ಡಿಸಿ ಕಚೇರಿ ಬಳಿ ನಡೆಯುತ್ತಿರುವ ರೈತರಪರ ಹೋರಾಟಕ್ಕೆ ಸುಧಾಕರ್ ಅವರು ಬೆಂಬಲ ನೀಡಿದ್ದಾರೆ ಹೊರತು, ಯಾರನ್ನೂ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸಂಸದ ಡಾ.ಕೆ. ಸುಧಾಕರ್ ಅವರು ಸದಾ ರೈತರಪರ ಕೆಲಸಗಳನ್ನು ಮಾಡುತ್ತಿರುವ ನಾಯಕರು. ಅಡ್ಜೆಸ್ಟ್‌ಮೆಂಟ್ ರಾಜಕಾರಣವು ಅವರ ರಾಜಕೀಯ ಜೀವನದಲ್ಲೇ ಇಲ್ಲ ಎಂದು ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರು, ನಿನ್ನೆ ಸುದ್ದಿಗೋಷ್ಠಿಯಲ್ಲಿ ಶಿಡ್ಲಘಟ್ಟ ಶಾಸಕ ರವಿಕುಮಾರ್ ಪರವಾಗಿ ಕೆಲವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. ಡಿಸಿ ಕಚೇರಿ ಬಳಿ ನಡೆಯುತ್ತಿರುವ ರೈತರಪರ ಹೋರಾಟಕ್ಕೆ ಸುಧಾಕರ್ ಅವರು ಬೆಂಬಲ ನೀಡಿದ್ದಾರೆ ಹೊರತು, ಯಾರನ್ನೂ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದರು.ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಸುಧಾಕರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇದ್ದರೆ, ಅದನ್ನು ಹೈಕಮಾಂಡ್ ಮಟ್ಟದಲ್ಲಿ ಕುಳಿತು ಚರ್ಚಿಸಿ ಸರಿಪಡಿಸಿಕೊಳ್ಳಲಾಗುತ್ತದೆ. ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಮುಖಂಡರು ಚಿಮುಲ್ ಚುನಾವಣೆಯ ವೇಳೆ ಸಂಸದ ಡಾ.ಕೆ.ಸುಧಾಕರ್ ವಿರುದ್ಧ ಮಾಡಲಾಗಿರುವ ಆರೋಪಗಳು ಆಧಾರರಹಿತವಾಗಿದೆ. ಡಾ.ಕೆ.ಸುಧಾಕರ್ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಲಿಲ್ಲ. ಅವರು ಪಕ್ಷದ ಅಭ್ಯರ್ಥಿಗಳನ್ನೇ ಬೆಂಬಲಿಸಿದ್ದು, ಇತರರಿಗೆ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಪೇರೇಸಂದ್ರ ಕ್ಷೇತ್ರದಿಂದ ನನ್ನ ಗೆಲುವಿಗೆ ಸಂಸದ ಡಾ.ಕೆ.ಸುಧಾಕರ್ ಅವರೆ ಕಾರಣ ಎಂದ ಅವರು ಕೋಲಾರ ಹಾಲು ಒಕ್ಕೂಟದಿಂದ ಚಿಮುಲ್ ಆಗಲು ಸಂಸದ ಡಾ.ಕೆ. ಸುಧಾಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.ಇದೇ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಎಲ್ಲಿ ರೈತರಿಗೆ ಅನ್ಯಾಯ ಆಗೊತ್ತೂ ಅಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರು ರೈತರ ಪರವಾಗಿ ನಿಲ್ಲುತ್ತಿದ್ದಾರೆ. ಅದೆ ರೀತಿ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ರೈತರ ಧರಣಿಯಲ್ಲಿ ಭಾಗವಹಿಸಿ ರೈತರ ಪರ ಮಾತನಾಡಿದ್ದಾರೆ ಹೊರತು, ಯಾರ ವಿರುದ್ಧವು ಟೀಕಿಸಿಲ್ಲ. ಜಂಗಮಕೋಟೆ ಹೋಬಳಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಹಾಗಾಗಿ ಅಲ್ಲಿನ ಶಾಸಕರು ರೈತರ ಪರ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ ಹೊರತು ಯಾರ ವಿರುದ್ಧ ಮಾತನಾಡಿಲ್ಲ. ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಸತ್ಯಾ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದು ಹೇಳಿದರು.
ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಡ್ಜೆಸ್ಟ್‌ಮೆಂಟ್ ರಾಜಕಾರಣವೇ ತಿಳಿದಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಶ್ರಮಪಟ್ಟಿದ್ದರು. ಯಾರಾದರೂ ಸೋತರೆ ಅದಕ್ಕೆ ಡಾ.ಕೆ.ಸುಧಾಕರ್ ಅವರನ್ನು ಕಾರಣವೆಂದು ಹೇಳುವುದು ಸರಿಯಲ್ಲ. ಇನ್ನೂ ಚೀಮುಲ್ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಪರ ಇದ್ದರು ಎನ್ನುವುದು ಶುದ್ಧ ಸುಳ್ಳು. ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಮಾಡಿರುವ ಆರೋಪಗಳಲ್ಲಿ ಯಾವುದೇ ತಾರ್ಕಿಕತೆ ಇಲ್ಲ. ನಾವು ಎಲ್ಲರೂ ಸೇರಿ ರೈತರ ಪರ ಧ್ವನಿ ಎತ್ತಬೇಕು. ತಮ್ಮ ಫಲವತ್ತಾದ ಜಮೀನು ಉಳಿಸಿಕೊಳ್ಳಲು ರೈತರು ನಡೆಸುತ್ತಿರುವ ಧರಣಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಿಡ್ಲಘಟ್ಟ ಮಾಜಿ ಶಾಸಕ ಎಂ. ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗರೆಕಾಲುವೆ ಪ್ರಸಾದ್, ಮಾಜಿ ಅಧ್ಯಕ್ಷ ಕಾಳೇಗೌಡ, ಬಿಜೆಪಿ ಮುಖಂಡರಾದ ಎಸ್‌ಕೆಎಲ್ ದ್ಯಾವಪ್ಪ, ಸೀಕಲ್ ಆನಂದ್ ಗೌಡ, ತೇಜೇಂದ್ರ ಪಾಪು, ಮತ್ತಿತರರು ಇದ್ದರು.
ಸಿಕೆಬಿ-4 ಸುದ್ದಿಗೋಷ್ಟಿಯಲ್ಲಿ ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿದರು.