ಸಾರಾಂಶ
ಚಾಮರಾಜನಗರದ ಗ್ರಾಮ ದೇವತೆ ಮುದುಕ ಮಾರಮ್ಮನ ಹಬ್ಬದ ಪ್ರಯುಕ್ತ ಮಂಗಳವಾರ ಬೆಳಗ್ಗೆ ಶ್ರದ್ಧಾ ಭಕ್ತಿಯ ಮೆರವಣಿಗೆಯು ದೇವಸ್ಥಾನದ ಆವರಣದಲ್ಲಿ ಸಮಾಪ್ತಿಗೊಂಡಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲಾ ಕೇಂದ್ರ ಚಾಮರಾಜನಗರದ ಗ್ರಾಮ ದೇವತೆ ಮುದುಕ ಮಾರಮ್ಮನ ಹಬ್ಬಕ್ಕೆ ಮಂಗಳವಾರ ಬೆಳಗ್ಗೆ ನಡೆದ ಶ್ರದ್ಧಾ ಭಕ್ತಿಯ ಮೆರವಣಿಯೊಂದಿಗೆ ತೆರೆ ಬಿದ್ದಿತು.ಸೋಮವಾರ ಬೆಳಗ್ಗೆಯಿಂದಲೇ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮಾರಮ್ಮನ ದೇವಸ್ಥಾದಲ್ಲಿ ಮಾರಮ್ಮನಿಗೆ ವಿಶೇಷ ಪೂಜೆ, ಹೋಮ ಹವನಗಳು ಪ್ರಾರಂಭವಾಗಿ ನಡು ರಾತ್ರಿಯವರೆಗೂ ನಡೆದವು. ಸಂಜೆ ಪ್ರಾರಂಭವಾದ ತಂಪಿನ ಪೂಜೆಯನ್ನು ಮಹಿಳೆಯರು ತಂಡೋಪ ತಂಡವಾಗಿ ಬಂದು ನೆರವೇರಿಸಿದರು, ಬೇರೆ ಗ್ರಾಮಗಳಿಂದ ಆಗಮಿಸಿದ ಸತ್ತಿಗೆ, ಸೂರಪಾನಿಗಳನ್ನು ಪೂಜೆ ನೀಡಿ ಸ್ವಾಗತಿಸಲಾಯಿತು.
ರಾತ್ರಿ ದೇವಸ್ಥಾನದ ಆವರಣದಲ್ಲಿ ಕಲ್ಲು ಅಥನಾ ಇಟ್ಟಿಗೆ ಒಲೆ ಒಡ್ಡಿ ಭಕ್ತರು ಮಡೆ ಮಾಡಿ ಇಡಿ ರಾತ್ರಿ ಜಾಗರಣೆ ಇದ್ದರು, ಯುವಕರು ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಮಂಗಳವಾರ ಬೆಳಗಿನ ಜಾವ ದೊಡ್ಡರಸಿನ ಕೊಳಕ್ಕೆ ತೆರಳಿದ ಮೆರವಣಿಗೆ ಅಲ್ಲಿ ಪೂಜೆ ನೆರವೇರಿಸಿ, ತಲೆ ಮೇಲೆ ಕೇಲು ಹೊತ್ತ ಬಾಲಕಿ ಮತ್ತು ಮಹಿಳೆಯರೊಡಗೂಡಿ, ಸತ್ತಿಗೆ, ಸೂರಪಾನಿ ಸಹಿತ ಮೆರವಣಿಗೆ, ತಂಪಿನ ಪೂಜೆ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ತಂದರು.ಮೆರವಣಿಗೆ ದೇವಸ್ಥಾನದ ಆವರಣ ತಲುಪಿದ್ದಂತೆಯೇ ಭಕ್ತರು ಜಯಘೋಷ ಹಾಕಿದರು, ನಂತರ ಕೋಳಿ ಬಲಿಯೊಂದಿಗೆ ವಿಶೇಷ ಪೂಜೆ ನಡೆದು ಮಹಾಮಂಗಳಾರತಿ ನಡೆಯುತ್ತಿದ್ದಂತೆಯೇ, ಭಕ್ತರು ತಲೆ ಮೇಲೆ ಮಡೆ ಪಾತ್ರೆ ಹೊತ್ತು ತಮ್ಮ ತಮ್ಮ ಮನೆಳಿಗೆ ತೆರಳಿ, ಮನೆಗಳಿಗೆ ನೆಂಟರಿಷ್ಟರಿಗೆ ವಿಶೇಷ ಭೋಜನ ಮಾಡಿ ಬಡಿಸಿ, ಸಂಭ್ರಮಿಸಿದರು.