ಸಾರಾಂಶ
ಮುಡಾ ಪ್ರಕರಣದ ಪೊಲೀಸ್ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2024ರ ಸೆ.24ರಂದು ಹೊರಡಿಸಿದ ತೀರ್ಪು ರದ್ದು ಕೋರಿ ವಿಭಾಗೀಯ ಪೀಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಕರಾರು ಮೇಲ್ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು : ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಮುಡಾ ಪ್ರಕರಣದ ಪೊಲೀಸ್ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2024ರ ಸೆ.24ರಂದು ಹೊರಡಿಸಿದ ತೀರ್ಪು ರದ್ದು ಕೋರಿ ವಿಭಾಗೀಯ ಪೀಠಕ್ಕೆ ತಕರಾರು ಮೇಲ್ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿ, ಮುಡಾ ಪ್ರಕರಣದ ಪೊಲೀಸ್ ತನಿಖೆ ಮತ್ತು ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರ ಕಚೇರಿಯ ವಿಶೇಷ ಕಾರ್ಯದರ್ಶಿ, ಪ್ರಕರಣದ ಮೂಲ ದೂರುದಾರರಾಗಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎಸ್.ಪಿ. ಪ್ರದೀಪ್ ಕುಮಾರ್ ಅವರನ್ನು ಮೇಲ್ಮನವಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಈ ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಸಿಎಂ ಆಕ್ಷೇಪವೇನು?:
ಮುಡಾ ಹಗರಣ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪಿಸಿ ಆಕ್ಟ್) ಸೆಕ್ಷನ್ 17ಎ ಅಡಿಯಲ್ಲಿ ಪೊಲೀಸ್ ತನಿಖೆ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 2023ರ ಸೆಕ್ಷನ್ 218 ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ 2024ರ ಆ.16ರಂದು ರಾಜ್ಯಪಾಲರು ಆದೇಶಿಸಿದ್ದಾರೆ. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು.
ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ರಾಜ್ಯ ಸಚಿವ ಸಂಪುಟದ ಸದಸ್ಯರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಅದನ್ನು ಪರಿಗಣಿಸದೆ ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರೇ ಆತುರದ ಅನುಮತಿ ನೀಡಿದ್ದರು. ಅಂತಹ ಆದೇಶ ಹೊರಡಿಸಲು ಸಮಂಜಸವಾದ ಕಾರಣಗಳನ್ನೂ ನೀಡಿಲ್ಲ ಮತ್ತು ಸೂಕ್ತವಾಗಿ ವಿವೇಚನೆಯನ್ನೂ ಬಳಸಿಲ್ಲ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಿದ್ದಾರೆ.
ಸಂಪುಟದ ಸಚಿವರ ಸಲಹೆ ಮತ್ತು ಸೂಚನೆ ಆಧಾರದಲ್ಲಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು ಎಂದು ಸಂವಿಧಾನದ ಪರಿಚ್ಛೇದ 163ವು ಸ್ಪಷ್ಟವಾಗಿ ಹೇಳುತ್ತದೆ. ಆ ಪರಿಚ್ಛೇದವೂ ಸೇರಿದಂತೆ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ರಾಜ್ಯಪಾಲರು ಅನುಮತಿ ನೀಡಿದ್ದರು. ಹಾಗಾಗಿ, ರಾಜ್ಯಪಾಲರ ಪೂರ್ವಾನುಮತಿಯೇ ನಿರಂಕುಶ, ಅಸಂವಿಧಾನಿಕ ಮತ್ತು ಅಕ್ರಮವಾಗಿದೆ. ಅಂತಹ ಆದೇಶವನ್ನು ಪುರಸ್ಕರಿಸಿರುವ ಏಕ ಸದಸ್ಯ ಪೀಠದ ತೀರ್ಪು ಸಹ ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಮೇಲ್ಮನವಿಯಲ್ಲಿ ಮುಖ್ಯಮಂತ್ರಿಯವರು ಆಕ್ಷೇಪಿಸಿದ್ದಾರೆ.
ಅಪ್ರಸ್ತುತ ಸತ್ಯಗಳನ್ನು ಆಧರಿಸಿ ಏಕ ಸದಸ್ಯ ಪೀಠವು ತೀರ್ಪು ನೀಡಿದೆ. ರಾಜ್ಯಪಾಲರು ಸಂಪುಟದ ಸಚಿವರ ಸಲಹೆ-ಸೂಚನೆ ಕಡೆಗಣಿಸಿ ಹಾಗೂ ವಿವೇಚನೆ ಬಳಸದೆ ಆದೇಶ ಹೊರಡಿಸಿರುವುದು ಮತ್ತು ಪಿಸಿ ಕಾಯ್ದೆ ಸೆಕ್ಷನ್ 17ಎ ಮತ್ತು ಬಿಎನ್‌ಎಸ್‌ಎಸ್ ಸೆಕ್ಷನ್ 218ರ ಕುರಿತ ವ್ಯಾಖ್ಯಾನಗಳು ಸೇರಿದಂತೆ ಅನೇಕ ಪ್ರಮುಖ ಕಾನೂನಾತ್ಮಕ ಅಂಶಗಳನ್ನು ಪರಿಗಣಿಸುವಲ್ಲಿ ಏಕ ಸದಸ್ಯ ಪೀಠ ನಿರ್ಲಕ್ಷಿಸಿದೆ ಹಾಗೂ ವಿಫಲವಾಗಿದೆ. ಆ ಮೂಲಕ ಏಕ ಸದಸ್ಯ ಪೀಠವು ಸಹ ದೋಷಪೂರಿತ ಹಾಗೂ ವಿವೇಚನಾ ರಹಿತವಾದಂತಹ ತೀರ್ಪು ನೀಡಿದೆ. ಆದ್ದರಿಂದ ಏಕ ಸದಸ್ಯ ಪೀಠದ ಆದೇಶವು ನಿರಂಕುಶ, ಸ್ವೇಚ್ಛಾನುಸಾರ ಮತ್ತು ಕಾನೂನು ಬಾಹಿರವಾಗಿದೆ. ಆದ್ದರಿಂದ ಆ ತೀರ್ಪು ಮತ್ತು ರಾಜ್ಯಪಾಲರ ಆದೇಶವನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿಗಳು ಮೇಲ್ಮನವಿಯಲ್ಲಿ ಕೋರಿದ್ದಾರೆ.
ಪ್ರಕರಣವೇನು?:
ದೇವನೂರು ಬಡಾವಣೆ ಅಭಿವೃದ್ಧಿಗಾಗಿ ಮೈಸೂರು ಜಿಲ್ಲೆಯ ಕೆಸರೆ ಗ್ರಾಮದ ಸರ್ವೇ ನಂ.464ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ 3.16 ಎಕರೆ ಜಾಗವನ್ನು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (ಮುಡಾ) ವಶಪಡಿಸಿಕೊಂಡಿತ್ತು. ಅದರ ಬದಲಿಗೆ ಮುಡಾ 56 ಕೋಟಿ ಮೌಲ್ಯದ 14 ನಿವೇಶನಗಳನ್ನು ಮಂಜೂರು ಮಾಡಿದೆ. ಅದರಲ್ಲಿ ಅಕ್ರಮ ನಡೆದಿದ್ದು, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಕೋರಿ 2024ರ ಜು.5ರಂದು ರಾಜ್ಯಪಾಲರಿಗೆ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ನಂತರ ಇದೇ ವಿಚಾರವಾಗಿ ಸ್ನೇಹಮಯಿ ಕೃಷ್ಣ, ಪ್ರದೀಪ್ ಕಮಾರ್ ಸಹ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು.
ಮುಖ್ಯಮಂತ್ರಿಗಳ ವಿರುದ್ಧ ಪೊಲೀಸ್ ತನಿಖೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಂದೇ ರಾಜ್ಯಪಾಲರ ಆದೇಶ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಹೈಕೋರ್ಟ್ ಏಕ ಸದಸ್ಯ ಪೀಠ ಮಧ್ಯಂತರ ಆದೇಶ ಮಾಡಿತ್ತು. ಸೆ.12ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಸೆ.24ರಂದು ಮುಖ್ಯಮಂತ್ರಿಗಳ ಅರ್ಜಿ ವಜಾಗೊಳಿಸಿ, ಪ್ರಕರಣದ ಕುರಿತು ಪೊಲಿಸ್ ತನಿಖೆ ನಡೆಸಲು ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು.
ಸಿಎಂ ವಾದವೇನು?- ಮುಡಾ ಕೇಸ್‌ನಲ್ಲಿ ರಾಜ್ಯಪಾಲರ ಪೂರ್ವಾನುಮತಿ ನಿರಂಕುಶ, ಅಸಂವಿಧಾನಿಕ, ಅಕ್ರಮವಾಗಿದೆ- ಅಂತಹ ಆದೇಶವನ್ನು ಪುರಸ್ಕರಿಸಿರುವ ಏಕಸದಸ್ಯ ಪೀಠದ ತೀರ್ಪು ಸಂಪೂರ್ಣ ದೋಷಪೂರಿತ- ಅಪ್ರಸ್ತುತ ಸತ್ಯಗಳನ್ನು ಆಧರಿಸಿ ತೀರ್ಪು ನೀಡಲಾಗಿದೆ. ಕಾನೂನಾತ್ಮಕ ಅಂಶ ನಿರ್ಲಕ್ಷಿಸಲಾಗಿದೆ- ಏಕಸದಸ್ಯ ಪೀಠದ ಆದೇಶ ನಿರಂಕುಶ, ಸ್ವೇಚ್ಛಾನುಸಾರ, ಕಾನೂನುಬಾಹಿರವಾಗಿದೆ: ಸಿಎಂ ವಾದ