ಸಾರಾಂಶ
ಸಂಸದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಅವರು ಬೆಂಗಳೂರಿನಲ್ಲಿ ಮೆಟ್ರೋ ರೈಲಿನಲ್ಲಿ 'ಸರ್ಪ್ರೈಸ್' ಪರಿಶೀಲನೆ ನಡೆಸಿ, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದರು.
ಬೆಂಗಳೂರು : ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಅವರು ಕೆ.ಆರ್.ಪುರದಿಂದ ಕೆಂಪೇಗೌಡ ಮೆಟ್ರೋ ನಿಲ್ದಾಣದವರೆಗೆ ಸಂಚಾರ ಕೈಗೊಂಡು, ಹಸಿರು ಮತ್ತು ನೆರಳೆ ಬಣ್ಣದ ರೈಲು ನಿಲ್ದಾಣವನ್ನು ಪರಿಶೀಲನೆ ನಡೆಸಿದ್ದಾರೆ.
ಸೋಮವಾರ ಸಂಜೆ ಹೆಚ್ಚಿನ ಜನದಟ್ಟಣೆ ಇರುವ ವೇಳೆ ಸಂಚರಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು. ಪ್ರತಿದಿನ ಏಳು ಲಕ್ಷಕ್ಕಿಂತ ಹೆಚ್ಚು ಪ್ರಯಾಣ ಮಾಡುತ್ತಿದ್ದು, ಈ ವೇಳೆ ಜನರು ಎದುರಿಸುವ ಸಮಸ್ಯೆಗಳನ್ನು ಕೇಳಿದರು. ಪ್ರಯಾಣಿಕರಿಂದ ಬಂದಂತಹ ದೂರುಗಳ ಆಧಾರದ ಮೇಲೆ ಮೆಟ್ರೋದಲ್ಲಿ ಸಂಚರಿಸಿ ಸಮಸ್ಯೆಗಳ ಕುರಿತು ಖುದ್ದಾಗಿ ಆಲಿಸಿದರು.
ಈ ವೇಳೆ ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕೆ.ಆರ್. ಪುರಂನಿಂದ ಬರುವಾಗ ಜನರ ಸಮಸ್ಯೆ ಆಲಿಸಿದ್ದೇವೆ. ಅಧಿಕ ಜನದಟ್ಟಣೆ ವೇಳೆ ರೈಲಿನ ಲಭ್ಯತೆ ಹೆಚ್ಚಾಗಬೇಕು ಎಂದು ಜನತೆ ತಿಳಿಸಿದ್ದಾರೆ. ಗರುಡಾಚಾರ್ ಪಾಳ್ಯ ನಿಲ್ಲುವ ಜತೆಗೆ ಪಟ್ಟಂದೂರಿಗೂ ನಿಲ್ಲಿಸಬೇಕಿದೆ. ಪ್ರತಿದಿನ ಸುಮಾರು 8.5 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೆಚ್ಚು ದಟ್ಟಣೆ ವೇಳೆ 21 ಸೆಟ್ ರೈಲುಗಳನ್ನು ತರಿಸಿಕೊಳ್ಳಲು ಆದೇಶಿಸಲಾಗಿದೆ. ಕೆಲವು ಕಾರಣಾಂತರಗಳಿಂದ ತಡವಾಗಿದೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಸದ ತೇಜಸ್ವಿನಿ ಸೂರ್ಯ ಮಾತನಾಡಿ, ಸಿಂಗಾಪುರ ಮಾಡೆಲ್ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಹೆಚ್ಚಿನ ದಟ್ಟಣೆ ವೇಳೆಯಲ್ಲಿ ಜನತೆಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಲಾಗಿದೆ. ನಮ್ಮ ಬಳಿ ಇರುವ ರೈಲು ಸೆಟ್‌ಗಳಲ್ಲಿ ಶೇ. 95 ರಷ್ಟು ಕಾರ್ಯ ನಿರ್ವಹಿಸುತ್ತಿವೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಮುಂದಿನ ವಾರ ದೆಹಲಿಗೆ ಬರಲಿದ್ದು, ಮನವಿಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.