ಸಣ್ಣ ಕೈಗಾರಿಕೆಗಳ ಆರ್ಥಿಕ ಶಿಸ್ತಿಗೆ ಐಸಿಎಐಯೊಂದಿಗೆ ಒಡಂಬಡಿಕೆ
KannadaprabhaNewsNetwork | Published : Oct 13 2023, 12:15 AM IST
ಸಣ್ಣ ಕೈಗಾರಿಕೆಗಳ ಆರ್ಥಿಕ ಶಿಸ್ತಿಗೆ ಐಸಿಎಐಯೊಂದಿಗೆ ಒಡಂಬಡಿಕೆ
ಸಾರಾಂಶ
ದಕ್ಷಿಣ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್‌ಗಳ 55ನೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಸ್ಮರಣ ಸಂಚಿಕೆ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಹೊಸಪೇಟೆ: ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ ಆರ್ಥಿಕ ಶಿಸ್ತು ತರಲು ಸಣ್ಣ ಕೈಗಾರಿಕೆಗಳ ಸಚಿವಾಲಯದಿಂದ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್(ಐಸಿಎಐ) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಚರ್ಚೆ ನಡೆದಿದ್ದು, ಶೀಘ್ರವೇ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ರಾಜ್ಯ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಐಸಿಎಐಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ(ಎಸ್‌ಐಆರ್‌ಸಿ) ಬಳ್ಳಾರಿ ಶಾಖೆಯ ಆಶ್ರಯದಲ್ಲಿ ನಗರದಲ್ಲಿ ಆಯೋಜಿಸಿರುವ ಎರಡು ದಿನಗಳ “ಜ್ಞಾನ ಸಂಪನ್ನ- ಅರಿವಿನಿಂದ ವಿಕಾಸದೆಡೆಗೆ” ದಕ್ಷಿಣ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್‌ಗಳ 55ನೇ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು. ಸಣ್ಣ ಕೈಗಾರಿಕೆಗಳು ರಾಜ್ಯ ಮತ್ತು ರಾಷ್ಟ್ರದ ಆರ್ಥಿಕ ಬೆನ್ನೆಲುಬಾಗಿವೆ. ಆದರೆ ಹಲವು ಕೈಗಾರಿಕೆಗಳಿಗೆ ಆರ್ಥಿಕ ನಿಯಮಗಳ ಅರಿವಿಲ್ಲ. ಆರ್ಥಿಕ ಶಿಸ್ತು ಅನುಸರಿಸುತ್ತಿಲ್ಲ. ಚಾರ್ಟರ್ಡ್ ಅಕೌಂಟೆಂಟ್‌ಗಳು ಸರಿ ತಪ್ಪನ್ನು ಕಂಡು ತಿದ್ದುವವರು. ಅವರ ತಜ್ಞ ಕೌಶಲ್ಯ ಸಣ್ಣ ಕೈಗಾರಿಕೆಗಳಿಗೆ ಸಹಕಾರಿಯಾಗುತ್ತವೆ. ಐಸಿಎಐ ಜತೆಗಿನ ಒಪ್ಪಂದದ ರೂಪುರೇಷೆ ಅಂತಿಮ ಹಂತದಲ್ಲಿದ್ದು, ಶೀಘ್ರ ಕಾರ್ಯಗತಗೊಳ್ಳಲಿದೆ ಎಂದರು. ಕರ್ನಾಟಕದತ್ತ ವಿಶ್ವದ ನೋಟ: ಭಾರತ ಎಲ್ಲ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದೆ. ಎಲ್ಲ ವಲಯದಲ್ಲಿ ಛಾಪು ಮೂಡಿಸುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕ ಕೂಡ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದೆ. ಜನಕಲ್ಯಾಣ ಯೋಜನೆಗಳಲ್ಲಿ ಕರ್ನಾಟಕ ರಾಷ್ಟ್ರಕ್ಕೆ ಮಾದರಿಯಾಗಿದೆ. ಕೈಗಾರಿಕೆ ಉದ್ಯಮ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದರಲ್ಲೂ ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರು ದೇಶ ಮಾತ್ರವಲ್ಲ, ಇಡೀ ವಿಶ್ವದ ಗಮನ ಸೆಳೆಯುತ್ತಿದೆ ಎಂದರು. ಐಸಿಎಐ ಅಧ್ಯಕ್ಷ ಸಿಎ ಅನಿಕೇತ್ ಸುನೀಲ್ ತಲಾಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್‌ಗಳ ವ್ಯಾಪ್ತಿ ಬಹಳ ತ್ವರಿತವಾಗಿ ವಿಸ್ತರಿಸುತ್ತಿದೆ. ಲೆಕ್ಕಪರಿಶೋಧನೆಯಲ್ಲಿ ತಂತ್ರಜ್ಞಾನ ಬಳಕೆಗೆ ಐಸಿಎಐ ಒತ್ತು ನೀಡುತ್ತಿದೆ. ಸುಮಾರು ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಐಸಿಎಐ ಸದಸ್ಯರಾಗಿದ್ದು, ಅವರಿಗೆ ಕೇವಲ ಆಡಿಟ್ ಜ್ಞಾನವನ್ನು ನೀಡದೇ ಕಲಿಕೆಯ ಹರಿವನ್ನು ವಿಸ್ತರಿಸಿ ಅವರು ಲೆಕ್ಕಕ್ಕೆ ಸಂಬಂಧಿಸಿದ ಹುದ್ದೆಗೆ ಮಾತ್ರ ಸೀಮಿತಗೊಳ್ಳದೇ ಸಿಇಒ, ಎಂಡಿ ಹುದ್ದೆಯನ್ನೂ ನಿರ್ವಹಿಸುವ ಸಾಮರ್ಥ್ಯ ಹೊಂದುವಂತೆ ಪ್ರಯತ್ನಿಸಲಾಗುತ್ತಿದೆ ಎಂದರು. ಗ್ರಾಮೀಣ ಮಟ್ಟದ ಆಡಳಿತದಲ್ಲಿ ಆರ್ಥಿಕ ಶಿಸ್ತನ್ನು ಸುಧಾರಿಸಲು ಐಸಿಎಐ, ಕೇಂದ್ರ ಲೆಕ್ಕಪರಿಶೋಧನಾ ಸಂಸ್ಥೆ ಸಿಎಜಿ ಜತೆಗೆ ಒಪ್ಪಂದಕ್ಕೆ ಮಾತುಕತೆ ನಡೆಸುತ್ತಿದೆ. ಸದ್ಯ ಸರ್ಕಾರದ ಬೃಹತ್ ಹಣಕಾಸು ವ್ಯವಹಾರಗಳ ಮೇಲೆ ನಿಗಾ ಇಡಲು ಸಿಎಜಿಯಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಐಸಿಎಐ ತನ್ನ ಕೌಶಲ್ಯವನ್ನು ಒದಗಿಸಲು ಸಿದ್ಧ ಇದೆ ಎಂದರು. ಐಸಿಎಐ ಕಾರ್ಯದರ್ಶಿ ಸಿಎ ರಂಜಿತ್ ಕುಮಾರ್ ಅಗರವಾಲ್ ಮಾತನಾಡಿ, ಭಾರತ ಆರ್ಥಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಿ ಬೆಳೆಯುತ್ತಿದೆ. 2049ರ ವೇಳೆಗೆ ಭಾರತದ ಆರ್ಥಿಕತೆ ಬೃಹದಾಕಾರವಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಆಗ ಭಾರತಕ್ಕೆ 40 ಲಕ್ಷ ಸಿಎಗಳ ಅಗತ್ಯವಿದೆ. ಈ ಗುರಿಯನ್ನು ತಲುಪಲು ಐಸಿಎಐ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುತ್ತಿದೆ ಎಂದರು. ಎಸ್‌ಆರ್‌ಐಸಿ ಅಧ್ಯಕ್ಷ ಎಸ್. ಪನ್ನರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಭವ್ಯ ನೆಲದಲ್ಲಿ ಈ ಐತಿಹಾಸಿಕ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ. ದೇಶದ ವಿವಿಧ ಭಾಗಗಳಿಂದ 2000 ಸಿಇಒಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಸಮಾವೇಶ ಎರಡು ದಿನಗಳವರೆಗೆ ನಡೆಯಲಿದ್ದು, ಹಂಪಿ ಸ್ಮಾರಕಗಳನ್ನು ಕೂಡ ಪ್ರತಿನಿಧಿಗಳು ವೀಕ್ಷಣೆ ಮಾಡಲಿದ್ದಾರೆ. ಹಾಗಾಗಿ ಇದೊಂದು ಅವಿಸ್ಮರಣೀಯ ಸಮಾವೇಶವಾಗಿದೆ ಎಂದರು. ಕಾರ್ಯದರ್ಶಿ ಎ.ವಿ. ಅರುಣ್, ಉಪಾಧ್ಯಕ್ಷ ಎಸ್. ಗೀತಾ, ಸಂಘದ ಪದಾಧಿಕಾರಿಗಳಾದ ಅರುಣ್, ಸುನೀಲ್ ಮಂಡವಾ, ಶ್ರೀನಿವಾಸ್, ರಾಜೇಂದ್ರ ಕುಮಾರ, ಬಳ್ಳಾರಿ ಶಾಖೆ ಅಧ್ಯಕ್ಷ ನಾಗನಗೌಡ ಕೆ., ಪುರುಷೋತ್ತಮ್ ರೆಡ್ಡಿ ಮತ್ತಿತರರಿದ್ದರು. ದಕ್ಷಿಣ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು ಎರಡು ಸಾವಿರ ಮಂದಿ ಚಾರ್ಟರ್ಡ್ ಅಕೌಂಟೆಂಟ್‌ಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.