ಸಾರಾಂಶ
ಹಾವೇರಿ: ಲೋಕಸಭಾ ಕ್ಷೇತ್ರದ ಜನರ ಸಮಸ್ಯೆಗಳ ಧ್ವನಿಯಾಗಿ ಸಂಸದರ ಕಾರ್ಯಾಲಯ ಕಾರ್ಯ ನಿರ್ವಹಿಸಲಿದೆ. ಪ್ರತಿ ಗುರುವಾರ ಹಾವೇರಿಯಲ್ಲಿ ಹಾಗೂ ಪ್ರತಿ ಶುಕ್ರವಾರ ಗದಗ ಜಿಲ್ಲೆಯಲ್ಲಿ ನಾನು ಖುದ್ದು ಹಾಜರಿದ್ದು ಜನರ ಅಹವಾಲು ಸ್ವೀಕರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿಯ ತಾಪಂ ಆವರಣದಲ್ಲಿ ಶುಕ್ರವಾರ ಸಂಸದರ ಜನ ಸಂಪರ್ಕ ಕಾರ್ಯಾಲಯ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಅಹವಾಲು ಹಾಗೂ ಅವುಗಳ ಸೂಕ್ತ ಪರಿಹಾರಕ್ಕಾಗಿ ಜನ ಸಂಪರ್ಕ ಕಾರ್ಯಾಲಯ ಮಾಡಿದ್ದೇನೆ. ಸಾರ್ವಜನಿಕರು ತಮ್ಮ ಸಮಸ್ಯೆಗಳು, ಕೆಲಸ ಕಾರ್ಯಗಳಿಗೆ ಅಹವಾಲು ತೆಗೆದುಕೊಂಡು ಬರುತ್ತಾರೆ. ನಮ್ಮ ಕಚೇರಿಯಿಂದ ಬಂದಂತಹ ಪತ್ರಗಳು ಹಾಗೂ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಬೇಕು. ಪ್ರತಿ ಗುರುವಾರ ಹಾವೇರಿ ಜಿಲ್ಲೆಗೆ ಮೀಸಲಿಡುತ್ತೇನೆ. ಶುಕ್ರವಾರ ಗದಗ ಜಿಲ್ಲೆಗೆ ಮೀಸಲಿಡುತ್ತೇನೆ. ಬೆಳಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಲಭ್ಯನಿರುತ್ತೇನೆ. ಈ ಕಚೇರಿ ಬಹಳ ಮುಕ್ತವಾಗಿರುತ್ತದೆ ಎಂದು ಹೇಳಿದರು.ಸರ್ಕಾರಿ ಆಸ್ಪತ್ರೆಗಳಿಗೆ ಪೂರ್ಣ ಪ್ರಮಾಣದ ವೈದ್ಯರನ್ನು ನೇಮಕ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ವೈದ್ಯರನ್ನು ನೇಮಕ ಮಾಡಿದರೆ, ಅವರು ಸರ್ಕಾರಿ ಆಸ್ಪತ್ರೆಗೆ ಬರಲು ನಿರಾಕರಿಸುತ್ತಾರೆ. ಜಾನುವಾರುಗಳ ಸಾವಾಗುತ್ತಿದೆ. ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ನಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಚರ್ಮ ಗಂಟು ರೋಗ ಬಂದಾಗ ಸುಮಾರು 14 ಕೋಟಿ ರು. ಬಿಡುಗಡೆ ಮಾಡಿ, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಸೂಚಿಸಿದ್ದೆವು, ಸರ್ಕಾರ ಜೀವಂತ ಇದ್ದರೆ ಇವೆಲ್ಲ ಮಾಡಲು ಸಾಧ್ಯ, ಈ ಸರ್ಕಾರ ಜೀವಂತ ಇಲ್ಲ ಎಂದು ಆರೋಪಿಸಿದರು.ವಂದೇ ಭಾರತ್ ನಿಲುಗಡೆಗೆ ಕ್ರಮ-
ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿ ಹಾಗೂ ಸರ್ವಿಸ್ ರಸ್ತೆಗಳ ನಿರ್ಮಾಣ ಮಾಡುವ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ರೈಲ್ವೆ ಯೋಜನೆಗಳ ಕುರಿತಂತೆಯೂ ಹುಬ್ಬಳ್ಳಿಯ ನೈರುತ್ಯ ವಲಯ ಅಧಿಕಾರಿಗಳ ಜೊತೆ ಸಭೆ ಮಾಡಿ ಬ್ಯಾಡಗಿ ರೈಲ್ವೆ ನಿಲ್ದಾಣ, ಶಿವಮೊಗ್ಗ, ರಾಣಿಬೆನ್ನೂರು ಲೈನ್ ಆರಂಭಕ್ಕೆ ಸಮಸ್ಯೆಗಳಿಗೆ ಅತಿ ಬೇಗ ಪರಿಹಾರ ಕಂಡುಕೊಳ್ಳಲಾಗುವುದು. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದ್ದೇನೆ. ರೈಲ್ವೆ ಮಂಡಳಿಗೆ ಪ್ರಸ್ತಾವನೆ ಹೋಗಿದೆ. ಆದಷ್ಟು ಬೇಗ ತೀರ್ಮಾನ ಆಗಲಿದೆ ಎಂದು ಹೇಳಿದರು.ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಯಾವ ಬಣದಲ್ಲಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಬಣದಲ್ಲಿದ್ದೇನೆ. ವಕ್ಫ್ ಆದೇಶದಿಂದ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಮಠಗಳು, ಕೆರೆಗಳು, ಆಸ್ಪತ್ರೆ, ಶಾಲೆಗಳು ಎಲ್ಲದಕ್ಕೂ ಸಮಸ್ಯೆಯಾಗಿದೆ. ಅದರ ವಿರುದ್ಧ ಎಲ್ಲರೂ ತೀವ್ರವಾಗಿ ಹೋರಾಟ ಮಾಡಬೇಕಿದೆ. ಆ ಕೆಲಸವನ್ನು ನಾವೆಲ್ಲರೂ ಮಾಡುತ್ತಿದ್ದೇವೆ ಎಂದರು.ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ ಇತರರು ಇದ್ದರು.
ಶಿಗ್ಗಾಂವಿ ಬಗ್ಗೆ ಕೇಳಬೇಡಿ: ಶಿಗ್ಗಾಂವಿ ವಿಷಯದ ಬಗ್ಗೆ ಏನೂ ಕೇಳಬೇಡಿ ಎಂದು ಹೇಳುವ ಮೂಲಕ ಚುನಾವಣಾ ಸೋಲಿನಿಂದ ಆಗಿರುವ ಬೇಸರವನ್ನು ಬಸವರಾಜ ಬೊಮ್ಮಾಯಿ ಹೊರಹಾಕಿದರು.ಶಿಗ್ಗಾಂವಿ ಹೆಸರನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಮಾಧ್ಯಮದವರ ಮಾತನ್ನು ನಿಲ್ಲಿಸಿ, ಶಿಗ್ಗಾಂವಿ ಬಗ್ಗೆ ಏನನ್ನೂ ಕೇಳಬೇಡಿ ಎಂದು ಬೇಸರದಲ್ಲಿ ನುಡಿದರು.