ನಂದನ ಹೊಸೂರು ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತ

| Published : Oct 21 2024, 12:32 AM IST

ಸಾರಾಂಶ

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮುಟ್ಟಾದ ಹೆಣ್ಣು ಮಕ್ಕಳು ತಮ್ಮ ಮನೆಗಳನ್ನು ತೊರೆದು, ಗ್ರಾಮದ ಹೊರಗಿನ ಕುಟೀರದಲ್ಲಿ ವಾಸಿಸುವ ಮೌಢ್ಯ ಇನ್ನೂ ಜೀವಂತವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿಯೇ ಮೌಢ್ಯಾಚರಣೆ ಬೆಳಕಿಗೆ ಬಂದಿದೆ.

ಕನ್ನಡಪ್ರಭವಾರ್ತೆ ಹೊಳಲ್ಕೆರೆ

ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮುಟ್ಟಾದ ಹೆಣ್ಣು ಮಕ್ಕಳು ತಮ್ಮ ಮನೆಗಳನ್ನು ತೊರೆದು, ಗ್ರಾಮದ ಹೊರಗಿನ ಕುಟೀರದಲ್ಲಿ ವಾಸಿಸುವ ಮೌಢ್ಯ ಇನ್ನೂ ಜೀವಂತವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿಯೇ ಮೌಢ್ಯಾಚರಣೆ ಬೆಳಕಿಗೆ ಬಂದಿದೆ.

ಹೊಳಲ್ಕೆರೆ ತಾಲೂಕು ನಂದನ ಹೊಸೂರು ಗೊಲ್ಲರಹಟ್ಟಿ ಮತ್ತು ಹೊರಕೆದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೌಢ್ಯ ಹಾಗೂ ಆಚರಣೆಗಳ ವಿರುದ್ಧ ಜಾಗೃತಿ ಕಾರ್ಯಕ್ರಮ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ತಿಂಗಳ ಮುಟ್ಟಾದ 5 ಮಹಿಳೆಯರು ತಟ್ಟೆ ಲೋಟ ಹಿಡಿದು ಗ್ರಾಮದ ಹೊರಗೆ ವಾಸ್ತವ್ಯ ಹೂಡಿದ್ದುದು ಇಲಖೆ ಗಮನಕ್ಕೆ ಬಂತು. ಮುಟ್ಟಾದವರನ್ನು ಸೂತಕ ಎಂದು ತಿಳಿದು ಮನೆಯಿಂದ ಹೊರಗೆ ಕಳುಹಿಸಿ ಕುಟೀರದಲ್ಲಿ ವಾಸ ಇರುವಂತೆ ಮನೆಯವರೇ ಹೇಳಿದ್ದಾರೆ.

ಇದನ್ನು ಕಂಡ ಲಿಂಗತಜ್ಞೆ ಗೀತಾ ನಾಯ್ಕ್ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ, ಅವರಿಗೆ ಮನೆಗೆ ತೆರಳುವಂತೆ ಹೇಳಿದರು. ಆದರೆ ಮಹಿಳೆಯರ ಅತ್ತೆಯಂದಿರು ಪ್ರತಿರೋಧ ತೋರಿ, ನಾವು ಈ ಆಚರಣೆಯನ್ನು ಹಲವಾರು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತೇವೆ. ಊರಿನಲ್ಲಿ ಯಾವುದೇ ಹೆಣ್ಣು ಮಗಳು ಋತುಮತಿ ಆದರೆ ಮತ್ತು ಹೆರಿಗೆ ಆದರೆ ಮಹಿಳೆ ಮನೆಯನ್ನು ತೊರೆದು ಕುಟೀರಗಳಲ್ಲಿ ವಾಸ್ತವ್ಯ ಹೂಡುವುದು ವಾಡಿಕೆ ಎಂದು ಅಧಿಕಾರಿಗಳ ಜೊತೆ ವಾಗ್ವಾದ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ನಂತರ ಅನಿವಾರ್ಯವಾಗಿ ಹೆಣ್ಣು ಮಕ್ಕಳನ್ನು ಮನಗೆ ಸೇರಿಸಿದ್ದಾರೆ.

ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಜಾಗೃತಿ ಕಾರ್ಯಕ್ರಮದಲ್ಲಿ ಲಿಂಗತಜ್ಞೆ ಗೀತಾನಾಯ್ಕ್ ಮುಂದಿನ ದಿನಗಳಲ್ಲಿ ಈ ತರಹ ಆಚರಣೆಗಳು ಕಂಡು ಬಂದಲ್ಲಿ ಮೇಲಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಈ ತರದ ಪದ್ಧತಿಗಳು ಗೊಲ್ಲರಹಟ್ಟಿ ಕಂಡುಬಂದಲ್ಲಿ ಮಹಿಳಾ ಸಹಾಯವಾಣಿ ಸಂಖ್ಯೆ 181 ಮತ್ತು ಪೊಲೀಸ್ ಸಹಾಯವಾಣಿ 112 ಕರೆ ಮಾಡಬೇಕು ಗ್ರಾಮದ ಮಹಿಳೆಯರಿಗೆ ಜಾಗೃತಿ ಮೂಡಿಸಿದರು.

ಬಾಲ್ಯ ವಿವಾಹ ನಿಷೇಧ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಬಾಲ ತಾಯಂದಿರು, ಪೋಕ್ಸೋ ಕಾಯಿದೆ ಕುರಿತು ಜಾಗೃತಿಯನ್ನು ಮೂಡಿಸಲಾಯಿತು. ಮಕ್ಕಳ ಸಹಾಯವಾಣಿ ಸಂಖ್ಯೆ1098 ಕುರಿತು ಪ್ರಚುರಪಡಿಸಲಾಯಿತು.