ಮುದ್ದಹನುಮೇಗೌಡರ ಗೆಲವು ಖಚಿತ: ಬೆಮೆಲ್ ಕಾಂತರಾಜು ವಿಶ್ವಾಸ

| Published : Mar 19 2024, 12:50 AM IST

ಸಾರಾಂಶ

ವಿ.ಸೋಮಣ್ಣನವರಿಗೆ ಮಾಜಿ ಸಚಿವ ಮಾಧುಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ವಿರೋಧವಿದೆ. ಅವರು ಪ್ರಾಮಾಣಿಕವಾಗಿ ಸೋಮಣ್ಣನವರ ಪರ ಇರುತ್ತಾರೆಂದು ನಂಬುವುದು ಕಷ್ಟ ಎಂದು ಬೆಮಲ್ ಕಾಂತರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್.ಪಿ. ಮುದ್ದಹನುಮೇಗೌಡರವರ ಗೆಲವು ಖಚಿತ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಕಾರ್ಯಾಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತನ್ನ ಉಳಿವಿಗಾಗಿ ಬಿಜೆಪಿ ಸೇರಿಕೊಂಡಿದೆ. ದೇಶ ಉದ್ಧಾರ ಮಾಡಲು ಅಲ್ಲ. ತಮ್ಮ ಪಕ್ಷದ ಉದ್ಧಾರ ಮಾಡಿಕೊಳ್ಳಲು ಅಷ್ಟೆ. ಬಿಜೆಪಿ ಅಭ್ಯರ್ಥಿಯಾಗಿರುವ ಸೋಮಣ್ಣ ನವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣ ತಮ್ಮ ಜಾತಿ. ಆದರೆ ಈ ಕ್ಷೇತ್ರದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ಈ ಕ್ಷೇತ್ರದ ಜನರಿಗೆ ಬಿಜೆಪಿಯ ಕೊಡುಗೆ ಏನು ಎಂಬುದು ತಿಳಿದಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ಪ್ರಮುಖ ಅಗತ್ಯವುಳ್ಳ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಗಾಗಿ ಜನರು ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ಕಾಯುತ್ತಿದ್ದಾರೆ ಎಂದು ಬೆಮಲ್ ಕಾಂತರಾಜ್ ಹೇಳಿದರು.

ವಿ.ಸೋಮಣ್ಣನವರಿಗೆ ಮಾಜಿ ಸಚಿವ ಮಾಧುಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪನವರ ಕುಟುಂಬದ ವಿರೋಧವಿದೆ. ಅವರು ಪ್ರಾಮಾಣಿಕವಾಗಿ ಸೋಮಣ್ಣನವರ ಪರ ಇರುತ್ತಾರೆಂದು ನಂಬುವುದು ಕಷ್ಟ ಎಂದು ಬೆಮಲ್ ಕಾಂತರಾಜ್ ಹೇಳಿದರು.

ವಿ.ಸೋಮಣ್ಣನವರಿಗೆ ಹೋಲಿಸಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮುದ್ದಹನುಮೇಗೌಡರು ನೂರಕ್ಕೆ ನೂರರಷ್ಟು ಉತ್ತಮ ಅಭ್ಯರ್ಥಿ. ಸಾರ್ವಜನಿಕರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ್ದಾರೆ. ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ನಲ್ಲಿ ಯಾವುದೇ ಗೊಂದಲವಿಲ್ಲ. ಹಾಗಾಗಿ ಮುದ್ದಹನುಮೇಗೌಡರು ಸುಮಾರು ೨ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವುದು ಖಚಿತ ಎಂದು ಬೆಮಲ್ ಕಾಂತರಾಜ್ ವಿಶ್ವಾಸ ವ್ಯಕ್ತಪಡಿಸಿದರು.

ಮುಂದೆ ಬಿಜೆಪಿ ಗೆಲುವು ಸಾಧಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಗ್ಯಾಸ್ ಬೆಲೆಯನ್ನು ದುಪ್ಪಟ್ಟು ಮಾಡುತ್ತಾರೆ. ಬಿಜೆಪಿಯವರು ಬಡವರ ಪರ ಅಲ್ಲ. ಅದು ಶ್ರೀಮಂತರ ಪಕ್ಷ. ಬಿಜೆಪಿಯವರು ಜಾತಿ ಮತ್ತು ಧರ್ಮದ ಮೇಲೆ ರಾಜಕಾರಣ ಮಾಡುತ್ತಾರೆ. ಅದು ಬಹಳ ದಿನ ನಡೆಯುವುದಿಲ್ಲ. ಈ ಬಾರಿ ತಕ್ಕ ಬೆಲೆ ತೆರುತ್ತಾರೆ ಎಂದರು.

ಸಿದ್ದು ಗ್ಯಾರಂಟಿ ಕೈಹಿಡಿಯುತ್ತವೆ:

ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಚುನಾವಣೆಗೂ ಮುನ್ನ ನೀಡಲಾಗಿದ್ದ ಎಲ್ಲಾ ೫ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸಿರುವ ಹಿರಿಮೆ ಕಾಂಗ್ರೆಸ್ ಗೆ ಇದೆ. ಇದು ಬಡವರನ್ನು ಸಬಲರನ್ನಾಗಿಸುವ ಕಾರ್ಯಕ್ರಮ. ಅದು ರಾಜ್ಯದಲ್ಲಿ ಯಶಸ್ವಿಯಾಗಿದೆ.

ಮಾರ್ಚ್ ೨೩ ರಂದು ತುರುವೇಕೆರೆಗೆ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸಚಿವ ಕೆ.ಎನ್. ರಾಜಣ್ಣ ಸೇರಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಗಮಿಸಲಿದ್ದಾರೆ. ಅಂದು ಸಂತೆ ಬೀದಿಯಲ್ಲಿರುವ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ನಂತರ ಪ್ರತಿ ಹೋಬಳಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಲಿದೆ. ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಬೆಮಲ್ ಕಾಂತರಾಜ್ ಮನವಿ ಮಾಡಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್, ಮುಖಂಡರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್. ಜಯರಾಮ್. ಕೆ.ಬಿ. ಹನುಮಂತಯ್ಯ, ಶಶಿಶೇಖರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸಿಎಸ್ ಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗಿರಿಜಾ ಕೆಂಪರಾಜ್, ದಬ್ಬೇಘಟ್ಟ ವೇಣುಗೋಪಾಲ್, ಭೈರಪ್ಪ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೈಯದ್ ನೂರುಲ್ಲಾ, ಆಫ್ಜಲ್, ದಲಿತ ಮುಖಂಡರಾದ ಗುರುದತ್, ನರಸಿಂಹಯ್ಯ, ತ್ರೈಲೋಕಿ, ಕೊಂಡಜ್ಜಿ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ವಿ.ಸೋಮಣ್ಣ ಜಾತಿ,ಧರ್ಮಗಳ ಮಧ್ಯ ಜಗಳ ತಂಡಿಡುವರು: ಬೆಮೆಲ್ ಲೇವಡಿಜೆಡಿಎಸ್ ಮತ್ತು ಬಿಜೆಪಿಯ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ನವರು ತುಮಕೂರು ಕ್ಷೇತ್ರವನ್ನು ಎರಡನೇ ವಾರಣಾಸಿ ಮಾಡುವುದಾಗಿ ಹೇಳಿರುವುದು ಹಾಸ್ಯಾಸ್ಪದ. ಅವರು ವಾರಣಾಸಿ ಮಾಡುವುದಿಲ್ಲ. ಬದಲಾಗಿ ಜಿಲ್ಲೆಯಲ್ಲಿ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಜಗಳ ತಂದಿಡುತ್ತಾರಷ್ಟೆ ಎಂದು ಬೆಮಲ್ ಕಾಂತರಾಜ್ ಲೇವಡಿ ಮಾಡಿದರು.

ಈ ಹಿಂದೆ ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆಗಿದ್ದ ಮೈತ್ರಿಯ ವೇಳೆ ಅನ್ಯಾಯವಾಗಿತ್ತು. ಆ ಅನ್ಯಾಯವನ್ನು ಈಗ ಸರಿಪಡಿಸಲಾಗಿದೆ. ಮೈತ್ರಿಯಲ್ಲಿ ಜೆಡಿಎಸ್ ಗೆ ಬಿಟ್ಟುಕೊಡಬೇಕಾಗಿತ್ತು. ಈಗ ಪರಿಸ್ಥಿತಿ ಬೇರೆಯಾಗಿದೆ. ಬಿಜೆಪಿಗೆ ಮೋದಿ ಒಬ್ಬರೇ ಅಸ್ತ್ರ. ಅವರನ್ನು ಬಿಟ್ಟರೆ ಬೇರೆ ಏನಾದರೂ ಸಾಧನೆ ಇದೆಯಾ? ಇಲ್ಲ. ಮೋದಿಯವರು ಬಾಯಿ ಬಿಟ್ಟರೆ ಸುಳ್ಳು ಹೇಳ್ತಾರೆ. ಅದೂ ಜನರಿಗೆ ಗೊತ್ತಾಗಿದೆ. ಆದ್ದರಿಂದ ಬಿಜೆಪಿಗೆ ಸೋಲು ಖಚಿತ ಎಂದು ಬೆಮಲ್ ಕಾಂತರಾಜ್ ರವರು ಭವಿಷ್ಯ ನುಡಿದರು.