ಸಾರಾಂಶ
ಪುಷ್ಪ ಮಂಡಳಿ ಸ್ಥಾಪನೆಯಿಂದ ರಾಷ್ಟ್ರದಾದ್ಯಂತ ಪುಷ್ಪ ಕೃಷಿಗೆ ಉತ್ತೇಜನ ದೊರೆತು, ಕರ್ನಾಟಕ ಹಾಗೂ ಎಲ್ಲ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಯೇ ಆಗಿರುವ ಡಾ.ಕೆ.ಸುಧಾಕರ್, ತಾವು ಈ ಪ್ರದೇಶದಲ್ಲಿ ರೈತರ ಬದುಕಿನ ಗುಣಮಟ್ಟ ಸುಧಾರಿಸುವ ಹಾಗೂ ವಿಶಿಷ್ಟ ಕೃಷಿ ಪದ್ಧತಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಪುಷ್ಪ ಕೃಷಿ ಕೂಡ ಪರಿಣಾಮಕಾರಿ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಲೋಕಸಭಾ ಸದಸ್ಯರಾದ ಡಾ.ಕೆ.ಸುಧಾಕರ್‌ರವರು, ಚಿಕ್ಕಬಳ್ಳಾಪುರದಲ್ಲಿ ಪುಷ್ಪ ಮಂಡಳಿ ಸ್ಥಾಪಿಸುವಂತೆ ಲೋಕಸಭೆಯ ನಿಯಮ 377 ರಡಿ, ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸಭಾಧ್ಯಕ್ಷರ ಅನುಮತಿಯೊಂದಿಗೆ ಕೆಲವು ವಿಷಯಗಳ ಮೇಲೆ ಸರ್ಕಾರದ ಗಮನ ಸೆಳೆಯವ ನಿಯಮ 377 ಅನುವು ಮಾಡಿಕೊಡುತ್ತದೆ.ನಿಯಮ 377ರನ್ವಯ ಸಂಸದ ಡಾ.ಕೆ.ಸುಧಾಕರ್ ಲೋಕಸಭಾ ಕಲಾಪದಲ್ಲಿ ಪುಷ್ಪ ಮಂಡಳಿ ಸ್ಥಾಪನೆಗೆ ತಾವು ಕೇಳಿದ್ದ ಪ್ರಥಮ ಪ್ರಶ್ನೆಯ ಬಗ್ಗೆ ಮಾತನಾಡಿ, ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಹೂಗಳು ಪಾರಂಪರಿಕ ಪ್ರಾಮುಖ್ಯತೆ ಪಡೆದಿವೆ. ಮನೆಗಳಲ್ಲಿ ನಿತ್ಯ ಪೂಜೆ, ದೇವಸ್ಥಾನಗಳಲ್ಲಿ ಧಾರ್ಮಿಕ ಆಚರಣೆ, ಉತ್ಸವ, ಸಮಾರಂಭಗಳಲ್ಲಿ ಮುಖ್ಯವಾಗಿ ಹೂಗಳು ಬೇಕಾಗುತ್ತವೆ. ಪುಷ್ಪ ಕೃಷಿಯು ಭಾರತದ ಪುರಾತನ ಕೃಷಿ ಪದ್ಧತಿಯಾಗಿದ್ದು, ಸಣ್ಣ ಮತ್ತು ಬಡ ರೈತರಿಗೆ ಲಾಭ ತರುವ ಜೊತೆಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ನೀಡುತ್ತದೆ. ಇಷ್ಟು ಮಹತ್ವವಿದ್ದರೂ ಭಾರತದಲ್ಲಿ ಪುಷ್ಪ ಕೃಷಿಯನ್ನು ಸರಿಯಾಗಿ ಬಳಸಿಕೊಂಡಿಲ್ಲ. 2022-23 ನೇ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಪುಷ್ಪ ಕೃಷಿಯಲ್ಲಿ 707.81 ಕೋಟಿ ರು. ರಫ್ತು ವಹಿವಾಟು ನಡೆದಿದೆ. ಈ ಪೈಕಿ ಹೆಚ್ಚು ಪಾಲು ಕರ್ನಾಟಕದ್ದೇ ಆಗಿದೆ. ಕೃಷಿಯಲ್ಲಿ ಬದಲಾವಣೆ ತರುವ ಹಾಗೂ ರೈತರ ಬದುಕು ಬದಲಿಸುವ ಸಾಮರ್ಥ್ಯ ಹೊಂದಿರುವ ಪುಷ್ಪ ಕೃಷಿಗೆ ಹೆಚ್ಚು ಒತ್ತು ನೀಡಬೇಕೆಂದು ಡಾ.ಕೆ.ಸುಧಾಕರ್ ಸಲಹೆ ನೀಡಿದ್ದಾರೆ.ಪುಷ್ಪ ಮಂಡಳಿ ಸ್ಥಾಪನೆಯಿಂದ ರಾಷ್ಟ್ರದಾದ್ಯಂತ ಪುಷ್ಪ ಕೃಷಿಗೆ ಉತ್ತೇಜನ ದೊರೆತು, ಕರ್ನಾಟಕ ಹಾಗೂ ಎಲ್ಲ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಯೇ ಆಗಿರುವ ಡಾ.ಕೆ.ಸುಧಾಕರ್, ತಾವು ಈ ಪ್ರದೇಶದಲ್ಲಿ ರೈತರ ಬದುಕಿನ ಗುಣಮಟ್ಟ ಸುಧಾರಿಸುವ ಹಾಗೂ ವಿಶಿಷ್ಟ ಕೃಷಿ ಪದ್ಧತಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಪುಷ್ಪ ಕೃಷಿ ಕೂಡ ಪರಿಣಾಮಕಾರಿ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.