ಸಾರಾಂಶ
ಗದಗ: ತ್ಯಾಗ, ಬಲಿದಾನದ ಪ್ರತೀಕ ಹಾಗೂ ಹಿಂದು-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಭಾನುವಾರ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಮೊಹರಂ ಹಬ್ಬದ ಕೊನೆಯ ದಿನವಾದ ಭಾನುವಾರ ವಿವಿಧ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲೆ ದೇವರನ್ನು ಕೋಲಾಟ, ಯುವಕರ ಹೆಜ್ಜೆ ಮೇಳಗಳೊಂದಿಗೆ ಪಾಂಜಾ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಸಿ, ಅಲೈ ದೇವರುಗಳ ಭೇಟಿ ಕೊಡುವುದನ್ನು ಕಣ್ತುಂಬಿಕೊಂಡ ಜನ ಸಮೂಹ ಪಾಂಜಾಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಭಾವದಿಂದ ನಮಿಸಿದರು.ಲಕ್ಕುಂಡಿಯಲ್ಲಿ ಮೊಹರಂ ಆಚರಣೆ:ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದು-ಮುಸಲ್ಮಾನ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿ ಭಾವೈಕ್ಯತೆ ಮೆರೆದರು.ಹಿರೇಮಸೂತಿ, ಲಾಲಶಾವಲಿ, ಬೋರೆಗಾರ, ತಾಡಪತ್ರಿ, ಬಾರಾ ಇಮಾಮ, ಗಂದೀಗೇರ ಮಸೂತಿಯಲ್ಲಿ ಕಳೆದ 5 ದಿನಗಳಿಂದ ಡೋಲಿ ಮತ್ತು ಪಾಂಜಾ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ತಾಡಪತ್ರಿ ಮಸೂತಿ ಹೊರತುಪಡಿಸಿ 14 ಪಾಂಜಾ ಹಾಗೂ 2 ಡೋಲಿ ದೇವರನ್ನು ಬಜಾರ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಯುವಕರ ತಂಡವು ಜಾನಪದ ಹಾಡುಗಳೊಂದಿಗೆ ಮಾಡಿದ ಕೋಲಾಟ ನೃತ್ಯ ಗಮನ ಸೆಳೆಯಿತು. ಭಕ್ತರು ಬೆಲ್ಲದ ನೈವೇದ್ಯವನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹಿರೇ ಮಸೂತಿಯಿಂದ ಬಜಾರ ರಸ್ತೆಯ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಎಲ್ಲ ಪಾಂಜಾ ಹಾಗೂ ಡೋಲಿ ದೇವರುಗಳು ಸಂಗಮಗೊಂಡ ನಂತರ ಪಾರ್ಥನೆ ಕಾರ್ಯಕ್ರಮ ನೆರವೇರಿತು. ಸಂಜೆ ಮತ್ತೆ ಮೆರವಣಿಗೆ ಮೂಲಕ ಹೊಳೆಗೆ ಕಳಿಸಲಾಯಿತು. ಇದಕ್ಕೂ ಪೂರ್ವ ದಿನ ಮಧ್ಯೆ ರಾತ್ರಿ ಅಗ್ನಿ ಹಾಯುವ ಕಾರ್ಯಕ್ರಮ ನೆರವೇರಿತು.