ಸಾರಾಂಶ
ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆಹಾವೇರಿ: ಕೃಷಿ ಕಾಯ್ದೆ ವಾಪಸ್‌ಗೆ ಒತ್ತಾಯಿಸಿ ಹಾಗೂ ರೈತರು, ಕೃಷಿ ಕ್ಷೇತ್ರ ನಿರ್ಲಕ್ಷ್ಯ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಬೆಳಗಾವಿ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ರೈತರಿಗಾಗಿ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಬರಗಾಲದಿಂದ ರೈತರ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ಈ ಪರಿಸ್ಥಿತಿಯಲ್ಲಿ ರೈತರಿಗೆ ಆಗಿರುವ ನಷ್ಟ ಭರ್ತಿ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿತ್ತು. ಆದರೆ, ಇದೆಲ್ಲವನ್ನು ಮರೆತು ತೆಲಂಗಾಣ, ಮಧ್ಯಪ್ರದೇಶ ಚುನಾವಣೆಯೇ ಇವರಿಗೆ ಮುಖ್ಯವಾಗಿದೆ. ಇಲ್ಲಿಯ ದುಡ್ಡನ್ನು ತೆಲಂಗಾಣದಲ್ಲಿ ಹಂಚಲಾಗುತ್ತಿದೆ. ಬೆಳೆ ವಿಮೆ ಕೊಡಿಸುವತ್ತಲೂ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಆರೋಪಿಸಿದರು.ಅಧಿಕಾರಕ್ಕೆ ಬಂದರೆ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು. ಆದರೆ, ಈಗ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ಸದ್ದಿಲ್ಲದೇ ಅನುಷ್ಠಾನ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದರೂ ರಾಜ್ಯ ಹಿಂಪಡೆಯುತ್ತಿಲ್ಲ. ಕಳೆದ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಬಿಲ್ ಮಂಡಿಸಿದ್ದ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಅವರು, ಆನಂತರ ಹಿಂದಕ್ಕೆ ಪಡೆದಿದ್ದರು. ಆನಂತರ ಕೋಲಾರದಲ್ಲಿ ಸಭೆ ಕರೆದು ಕಾಯ್ದೆ ಪರ ಅಭಿಪ್ರಾಯ ರೂಪಿಸುವಂತೆ ಮಾಡಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈಗ ಕೆಲವು ಎಪಿಎಂಸಿಗಳ ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಿ ಎಪಿಎಂಸಿ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಇದರ ಹಿಂದೆ ಬೇರೆ ಹುನ್ನಾರ ಅಡಗಿರುವ ಸಂಶಯವಿದೆ ಎಂದು ಆರೋಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕೃಷಿ ಕಾಯ್ದೆ ವಾಪಸ್ ಪಡೆಯಬೇಕು. ಎಂಎಸ್‌ಪಿ ಶಾಸನಬದ್ಧಗೊಳಿಸಬೇಕು. ಬರಗಾಲದ ಸಂದರ್ಭದಲ್ಲಿ ತುರ್ತು ಕಾರ್ಯಕ್ರಮ ಜಾರಿಗೆ ತರಬೇಕು. ವಿದ್ಯುತ್ ಕಾಯ್ದೆ ವಾಪಸ್ ಪಡೆಯಬೇಕು, ಕಬ್ಬಿಗೆ ಎಫ್‌ಆರ್‌ಪಿ ಜತೆಗೆ ಎಸ್‌ಎಪಿ ನೀಡಬೇಕು. ಕಬ್ಬಿನ ಇಳುವರಿಗೆ ಒಂದೊಂದು ಕಾರ್ಖಾನೆ ಒಂದೊಂದು ಧಾರಣೆ ನಿಲ್ಲಿಸಬೇಕು. 10ಕ್ಕಿಂತ ಕಡಿಮೆ ಇಳುವರಿಯ ಕಾರ್ಖಾನೆಗಳ ಪರವಾನಗಿ ರದ್ದುಪಡಿಸಬೇಕು. ಸರ್ಕಾರವೇ ಇಳುವರಿ ಘೋಷಿಸಬೇಕು. ಬಗರ್ ಹುಕುಂ ಸಾಗುವಳಿ ತಕ್ಷಣವೇ ಜಾರಿಯಾಗಬೇಕು. ಮಹದಾಯಿ ಮತ್ತು ಮೇಕೆದಾಟು ಯೋಜನೆ ಶೀಘ್ರ ಕೈಗೊಳ್ಳಬೇಕು. ಹಾಲಿನ ದರವನ್ನು ಲೀಟರ್‌ಗೆ ₹2 ರು. ಕಡಿಮೆ ಮಾಡಿ ಪಶು ಆಹಾರದ ಬೆಲೆಯನ್ನು ಹೆಚ್ಚು ಮಾಡಿರುವುದರಿಂದ ರೈತರಿಂದ ₹4ಗಳನ್ನು ಬಲವಂತವಾಗಿ ಕಿತ್ತುಕೊಳ್ಳುವ ನೀತಿಯನ್ನು ರದ್ದುಪಡಿಸಬೇಕು. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಪ್ರತಿ ಲೀಟರ್ ಹಾಲಿಗೆ ₹7 ನೀಡುವ ಘೋಷಣೆಯನ್ನು ತಕ್ಷಣವೇ ಜಾರಿಗೊಳಿಸಬೇಕು. ಈ ಬೇಡಿಕೆಗಳನ್ನು ಇಟ್ಟುಕೊಂಡು ಸುವರ್ಣಸೌಧ ಮುತ್ತಿಗೆ ಹಾಕಲಾಗುತ್ತಿದೆ. ಸರ್ಕಾರ ನಮ್ಮ ಹೋರಾಟವನ್ನು ಬೇಕಾದರೆ ತಡೆಯಲಿ ಎಂದು ಸವಾಲು ಹಾಕಿದರು.ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಪ್ರಧಾನ ಕಾರ್ಯದರ್ಶಿ ರಮೇಶ ದೊಡ್ಡೂರ, ಬಿ.ಟಿ. ಬಸವರಾಜ, ರುದ್ರಪ್ಪ ಬಳಿಗಾರ, ಶಿವನಗೌಡ ಗಾಜಿಗೌಡ್ರ, ಹಜರತ್ ಅಲಿ ಪಟ್ಟಣಶೆಟ್ಟಿ, ರಾಮಚಂದ್ರ ಪೂಜಾರ, ನಾಗರಾಜ ರಿತ್ತಿಕುರುಬರ, ರವಿ ದೊಡ್ಮನಿ, ಮಲ್ಲೇಶ ರಿತ್ತಿ ಇತರರು ಇದ್ದರು.