ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಸ್ತಾವಿತ ಸುರಂಗ ಮಾರ್ಗಕ್ಕಾಗಿ (ಟನಲ್ ರಸ್ತೆ) ಲಾಲ್‌ಬಾಗ್‌ನಲ್ಲಿ ಭೂಸ್ವಾಧೀನ ವಿರೋಧಿಸಿರುವ ಸಂಸದ ತೇಜಸ್ವಿ ಸೂರ್ಯ, ಇಲ್ಲಿ ಭೂವೈಜ್ಞಾನಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ಒತ್ತಾಯಿಸಿದ್ದಾರೆ.ಭಾನುವಾರ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಪ್ರಸ್ತಾವಿತ ಸುರಂಗ ಮಾರ್ಗದ ರ‍್ಯಾಂಪ್ ಜಾಗವನ್ನು ಪರಿಶೀಲಿಸಿದರು. ಈ ಯೋಜನೆಗಾಗಿ ಲಾಲ್‌ಬಾಗ್‌ನ ಯಾವುದೇ ಭಾಗದ ಭೂಸ್ವಾಧೀನ ಸರಿಯಲ್ಲ ಎಂದು ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು.ಈ ಯೋಜನೆಯಿಂದ 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾದ ಲಾಲ್‌ಬಾಗ್ ಬಂಡೆಗಳ ರಚನೆ ಮೇಲೆ ಉಂಟಾಗುವ ಭೂವೈಜ್ಞಾನಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ಗೆ ನಿರ್ದೇಶನ ನೀಡಿದ್ದಾರೆ.
ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ರಚಿಸಲಾದ, ಬಿ-ಸ್ಮೈಲ್ ವಿಭಾಗದ ಅಧಿಕಾರಿಗಳು, ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಕೈಗೊಂಡಿಲ್ಲ. ಸುರಂಗ ರ‍್ಯಾಂಪ್‌ಗಾಗಿ ಉದ್ಯಾನವನದ ಭಾಗ ಗುರುತಿಸುವ ಮೊದಲು ಸಾರ್ವಜನಿಕರು ಮತ್ತು ಲಾಲ್‌ಬಾಗ್‌ನ ನಿಯಮಿತ ವಾಯುವಿಹಾರಿಗಳ ಜತೆ ಸಮಾಲೋಚನೆ ನಡೆಸದಿರುವ ಬಗ್ಗೆ ಸಂಸದ ತೇಜಸ್ವಿ ಅಸಮಾಧಾನ ವ್ಯಕ್ತಪಡಿಸಿದರು.ಈ ವೇಳೆ ಸುದ್ದಿಗಾರರ ಜತೆಗೆ ಮಾತನಾಡಿ, ಸುರಂಗ ಮಾರ್ಗದ ನಿರ್ಗಮನ ರ‍್ಯಾಂಪ್ ನಿರ್ಮಾಣಕ್ಕಾಗಿ ಸರ್ಕಾರ ಲಾಲ್‌ಬಾಗ್ ಅನ್ನು ಜನರಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರಿಂದ ನಗರದ ಪರಂಪರೆಯ ಭಾಗವಾಗಿರುವ 300 ದಶಲಕ್ಷ ವರ್ಷಗಳಷ್ಟು ಹಳೆಯ ಪುರಾತತ್ವ ಅದ್ಭುತ ಲಾಲ್‌ಬಾಗ್ ಬಂಡೆಗಳಿಗೆ ದೊಡ್ಡ ಅಪಾಯ ತಂದೊಡ್ಡಲಿದೆ ಎಂದರು.ರ‍್ಯಾಂಪ್‌ನಲ್ಲಿ ಮಾಲ್ ಮತ್ತು ತಿನಿಸುಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಹ ಸರ್ಕಾರ ಬಯಸಿದ್ದು ಅಕ್ಷಮ್ಯ. ಈ ವಿವೇಚನಾ ರಹಿತ ಯೋಜನೆಗೆ ಲಾಲ್‌ಬಾಗ್‌ನ ಯಾವುದೇ ಭಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ಪರಿಸರ ಪರಿಣಾಮ ಮೌಲ್ಯಮಾಪನ, ಭೂವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಸುರಂಗ ಮಾರ್ಗ ಯೋಜನೆಯನ್ನು ಆತುರದಿಂದ ಮಾಡುತ್ತಿರುವುದು ಅಕ್ಷಮ್ಯ. ಸಂಚಾರ ದಟ್ಟಣೆ ಕಡಿಮೆ ಮಾಡುವ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಿಗೆ ಆದ್ಯತೆ ನೀಡುವ ಬದಲು, ರಾಜ್ಯ ಕಾಂಗ್ರೆಸ್ ಸರ್ಕಾರ ಈ ಅನಗತ್ಯ ಸುರಂಗ ಮಾರ್ಗ ಯೋಜನೆಯನ್ನು ಜನರ ಮೇಲೆ ಹೇರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.