ಬಲಿಜ ಸಮುದಾಯ 2ಎಗೆ ಸೇರಿಸಲು ಒತ್ತಾಯಿಸಿ ಚಳವಳಿ

| Published : Dec 02 2023, 12:45 AM IST

ಸಾರಾಂಶ

ರಾಮನಗರ: ಮುಂಬರುವ ಲೋಕಾಸಭಾ ಚುನಾವಣೆ ಒಳಗೆ ಬಲಿಜ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ಪ್ರವರ್ಗ 2ಎ ಗೆ ಸೇರ್ಪಡೆ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಚಳವಳಿ ರೂಪಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ತಿಳಿಸಿದರು.

ರಾಮನಗರ: ಮುಂಬರುವ ಲೋಕಾಸಭಾ ಚುನಾವಣೆ ಒಳಗೆ ಬಲಿಜ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ಪ್ರವರ್ಗ 2ಎ ಗೆ ಸೇರ್ಪಡೆ ಮಾಡಲು ಒತ್ತಾಯಿಸಿ ರಾಜ್ಯಾದ್ಯಂತ ಚಳವಳಿ ರೂಪಿಸಲು ಚಿಂತನೆ ನಡೆದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ದ್ವಾರಕನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ 2 ಎ ವರ್ಗದಡಿ ಮೀಸಲಾತಿ ಮರು ಸ್ಥಾಪಿಸಲು ರಾಜ್ಯಸರ್ಕಾರ ವಿಳಂಬ ಮಾಡುತ್ತಿವೆ. ಈಗಲೂ ಸರ್ಕಾರ ಸ್ಪಂದಿಸದಿದ್ದರೆ ತಾಲೂಕು ಮಟ್ಟದಿಂದ ಹೋರಾಟ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಎಚ್ಚರಿಸಿದರು.

ಬಲಿಜ ಸಮುದಾಯವನ್ನು ಪ್ರವರ್ಗ 2ಎ ನಲ್ಲಿ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಕೇಳುತ್ತಿದ್ದೇವೆ. ಆದರೆ, ಸರ್ಕಾರ ಬೇರೆ ಸಮುದಾಯದವರು ಕೇಳುತ್ತಾರೆಂಬ ಸಬೂಬು ಹೇಳುತ್ತಿದೆ. ಅದಕ್ಕೂ ನಮಗೂ ಸಂಬಂಧ ಇಲ್ಲ. ನಾವು ಹೊಸದಾಗಿ ಸೇರಿಸಿ ಅನ್ನುತ್ತಿಲ್ಲ. ನಮ್ಮ ಸಮುದಾಯವನ್ನು ಯಥಾಸ್ಥಿತಿ ಮುಂದುವರೆಸುವಂತೆ ಕೇಳುತ್ತಿದ್ದೇವೆ.

ಕೊಟ್ಟ ಮಾತು ಈಡೇರಿಸಿ:

ಎಲ್ಲ ಸರ್ಕಾರಗಳ ಜೊತೆಯಲ್ಲಿ ಮಾತುಕತೆ ಆಡುತ್ತಿದ್ದೇವೆ. ಕಳೆದ ಬಾರಿ ಫ್ರೀಡಂ ಪಾರ್ಕಿನಲ್ಲಿ ಹೋರಾಟ ನಡೆಸುತ್ತಿದ್ದಾಗ ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಸರ್ಕಾರ ಬಂದರೆ ಸಮುದಾಯವನ್ನು 2ಎಗೆ ಸೇರಿಸುವ ಭರವಸೆ ನೀಡಿದ್ದರು. ಈಗ ಕೊಟ್ಟ ಮಾತನ್ನು ಈಡೇರಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಯಾವುದೇ ಜಾತಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವಾಗ ಮೋಸ್ಟ್ ಬ್ಯಾಕ್ ವರ್ಡ್, ಮೋರ್ ಬ್ಯಾಕ್ ವರ್ಡ್ ಅಂಡ್ ಬ್ಯಾಕ್ ವರ್ಡ್ ಮಾನದಂಡಗಳ ಆಧಾರದಲ್ಲಿ ಗುರುತಿಸಲಾಗುತ್ತದೆ. ಮೋಸ್ಟ್ ಬ್ಯಾಕ್ ವರ್ಡ್ ನಲ್ಲಿ ಅತ್ಯಂತ ಹಿಂದುಳಿದವರು ಅಂದರೆ ಎಸ್ಸಿ,ಎಸ್ಟಿಗೆ ಸಮನಾಂತರವಾಗಿರುವ ಜಾತಿಗಳು. ಪ್ರವರ್ಗ 1ರಲ್ಲಿ ಮೋರ್ ಬ್ಯಾಕ್ ವರ್ಡ್ ನಲ್ಲಿ ಕುರುಬ, ಗಾಣಿಗ, ಉಪ್ಪಾರ, ಕ್ಷೌರಿಕರು, ಕಂಬಾರರು, ಮಡಿವಾಳರ ಜೊತೆಯಲ್ಲಿ ಬಲಿಜ ಸಮುದಾಯವನ್ನು ಪ್ರವರ್ಗ 2 ಎನಲ್ಲಿ ಇಡಲಾಗಿತ್ತು. ಇದಕ್ಕೆ ಕಾರಣ ಬಲಿಜ ಸಮುದಾಯದ ಶೈಕ್ಷಣಿಕ ಸಾಮಾಜಿಕ ಪರಿಸ್ಥಿತಿ 2ಎ ವರ್ಗದಲ್ಲಿನ ಸಮುದಾಯಗಳಿಗೆ ಸಮಾನವಾಗಿರುವುದು ಆಗಿತ್ತು ಎಂದರು.

ಪ್ರವರ್ಗ 1ರಲ್ಲಿ 95 ಜಾತಿಗಳು, ಪ್ರವರ್ಗ 2ಎನಲ್ಲಿ 102 ಜಾತಿಗಳು ಬರುತ್ತವೆ. ಪ್ರವರ್ಗ 2 ಬಿನಲ್ಲಿ ಅಲ್ಪಸಂಖ್ಯಾತರು, ಪ್ರವರ್ಗ 3ಎ ನಲ್ಲಿ ಒಕ್ಕಲಿಗರು ಸೇರಿ ಇತರೆ, ಪ್ರವರ್ಗ 3 ಬಿನಲ್ಲಿ ಲಿಂಗಾಯತರು ಮತ್ತು ಇತರೆ ಸಮುದಾಯ ಬರುತ್ತಾರೆ. ಈ ಕಾರಣದಿಂದಲೇ ಬಲಿಜ ಸಮುದಾಯವನ್ನು ಮೊದಲಿನಿಂದಲೂ ಅತಿ ಹಿಂದುಳಿದ ವರ್ಗ ಎಂದು ಗುರುತಿಸಲಾಗಿದೆ. 1918ರಲ್ಲಿ ಬಂದ ಜಸ್ಟಿಸ್ ಮಿಲ್ಲರ್ ವರದಿ, ಸ್ವಾತಂತ್ರ್ಯ ನಂತರದ ಹಾವನೂರು ವರದಿ ಹಾಗೂ ಜಸ್ಟಿಸ್ ಚಿನ್ನಪ್ಪರೆಡ್ಡಿ ಆಯೋಗದ ವರದಿಲ್ಲಿಯೂ ಬಲಿಜ ಸಮುದಾಯವನ್ನು ಪ್ರವರ್ಗ 2ಎ ನಲ್ಲಿಯೇ ಪರಿಗಣಿಸಲಾಗಿತ್ತು ಎಂದು ಹೇಳಿದರು.

1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಶಾಸಕರಾಗಿದ್ದ ವಿಶ್ವನಾಥ್ ರವರ ಒನ್ ಮ್ಯಾನ್ ಕಮಿಟಿ ರಚಿಸಿದ್ದರು. ಆ ಕಮಿಟಿಗೆ ಪ್ರವರ್ಗ 2ಎ ನಲ್ಲಿರುವ 103 ಜಾತಿಗಳ ಪೈಕಿ ಅತಿ ಹೆಚ್ಚು ಬೆನಿಫಿಟ್ ಪಡೆದಿರುವ ಸಮುದಾಯವನ್ನು ಕೈಬಿಡುವಂತೆ ಹೇಳಲಾಗಿತ್ತು. ಯಾವುದೇ ಸಮುದಾಯವನ್ನು ಮೀಸಲಾತಿಯಲ್ಲಿ ಸೇರಿಸಲು ಅಥವಾ ತೆಗೆಯಲು ಆಯೋಗ ಶಿಫಾರಸ್ಸು ಮಾಡಬೇಕು. ಆದರೆ, ಯಾವುದೇ ಆಯೋಗದ ಶಿಫಾರಸ್ಸು ಇಲ್ಲದೆ ಬಲಿಜ ಸಮುದಾಯವನ್ನು ಪ್ರವರ್ಗ 2ಎನಿಂದ ತೆಗೆದು ಪ್ರವರ್ಗ 3ಎ ಗೆ ಸೇರಿಸಲಾಗಿದೆ. ಇಲ್ಲಿವರೆಗೆ ಅದಕ್ಕೆ ಕಾರಣವನ್ನೇ ನೀಡಿಲ್ಲ ಎಂದು ದ್ವಾರಕನಾಥ್ ದೂರಿದರು.

ಶಿಕ್ಷಣಕ್ಕೆ ಮೀಸಲಾತಿ ವಂಚನೆ:

ಮುತ್ತೈದೆ ಸಾಮಗ್ರಿಗಳನ್ನು ಮಾರುವ ಬಲಿಜ ಸಮುದಾಯದವರು ಭೂ ಮಾಲೀಕರು ಇರುವ ಸಮುದಾಯಗಳ ಜೊತೆಯಲ್ಲಿ ಸ್ಪರ್ಧೆ ಮಾಡುವುದು ಕಷ್ಟವಾಯಿತು. ಇದರಿಂದಾಗಿ ಸಮುದಾಯ ಹೀನಾಯ ಸ್ಥಿತಿಗೆ ತಲುಪಿತು. ಸಮುದಾಯದ ಮಕ್ಕಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯಿಂದ ವಂಚಿತರಾದರು. ಇದು ಸಮುದಾಯಕ್ಕಾದ ದೊಡ್ಡ ಅನ್ಯಾಯ. ಇದಾದ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಲಿಜ ಸಮುದಾಯವನ್ನು ಶಿಕ್ಷಣಕ್ಕೆ ಮಾತ್ರ ಪ್ರವರ್ಗ 2 ಎಗೆ ಸೇರಿಸಿದರೆ, ಉದ್ಯೋಗಕ್ಕೆ ಪ್ರವರ್ಗ 3ಎ ನಲ್ಲಿಯೇ ಮುಂದುವರೆಸಿದರು. ಈ ಮೊದಲು ಸಮುದಾಯದಲ್ಲಿ ಕೆಎಎಸ್ , ಐಎಎಸ್ , ಐಪಿಎಸ್, ವೈದ್ಯರು, ಎಂಜಿನಿಯರ್‌ ಆಗುತ್ತಿದ್ದರು. 2 ಎ ನಿಂದ ಕೈಬಿಟ್ಟ ಮೇಲೆ ಉದ್ಯೋಗವಕಾಶ ಶೇ.2ರಷ್ಟಕ್ಕೆ ಇಳಿದಿದೆ ಎಂದು ಹೇಳಿದರು.

ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸುವ ಹೋರಾಟ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ, ಸೂಕ್ತ ನಾಯಕತ್ವದ ಕೊರತೆಯಿಂದಾಗಿ ಯಶಸ್ವಿಯಾಗಿಲ್ಲ. ಈಗ ಸಮುದಾಯ ಎಚ್ಚೆತ್ತುಕೊಂಡು ನ್ಯಾಯ ದಕ್ಕಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗುತ್ತಿದೆ ಎಂದು ದ್ವಾರಕನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಹನುಮಯ್ಯ, ರಾಮು, ವಿಶ್ವ, ವಿನೋದ್, ವಿಜಯ್ ಕೊಪ್ಪ, ಮಾವಿನಸಸಿ ವೆಂಕಟೇಶ್ ಇದ್ದರು.

ಕೋಟ್ ........

ನಾನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದಾಗ ಸರ್ಕಾರ ನನಗೆ ಬಲಿಜ ಸಮುದಾಯವನ್ನು ಪ್ರವರ್ಗ 3ಎಗೆ ಸೇರ್ಪಡೆ ಮಾಡಿರುವ ಕುರಿತು ಪತ್ರ ಬರೆದು ಅಭಿಪ್ರಾಯ ಕೇಳಿತ್ತು. ಆಗ ನಾನು ಅದು ಆಯೋಗ ಮಾಡಿದ ತಪ್ಪಲ್ಲ, ಸರ್ಕಾರದ ತಪ್ಪಾಗಿದೆ. ಹಾಗಾಗಿ ಸರ್ಕಾರವೇ ತಪ್ಪನ್ನು ಸರಿಪಡಿಸಬೇಕೆಂದು ಪತ್ರ ಬರೆದು ಆದೇಶ ಮಾಡಿದ್ದೆ. ಆ ಆದೇಶವನ್ನೇ ಬಲಿಜ ಸಮುದಾಯವನ್ನು ಪ್ರವರ್ಗ 2ಎನಲ್ಲಿ ಮರು ಸೇರ್ಪಡೆ ಮಾಡಲು ಸಹಾಯವಾಗುವ ದಾಖಲೆಯಾಗಿ ಸರ್ಕಾರದ ಮುಂದಿದೆ. ಆ ದಾಖಲೆಯನ್ನುಸರ್ಕಾರ ಕಾನೂನು ಇಲಾಖೆಗೆ ಕಳುಹಿಸುತ್ತದೆ. ಆ ಇಲಾಖೆಯೂ ಬಲಿಜ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬಹುದೆಂದು ಸಲಹೆ ನೀಡಿದೆ. ಆದರೆ, ಇಲ್ಲಿವರೆಗೂ 2ಎಗೆ ಸೇರ್ಪಡೆ ಮಾಡಿಲ್ಲ.

-ದ್ವಾರಕನಾಥ್ , ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ1ಕೆಆರ್ ಎಂಎನ್ 1.ಜೆಪಿಜಿ

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ದ್ವಾರಕನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.