ಎಂದು ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ ಹೇಳಿದರು.

ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಹೆರಿಗೆಯಾ 1 ಗಂಟೆಯೊಳಗೆ ಶಿಶುವಿಗೆ ತಾಯಿ ಎದೆಹಾಲು ಕುಡಿಸಲು ಆರಂಭಿಸಬೇಕು. ತಾಯಿಯ ಎದೆಹಾಲು ಎನ್ನುವುದು ಶಿಶುವಿಗೆ ದೇವರು ನೀಡಿರುವ ಒಂದು ವರ ಎನ್ನುವುದನ್ನು ಪ್ರತಿ ಪೋಷಕರೂ ಅರಿಯಬೇಕು ಎಂದರು.

ಸಾಮಾನ್ಯವಾಗಿ ಗಂಡುಮಗು ಜನಿಸಿದರೆ, ಹೆಣ್ಣುಮಗು ಜನಿಸಿದರೆ ಹಾಗೂ ಅವಳಿ ಮಕ್ಕಳು ಜನಿಸಿದರೆ ತಾಯಿಯ ಎದೆಯಲ್ಲಿ ಉತ್ಪಾದನೆ ಆಗುವ ಹಾಲಿನ ವೈಶಿಷ್ಟ್ಯ ಬೇರೆಯದೇ ಆಗಿರುತ್ತದೆ. ಜನಿಸುವ ಶಿಶುವಿನ ಲಿಂಗಕ್ಕೆ ತಕ್ಕಂತೆ ಹಾಲು ಉತ್ಪಾದನೆ ಆಗುವುದು ಪ್ರಕೃತಿ ನೀಡಿರುವ ವರ. ಅಲ್ಲದೇ, ಇದೊಂದು ಅದ್ಭುತ ರಹಸ್ಯವಾಗಿದೆ. ಇದು ವಿಜ್ಞಾನಕ್ಕೆ ಮೀರಿದ, ಆತ್ಯಾಧುನಿಕದಂಥ ದೇಹದ ರಚನೆಯಾಗಿದೆ ಎಂದರು.

ದೇಹದಲ್ಲಿ ಆಕ್ಸಿಟೋಸಿನ್‌:

ಮಗುವಿನ ಬಾಯಿ ತಾಯಿಯ ನಿಪ್ಪಲ್‌ಗೆ ಸ್ಪರ್ಶವಾದಾಗ ದೇಹದಲ್ಲಿ ಆಕ್ಸಿಟೋಸಿನ್ ಉತ್ಪಾದನೆ ಆಗುತ್ತದೆ. ಬಹಳಷ್ಟು ಮಂದಿ ಮಗುವಿನ ಕ್ಯಾಪ್ ಹಾಕುತ್ತಾರೆ. ಆದರೆ, ಅದನ್ನೆಲ್ಲಾ ಹಾಕಬಾರದು. ತಾಯಿ ಹಾಗೂ ಶಿಶುವಿನ ಚರ್ಮ ಸ್ಪರ್ಶದಿಂದ ಬಾಂಧವ್ಯ ಬೆಳೆದು, ಉತ್ತಮ ಆರೋಗ್ಯಕ್ಕೆ ಪೂರಕವಾಗುತ್ತದೆ. ಮೊದಲ ದಿನ 5 ಎಂಎಲ್, ಎರಡನೆಯ ದಿನ 10 ಎಂಎಲ್‌ನಂತೆ 5ನೆಯ ದಿನಕ್ಕೆ 55 ಎಂಎಲ್ ಹಾಲನ್ನು ಕುಡಿಸಬೇಕು ಎಂದು ಮಾಹಿತಿ ನೀಡಿದರು.

ಶಿಶುವಿಗೆ ಎದೆಹಾಲು ಉಣಿಸುವುದರಿಂದ ತಾಯಿಗೆ ಹಲವಾರು ಪ್ರಯೋಜನಗಳಿವೆ. ತಾಯಿಗೆ ಹೆರಿಗೆಯ ನಂತರ ರಕ್ತಸ್ರಾವ ಮತ್ತು ರಕ್ತಹೀನತೆಯ ಅಪಾಯ ಕಡಿಮೆಯಾಗುತ್ತದೆ. ಸ್ತನ್ಯಪಾನವು ಗರ್ಭಧಾರಣೆಯ ಪೂರ್ವ ದೇಹದ ತೂಕವನ್ನು ಮೊದಲೇ ಮರಳಿ ಪಡೆಯಲು ಸಹಾಯ ಮಾಡುತ್ತದೆಯಲ್ಲದೇ, ತಾಯಿಯಲ್ಲಿ ಸ್ತನಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಆಸ್ಟಿಯೊ ಪೊರೋಸಿಸ್ ಬೆಳವಣಿಗೆ ಅಪಾಯ ಕಡಿಮೆ ಮಾಡುತ್ತದೆ ಎಂದರು.

ಅದೇ ರೀತಿ, ಎದೆಹಾಲು ಕುಡಿಯುವ ಶಿಶುವಿನಲ್ಲಿ ಕಿವಿಯ ಉರಿಯೂತ ಮಾಧ್ಯಮ, ಗ್ಯಾಸ್ಟ್ರೋ ಎಂಟರೈಟಿಸ್, ನ್ಯುಮೋನಿಯಾದಂತಹ ಸೋಂಕುಗಳ ಸಂಭವ ಕಡಿಮೆಯಾಗಿದೆ. ಅತಿಸಾರದಿಂದ ಸಾವಿನ ಅಪಾಯವನ್ನು 14 ಪಟ್ಟು ಮತ್ತು ತೀವ್ರವಾದ ಉಸಿರಾಟದ ಸೋಂಕಿನಿಂದ 4 ಪಟ್ಟು ಕಡಿಮೆ ಮಾಡುತ್ತದೆ ಎಂದು ಅಂಕಿ ಅಂಶ ಸಹಿತ ವಿವರಿಸಿದರು.

ಕಾರ್ಯಾಗಾರದಲ್ಲಿ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಡಾ.ವಿನಾಯಕ್, ಮಕ್ಕಳ ಚಿಕಿತ್ಸಾ ವಿಭಾಗದ ಎಚ್ಒಡಿ ಡಾ.ವಿಕ್ರಂ, ಹಿರಿಯ ಪ್ರಾಧ್ಯಾಪಕ ಡಾ.ಮಂಜುನಾಥ ಸ್ವಾಮಿ, ಸಿಮ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ.ಸುನಿತಾ, ಮಕ್ಕಳ ಚಿಕಿತ್ಸೆ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

- - - -ಫೋಟೋ:

ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ ಮಾತನಾಡಿದರು.