ಸಾರಾಂಶ
ಸವಣೂರು ಪಟ್ಟಣದ ಅತಿದೊಡ್ಡ ಕೆರೆಯಾದ ಮೋತಿತಲಾಬ್ ಕೆರೆ ಒಡ್ಡು ಒಡೆಯುವ ಆತಂಕ ಉಂಟಾಗಿದೆ. ಕೆರೆಯ ಒಡ್ಡಿನಿಂದ ನೀರು ಜಿನುಗುತ್ತಿದೆ. ರೈತರು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸವಣೂರು: ನವಾಬ ನಗರಿಯ ಐತಿಹ್ಯವುಳ್ಳ ನೂರಾರು ವರ್ಷ ಇತಿಹಾಸ ಸಾರುವ ಮೋತಿ ತಲಾಬ ಕೆರೆ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಒಡ್ಡು ಜಿನುಗಿ ರೈತರು, ಸ್ಥಳೀಯ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಕೋಡಿ ಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಜಿಲ್ಲೆಯ ಅತಿದೊಡ್ಡ ಕೆರೆಗಳ ಸಾಲಿನಲ್ಲಿ ಬರುವ ಸುಮಾರು ೧೯೦ ಎಕರೆ ವಿಸ್ತೀರ್ಣದ ಪಟ್ಟಣದ ಮೋತಿ ತಲಾಬ್ ನಿರಂತರ ಮಳೆಗೆ ತುಂಬಿ ಕೋಡಿ ಬೀಳುವ ಹಂತದಲ್ಲಿದೆ. ಕೆರೆದಂಡೆ ಸುತ್ತಲು ಪಿಚ್ಚಿಂಗ್ ಇಲ್ಲ, ಕೆರೆ ನಿರ್ವಹಣೆ ಇಲ್ಲದ ಕಾರಣ ಶತಮಾನ ಕಂಡ ದೊಡ್ಡಕೆರೆ ವಿಷ್ಣುತೀರ್ಥ ಹಾದಿಯಲ್ಲಿ ಮಂಗಳವಾರ ಸಂಜೆಯಿಂದ ಸಣ್ಣದಾಗಿ ನೀರು ಹೊರ ಸೂಸುತ್ತಲಿತ್ತು. ಇದನ್ನು ಕಂಡ ರೈತ ಸಂಘದ ಪದಾಧಿಕಾರಿಗಳು ಕೂಡಲೇ ಅಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗೆ ಒತ್ತಾಯಿಸಿದ್ದಾರೆ.ತಹಸೀಲ್ದಾರ್ ಭರತರಾಜ್ ಕೆ.ಎನ್. ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲಿಸಿದರು. ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಕೆರೆ ಒಡ್ಡು ರಕ್ಷಣೆಗೆ ಅವಶ್ಯ ಕಾಮಗಾರಿ ಆರಂಭಿಸಲು ಸೂಚಿಸಿದರು. ಅಧಿಕಾರಿಗಳು ಕಾರ್ಮಿಕರ ತಂಡದೊಂದಿಗೆ ಆಗಮಿಸಿ ರಾತ್ರಿ ಹೊರ ಸೂಸುತ್ತಿದ್ದ ನೀರನ್ನು ತಡೆಯಲು ಪ್ರಯತ್ನಿಸಿದ್ದಾರೆ.
ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸ್ಥಳಕ್ಕೆ ಭೆಟ್ಟಿ ನೀಡಿ ಪರಿಶೀಲನೆ ಕೈಗೊಂಡರು. ಆನಂತರ ಮಾತನಾಡಿ, ಈಗಾಗಲೇ ನೀರಾವರಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಯಾವುದೇ ರೀತಿಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಕೆರೆಯ ವಿಸ್ತೀರ್ಣ ಹೆಚ್ಚಿದೆ. ಕೆರೆ ಸುತ್ತಲೂ ಕೂಡಲೇ ಕಾಮಗಾರಿಯನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.ತಹಸೀಲ್ದಾರ್ ಭರತರಾಜ್ ಕೆ.ಎನ್., ತಾಪಂ ಇಒ ನವೀನಪ್ರಸಾದ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಮುಖ್ಯ ಎಂಜಿನಿಯರ್ ನಾಗರಾಜ ಮಿರ್ಜಿ, ರೈತ ಸಂಘದ ಪದಾಧಿಕಾರಿ ಸಂಗಮೇಶ ಪೀತಾಂಭ್ರಶೆಟ್ಟಿ ಹಾಗೂ ಇತರರು ಇದ್ದರು.