ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ನಗರಸಭೆಯ ಎರಡನೇ ಅವಧಿಗೆ ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ನ ಸುನಂದಾ ತೇಲಿ ಅವರು ಅಧ್ಯಕ್ಷೆಯಾಗಿ, ಮಹಿಬೂಬ ಬಾಗವಾನ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಈ ಮೂಲಕ ಮುಧೋಳ ನಗರಸಭೆ ಕಾಂಗ್ರೆಸ್ ಪಾಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಸುನಂದಾ ಹಣಮಂತ ತೇಲಿ ಮತ್ತು ಗಾಯತ್ರಿ ಗಣಪತಿ ಸಿಂಗಾಡಿ, ಉಪಾಧ್ಯಕ್ಷ ಸ್ಥಾನಕ್ಕೆ ರಾಜಾಸಾಬ ದಸ್ತಗೀರ ಸಾಬ ರಫುಗಾರ ಮತ್ತು ಮಹಿಬೂಬ ಬಾಗವಾನ ನಾಮಪತ್ರ ಸಲ್ಲಿಕೆ ಮಾಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಾಯತ್ರಿ ಸಿಂಗಾಡಿ ಅವರಿಗೆ 16 ಜನ ಸದಸ್ಯರು ಬೆಂಬಲ ಸೂಚಿಸಿದರು. ಸುನಂದಾ ತೇಲಿ ಅವರಿಗೆ 17 ಜನ ಸದಸ್ಯರು ಬೆಂಬಲ ಸೂಚಿಸಿದರು. ಹೀಗಾಗಿ ಅತೀ ಹೆಚ್ಚು ಸದಸ್ಯರ ಬೆಂಬಲ ಪಡೆದ ಸುನಂದಾ ತೇಲಿ ಅವರು ಅಧ್ಯಕ್ಷೆಯಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ರಾಜಾಸಾಬ ದಸ್ತಗೀರಸಾಬ ರಫುಗಾರ ಅವರಿಗೆ 16 ಜನ ಸದಸ್ಯರು ಬೆಂಬಲ ಸೂಚಿಸಿದರೆ, ಮಹಿಬೂಬ ಮುಕ್ತುಸಾಬ ಬಾಗವಾನ ಅವರಿಗೆ 17 ಜನ ಸದಸ್ಯರು ಬೆಂಬಲ ಸೂಚಿಸಿದರು. ಅತೀ ಹೆಚ್ಚು ಸದಸ್ಯರ ಬೆಂಬಲ ಪಡೆದ ಮಹಿಬೂಬ ಬಾಗವಾನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾಗಿದ್ದ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಕರ ಘೋಷಿಸಿದರು.
ಮೊದಲ ಅವಧಿಯಲ್ಲಿ ಬಿಜೆಪಿಗೆ ಅಧಿಕಾರ:ಮುಧೋಳ ನಗರಸಭೆಗೆ ಒಟ್ಟು 31 ಜನ ಸದಸ್ಯರಿದ್ದು, ಈ ಪೈಕಿ ಬಿಜೆಪಿಯ 16 ಜನ, ಕಾಂಗ್ರೆಸ್ಸಿನ 14 ಜನ, ಪಕ್ಷೇತರ ಒಬ್ಬರು ಸದಸ್ಯರು ಇದ್ದಾರೆ. ಮೊದಲನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ನಾಲ್ವರು, ಪಕ್ಷೇತರ ಓರ್ವ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿದಿದೆ.
ಕಾಂಗ್ರೆಸ್ ಬೆಂಬಲಿಸಿ ಉಪಾಧ್ಯಕ್ಷರಾದ ಮಹಿಬೂಬ:14 ಜನ ಕಾಂಗ್ರೆಸ್ ಸದಸ್ಯರ ಪೈಕಿ ರಾಜಾಸಾಬ ರಫುಗಾರ, ಲತಾ ಗಾಯಕವಾಡ ಮತ್ತು ದ್ರಾಕ್ಷಾಯಿಣಿ ಹಲಸಂಗಿಮಠ ಈ 3 ಜನ ಸದಸ್ಯರು ಬಿಜೆಪಿ ಗೆ ಬೆಂಬಲ ನೀಡಿದರೆ, 16 ಜನ ಬಿಜೆಪಿ ಸದಸ್ಯರ ಪೈಕಿ ಸುರೇಶ ಕಾಂಬಳೆ, ಸುನಿತಾ ಭೋವಿ, ಸದಾಶಿವ ಜೋಶಿ ಮತ್ತು ಪಾರ್ವತೆವ್ವ ಹರಗಿ ಈ 4 ಜನ ಸದಸ್ಯರು ಕಾಂಗ್ರೆಸ್ಸಿಗೆ ಬೆಂಬಲ ನೀಡಿದರು. ಪಕ್ಷೇತರ ಸದಸ್ಯ ಮಹಿಬೂಬ ಬಾಗವಾನ ಅವರು ಮೊದಲನೇ ಅವಧಿಗೆ ಬಿಜೆಪಿಗೆ ಬೆಂಬಲ ನೀಡಿದರೆ, ಎರಡನೇ ಅವಧಿಗೆ ಕಾಂಗ್ರೆಸ್ಸಿಗೆ ಬೆಂಬಲ ನೀಡಿ ಉಪಾಧ್ಯಕ್ಷರಾಗಿದ್ದಾರೆ. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿದರೆ, ಕ್ಷೇತ್ರದ ಶಾಸಕ ಆರ್.ಬಿ.ತಿಮ್ಮಾಪೂರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಹಾಕಿದರು.
ಬಿಜೆಪಿ 16 ಜನ ಸದಸ್ಯರಿದ್ದರೂ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್ 14 ಜನ ಸದಸ್ಯರಿದ್ದು ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಸಫಲವಾಗಿದೆ. ಅಸಮಾದಾನಗೊಂಡಿರುವ ಕಾಂಗ್ರೆಸ್ ಸದಸ್ಯರನ್ನು ಸೆಳೆಯುವಲ್ಲಿ ಬಿಜೆಪಿಯವರು ಯಶಸ್ವಿಯಾಗಲಿಲ್ಲ. ಆದರೆ ಅಸಮಾಧಾನಗೊಂಡಿರುವ ಬಿಜೆಪಿ ಸದಸ್ಯರನ್ನು ಸೆಳೆಯುವಲ್ಲಿ ಕಾಂಗ್ರೆಸ್ ನವರು ಯಶಸ್ವಿಯಾಗಿದ್ದಾರೆ. ಕ್ಷೇತ್ರದ ಶಾಸಕ ಆರ್.ಬಿ.ತಿಮ್ಮಾಪೂರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ತಮ್ಮ ರಾಜಕೀಯ ತಂತ್ರವನ್ನು ಬಳಸಿಕೊಂಡು ಬಿಜೆಪಿ ಸದಸ್ಯರನ್ನು ಕಾಂಗ್ರೆಸ್‌ಗೆ ಕರೆತರುವಲ್ಲಿ ಯಶಸ್ವಿ ಯಾಗಿದ್ದಾರೆ. ಸಚಿವ ಆರ್.ಬಿ.ತಿಮ್ಮಾಪೂರ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿ, ಅಭಿನಂದಿಸಿದರು. ನಗರಸಭೆ ಸದಸ್ಯರು, ನಗರಸಭೆ ಸಿಬ್ಬಂದಿ ಮತ್ತು ಕಾಂಗ್ರೆಸ್ ಮುಖಂಡರು ನೂತನ ಅಧ್ಯಕ್ಷ-ಉಪಾಧ್ಯಕ್ಷರುಗಳಿಗೆ ಅಭಿನಂದಿಸಿದರು.----
ಕೋಟ್ಮುಧೋಳ ನಗರಕ್ಕೆ ಬೇಕಾಗುವ ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ತಾವು ಸರ್ಕಾರದಿಂದ ಸಾಕಷ್ಟು ರೀತಿಯ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮುಧೋಳ ನಗರದ ಜನತೆಗೆ ಶುದ್ಧ ಕುಡಿಯುವ ನೀರು, ಶೌಚಾಲಯ, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಪ್ರಥಮ ಆದ್ಯತೆ ನೀಡಲಾಗುವುದು.
- ಆರ್.ಬಿ.ತಿಮ್ಮಾಪುರ, ಸಚಿವ---7 ಜನ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ
ಮುಧೋಳ:ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ತಾಲೂಕಿನ ಬಿಜೆಪಿ ಹಿರಿಯ ಮುಖಂಡ ರಾಮಣ್ಣ ತಳೇವಾಡ ಸೇರಿದಂತೆ ಬಸವರಾಜ ಮಾನೆ, ಪುಂಡಲೀಕ ಬೋವಿ ಹಾಗೂ ನಗರಸಭೆ ಬಿಜೆಪಿ ಸದಸ್ಯರಾದ ಸುರೇಶ ಕಾಂಬಳೆ, ಸುನೀತಾ ಭೋವಿ, ಪಾರ್ವತೆವ್ವ ಹರಗಿ, ಸದಾಶಿವ ಜೋಶಿ ಇವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಗ್ರಾಮೀಣ ಮಂಡಳ ಅಧ್ಯಕ್ಷ ಸಂಗಣಗೌಡ ಕಾತರಕಿ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಬಸಯ್ಯ ಹಿರೇಮಠ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.