ಸಾರಾಂಶ
ಕಾರವಾರ: ಬಿಜೆಪಿಯವರ ಕಿರಿಕಿರಿ ಸಹಿಸಲಾಗದೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಎಲ್ಲ ಸೈಟುಗಳನ್ನು ಮರಳಿಸಿದ್ದಾರೆ. ಇನ್ನಾದರೂ ಪ್ರಕರಣವನ್ನು ಕೈಬಿಡಿ, ಅಭಿವೃದ್ಧಿಗೆ ಸಹಕರಿಸಿ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಬಿಜೆಪಿ ಮುಖಂಡರಲ್ಲಿ ಮನವಿ ಮಾಡಿದರು.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆನೂ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಪತ್ನಿ ಅಧಿಕೃತವಾಗಿ ಸೈಟ್ ಖರೀದಿಸಿದರೂ ಅದನ್ನು ಬಿಜೆಪಿಯವರಿಂದ ಸಹಿಸಿಕೊಳ್ಳಲು ಆಗಲಿಲ್ಲ. ಅವರ ಕಾಟ ತಡೆಯಲಾರದೇ ಸೈಟ್ ಹಿಂದಿರುಗಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೊತ್ತಿಲ್ಲದೇ ಈ ಸೈಟ್ ಮರಳಿಸಿದ್ದಾರೆ. ಸಿಎಂ ಅವರ ಪತ್ನಿಗೆ ಆಸ್ತಿ ಮುಖ್ಯವಲ್ಲ. ಅವರ ಮನೆಯವರು ಹಾಗೂ ರಾಜ್ಯದ ಹಿತ ಮುಖ್ಯ. ಅಭಿವೃದ್ಧಿ ಕೆಲಸಗಳು ಮುಖ್ಯ. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಬಿಜೆಪಿಯವರ ಭಾಷೆ ಸಹಿಸಲಾಗುತ್ತಿಲ್ಲ. ಅವರು ಈ ಪ್ರಕರಣ ಇಲ್ಲಿಗೆ ಕೈಬಿಟ್ಟು ಅಭಿವೃದ್ಧಿಗೆ ಸಹಕಾರ ನೀಡಬೇಕು. ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಸೃಷ್ಟಿಯಾಗುವಂತೆ ಮಾಡಿದ್ದೇ ಬಿಜೆಪಿಯವರು. ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇರುವುದರಿಂದ ಬಡವರಿಗೆ ಮನೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮರಳಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧವಿದೆ. ಆದರೆ ಬಿಜೆಪಿ ಮುಖಂಡರು ಹಸಿರು ಪೀಠಕ್ಕೆ ಹೋಗಿದ್ದರಿಂದ ಮರಳುಗಾರಿಕೆಗೆ ತಡೆಯಾಗಿದೆ. ಅವರು ದೂರು ಹಿಂಪಡೆದರೆ ಮರಳುಗಾರಿಕೆಗೆ ಅನುಮತಿ ಸಿಗಲಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರಲಿದೆ. ಜನರಿಗೂ ನೆರವು ಸಿಗಲಿದೆ ಎಂದರು.
ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ನಾವು ಕೇಂದ್ರ ಸರ್ಕಾರ ನಬಾರ್ಡ್ ಅಡಿಯಲ್ಲಿ ಯೋಜನೆ ರೂಪಿಸಿತ್ತು. ಇದಕ್ಕಾಗಿ ₹850 ಕೋಟಿ ಹಣ ಪಾವತಿಸುವುದಾಗಿಯೂ ಹೇಳಿತ್ತು. ಆದರೆ ನಮಗೆ ಇನ್ನೂ ಹಣ ಬಂದಿಲ್ಲ. ಹಣ ಬರುವ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ, ನಗರಸಭೆ, ಮೀನುಗಾರಿಕಾ ಇಲಾಖೆ ಸೇರಿದಂತೆ ಐದಾರು ಇಲಾಖೆಯ ಸಹಯೋಗದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲು ಯೋಜನೆ ಸಹ ರೂಪಿಸಲಾಗಿತ್ತು. ಆದರೆ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ನಮಗೆ ಅರಿವಿಲ್ಲದೇ ಕೇಂದ್ರ ಸರ್ಕಾರ ಬೇರೆ ಬೇರೆ ಖಾತೆಗೆ ಹಣ ಹಾಕಿರಬಹುದು. ಇದರ ಬಗ್ಗೆ ಮಾಹಿತಿ ಇಲ್ಲ ಎಂದರು. ಜಿಲ್ಲೆಯ ಕರಾವಳಿಯಲ್ಲಿ ಐಆರ್‌ಬಿಯ ಅರೆಬರೆ ಕಾಮಗಾರಿಯಿಂದ ಸಾಕಷ್ಟು ಜನರು ಸಾವಿಗೀಡಾಗಿದ್ದಾರೆ. ಇದಕ್ಕೆ ಐಆರ್‌ಬಿಯೇ ಕಾರಣ ಎಂದು ನೇರವಾಗಿ ಆರೋಪಿಸಿದರು.ಐಆರ್‌ಬಿ ಕಂಪನಿಯವರು ದುಡ್ಡು ಮಾಡಲು ಇಲ್ಲಿ ಬಂದಿದ್ದಾರೆ. ಕೇಂದ್ರ ಸಚಿವರು ಆ ಕಂಪನಿಯ ಪಾಲುದಾರರಂತೆ. ಹೀಗಾಗಿ ಕೆಲ ಜನಪ್ರತಿನಿಧಿಗಳು- ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ನಮಗೆ ಐಆರ್‌ಬಿ ಜಿಲ್ಲೆಯಲ್ಲಿ ಬೇಡವಾಗಿದೆ. ಈವರೆಗೆ ಮೃತಪಟ್ಟಿರುವ, ಮುಂದೆ ಆಗುವ ಘಟನೆಗಳಿಗೆ ಐಆರ್‌ಬಿ ಹಾಗೂ ಕೇಂದ್ರ ಸರ್ಕಾರವೇ ಕಾರಣವಾಗಲಿದೆ ಎಂದರು.ಸಿಆರ್‌ಜೆಡ್ ಅನುಮತಿ ಇಲ್ಲದೇ ಅಭಿವೃದ್ಧಿಗೆ ಬಂದ ಹಣ ಹಿಂತಿರುಗಿದೆ. ಕಾರವಾರದಿಂದ ಭಟ್ಕಳದವರೆಗೆ 320 ಕಿಮೀ ಕಡಲ ಕೊರೆತ ತಡೆಗೆ ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ಬಂದರು ಅಭಿವೃದ್ಧಿ ಹಾಗೂ ಅಲ್ಲಿನ ಹೂಳು ತೆಗೆಯಲು ಶ್ರಮಿಸಲಾಗುತ್ತದೆ ಎಂದರು.