ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದೆ. ತಾಯಿಯ ಮೊದಲ ಎದೆಹಾಲಿನಲ್ಲಿ ಕೊಲೆಸ್ಟ್ರಮ್ ಎಂಬ ಗಿಣ್ಣುಹಾಲಿದ್ದು, ಇದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ತಿಳಿಸಿದರು.ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದೆ. ತಾಯಿಯ ಮೊದಲ ಎದೆಹಾಲಿನಲ್ಲಿ ಕೊಲೆಸ್ಟ್ರಮ್ ಎಂಬ ಗಿಣ್ಣುಹಾಲಿದ್ದು, ಇದರಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಅವರು ತಿಳಿಸಿದರು. ಚಾಮರಾಜನಗರದಲ್ಲಿ ಹಮ್ಮಿಕೊಂಡ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾಸ್ಪತ್ರೆಯಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿದ ಮಗುವಿಗೆ ಒಂದು ಗಂಟೆಯೊಳಗೆ ತಾಯಿ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಬೇಕು. ತಾಯಿಯ ಎದೆಹಾಲು ಅಮೃತಕ್ಕೆ ಸಮ. ಮೊದಲ ಎದೆಹಾಲಿನಲ್ಲಿ ಕೊಲೆಸ್ಟ್ರಮ್ ಎಂಬ ಗಿಣ್ಣುಹಾಲು ಬರುತ್ತದೆ. ಇದರಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಇದೆ. ಸ್ತನ್ಯಪಾನ ಕಾರ್ಯಕ್ರಮ ಅಭಿಯಾನ ಮಾದರಿಯಲ್ಲಿ ಆಚರಣೆಯಾಗಬೇಕು. ಜನರಿಗೆ ತಾಯಿಯ ಎದೆಹಾಲಿನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಕಿವಿ ಮಾತು ಹೇಳಿದರು.ಇತ್ತೀಚಿನ ದಿನಗಳಲ್ಲಿ ತಾಯಂದಿರಿಗೆ ಎದೆಹಾಲು ಕುಡಿಸುವುದರಿಂದ ತಮ್ಮ ಸೌಂದರ್ಯ ಹಾಳಾಗಲಿದೆ ಎಂಬ ತಪ್ಪು ಕಲ್ಪನೆ ಇದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮಗುವಿನ ಬೌದ್ಧಿಕ ಮತ್ತು ಶಾರೀರಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಎದೆಹಾಲು ಕುಡಿಸುವುದರಿಂದ ಅನೇಕ ಮಾರಕ ರೋಗಗಳನ್ನು ತಡೆಗಟ್ಟಬಹುದು. ಹುಟ್ಟಿದಾಗಿನಿಂದ ಕನಿಷ್ಠ ಆರು ತಿಂಗಳವರೆಗೆ ತಾಯಿ ಎದೆಹಾಲು ಮಾತ್ರ ಕುಡಿಸಬೇಕು. ನಂತರ ಪೂರಕ ಆಹಾರದ ಜೊತೆ ಎರಡು ವರ್ಷದ ತನಕ ಎದೆಹಾಲನ್ನು ಕಡ್ಡಾಯವಾಗಿ ಕುಡಿಸಬೇಕು ಎಂದು ಡಾ.ಚಿದಂಬರ ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಪ್ರಸಾದ್ ಮಾತನಾಡಿ, ಪ್ರತಿ ವರ್ಷ ಆಗಸ್ಟ್ ಮೊದಲ ವಾರ ವಿಶ್ವ ಸ್ತನ್ಯಪಾನ ಸಪ್ತಾಹ ಆಚರಿಸಿಕೊಂಡು ಬರಲಾಗುತ್ತಿದೆ. ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ತಾಯಿಯ ಎದೆಹಾಲು ಅತಿಮುಖ್ಯ. ಕೆಲವರು ಹುಟ್ಟಿದಾಗ ಗಿಣ್ಣುಹಾಲು ಕುಡಿಸದೆ ಜೇನುತುಪ್ಪ ತಿನ್ನಿಸುವುದು, ನೀರು ಕುಡಿಸುವುದು, ಇನ್ನಿತರೆ ಕ್ರಮಗಳನ್ನು ಅನುಸರಿಸುತ್ತಾರೆ. ಇದು ಮಗುವಿನ ಆರೋಗ್ಯ ಮೇಲೆ ದುಷ್ಟರಿಣಾಮ ಬೀರಲಿದೆ ಎಂದರು.ಮಗುವಿಗೆ ಮೊದಲ ಒಂದು ಗಂಟೆ ಸುವರ್ಣ ಕಾಲವಾಗಿರುತ್ತದೆ. ಈ ಸಮಯದಲ್ಲಿ ತಪ್ಪದೇ ಮಗುವಿಗೆ ಎದೆಹಾಲನ್ನು ಕುಡಿಸಬೇಕು. ವಿಶ್ವದಾದ್ಯಂತ ಶೇ.೪೦ ರಷ್ಟು ಜನರು ಮಾತ್ರ ಎದೆಹಾಲನ್ನು ನೀಡುತ್ತಿದ್ದಾರೆ. ಆದ್ದರಿಂದ ಎದೆಹಾಲು ಕುಡಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತಿದೆ ಎಂದು ಕೃಷ್ಣಪ್ರಸಾದ್ ತಿಳಿಸಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ನವೀನ್‌ಚಂದ್ರ ಮಾತನಾಡಿ, ಭಾರತದಲ್ಲಿ ತಾಯಿಂದರು ಎದೆಹಾಲು ಕುಡಿಸುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದು ಕಡಿಮೆ. ಎದೆಹಾಲು ಕುಡಿಸುವುದರಿಂದ ತಾಯಿ, ಮಗುವಿನ ಬಾಂಧವ್ಯ ಉತ್ತಮವಾಗಿರುತ್ತದೆ. ತಾಯಿ ಎದೆಹಾಲು ಕುಡಿಸುವುದರಿಂದ ಎದೆಯ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟಬಹುದು. ಇತ್ತೀಚಿನ ದಿನಗಳಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಮಿಲ್ಕ್ ಬ್ಯಾಂಕ್ ಸ್ಥಾಪಿಸಲಾಗಿದೆ. ಇಲ್ಲಿ ಎದೆಹಾಲು ಹೆಚ್ಚು ಉತ್ಪತ್ತಿಯಾಗುವ ತಾಯಿಂದಿರು ಈ ಬ್ಯಾಂಕಿನಲ್ಲಿ ನೀಡಿದರೆ ಅವಶ್ಯಕತೆ ಇರುವ ಮಕ್ಕಳಿಗೆ ನೀಡಲಾಗುವುದು ಎಂದರು.ಡಾ.ವಿದ್ಯಾಸಾಗರ್, ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಸುಗುಣ, ಡಾ.ಲಕ್ಷ್ಮೀ, ಡಾ.ಪ್ರದೀಪ್ ಕುಮಾರ್, ಜಿಲ್ಲಾ ಶುಶ್ರೂಷಕ ಅಧಿಕಾರಿ ಶಾಂತಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿನಾಯಕ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಕ್ಷೇತ್ರ ಸ್ವಯಂ ಸೇವಕರಾದ ಮಂಜು ಇತರರು ಉಪಸ್ಥಿತರಿದ್ದರು.