ಮಠದಲ್ಲಿ ಪೀರಲು ದೇವರಿಟ್ಟು ಮೊಹರಂ ಆಚರಣೆ

| Published : Jul 17 2024, 12:51 AM IST

ಸಾರಾಂಶ

ಹೂವಿನಹಡಗಲಿ ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಹಿಂದೂ-ಮುಸ್ಲಿಂ ಭಾಂದವರು ಸೇರಿಕೊಂಡು ಮೊಹರಂ ಹಬ್ಬವನ್ನು ಆಚರಿಸಿ ಶ್ರದ್ಧಾ ಭಕ್ತಿಯಿಂದ ಭಾವೈಕ್ಯತೆ ಮೆರೆದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಎಲ್ಲ ಹಳ್ಳಿಗಳಲ್ಲಿ ಹಿಂದೂ-ಮುಸ್ಲಿಂ ಭಾಂದವರು ಸೇರಿಕೊಂಡು ಮೊಹರಂ ಹಬ್ಬವನ್ನು ಆಚರಿಸಿ ಶ್ರದ್ಧಾ ಭಕ್ತಿಯಿಂದ ಭಾವೈಕ್ಯತೆ ಮೆರೆದರು.

ಮುಸ್ಲಿಂ ಜನರಿಲ್ಲದ ಗ್ರಾಮಗಳಲ್ಲಿ ಹಿಂದೂಗಳೇ ಸೇರಿಕೊಂಡು ಪೀರಲು ದೇವರನ್ನು ಸಂಪ್ರದಾಯದಂತೆ ಪ್ರತಿಷ್ಠಾಪಿಸಿದ್ದರು. ನಂತರದಲ್ಲಿ ಅಲಾಯಿ ಕುಣಿ ತೆಗೆದು ಅದರಲ್ಲಿ ಬೆಂಕಿ ಹಾಕಿ, ಖತಲ್ ರಾತ್ ದಿನ ನೂರಾರು ಭಕ್ತರು ಪೀರಲು ದೇವರನ್ನು ಹಿಡಿದುಕೊಂಡು ಬೆಂಕಿಯನ್ನು ಹಾಯ್ದರು.

ತಾಲೂಕಿನ ಬ್ಯಾಲಹುಣ್ಣಿ ಗ್ರಾಮದಲ್ಲಿ ಪೀರಲು ದೇವರನ್ನು ಪ್ರತಿಷ್ಠಾಪನೆ ಮಾಡಲು ಮಸೀದಿ ಇಲ್ಲ. ಕಾರಣ ಈ ಗ್ರಾಮದಲ್ಲಿ ಮುಸ್ಲಿಂ ಜನಾಂಗವೇ ಇಲ್ಲ, ಗ್ರಾಮದ ಫಕ್ಕೀರಸ್ವಾಮಿ ಮಠದಲ್ಲಿ, ಪೀರಲು ದೇವರುಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.

ತಾಲೂಕಿನ ತಿಮ್ಲಾಪುರ, ಶಿವಪುರ, ಅಲ್ಲಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮುಸ್ಲಿಂ ಕುಟುಂಬಗಳೇ ವಾಸವಾಗಿಲ್ಲ. ಇಂತಹ ಗ್ರಾಮಗಳಲ್ಲಿ ಗುರು ಹಿರಿಯರು ಸೇರಿಕೊಂಡು, ದೇವರನ್ನು ಪದ್ಧತಿಯ ಪ್ರಕಾರ ಮೆರವಣಿಗೆ ಮೂಲಕ ಬಡಿಗೇರ ಮನೆಯಿಂದ ಕರೆ ತಂದು ಪ್ರತಿಷ್ಠಾಪಿಸಿದ್ದರು. ಖತಲ್ ರಾತ್ ಅಂಗವಾಗಿ ಮನೆಯಲ್ಲಿ ಗೋಧಿಯಿಂದ ಮಾದಲಿ ಹಾಗೂ ಬೆಲ್ಲವನ್ನು ದೇವರಿಗೆ ಅರ್ಪಿಸಿದರು. ಜತೆಗೆ ಜಾನುವಾರುಗಳನ್ನು ಹೊಂದಿರುವ ರೈತರು ಮನೆಯಲ್ಲಿ ಉಣ್ಣೆ ಆಗಬಾರದೆಂದು ಹರಕೆ ಹೊತ್ತು, ಅಲಾಯಿ ಬೆಂಕಿಗೆ ಉಪ್ಪುನ್ನು ಹಾಕಿದರು. ಇನ್ನೂ ಕೆಲ ಭಕ್ತರು ಪೀರಲು ದೇವರುಗಳನ್ನು ದಾನವಾಗಿ ನೀಡುವ ಮೂಲಕ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆಗಳನ್ನು ತೀರಿಸಿದರು.ಬ್ಯಾಲಹುಣ್ಣಿ ಗ್ರಾಮದಲ್ಲಿ ಮಕ್ಕಳಾಗದ ಮಹಿಳೆಯರಿಗೆ ದೇವರು ಹೊತ್ತಿರುವವರು ಉಡಿ ತುಂಬಿದರು. ನಂತರದಲ್ಲಿ ಆಲಾಯಿ ಕುಣಿಯ ಬೆಂಕಿಯಲ್ಲಿದ್ದ ಕಬ್ಬಿಣದ ಅಚ್ಚು ಸಂಪೂರ್ಣ ಕಾಯ್ದು ನಿಗಿನಿಗಿ ಅನ್ನುತ್ತಿರುವ, ಅಚ್ಚವನ್ನು ಕೈಯಲ್ಲಿ ಹಿಡಿದುಕೊಂಡು ಹೊರಗೆ ಗ್ರಾಮದ ಎಲ್ಲರ ಸಹಕಾರದಿಂದ ಮೊಹರಂ ಹಬ್ಬವನ್ನು ಆಚರಿಸುತ್ತೇವೆ. ಮುಸ್ಲಿಂರು ಇಲ್ಲದ ಕಾರಣ ಮಕರಬ್ಬಿ ಗ್ರಾಮದಿಂದ ಮುಲ್ಲಾ ಸಾಹೇಬರನ್ನು ಕರೆ ತಂದು ಅವರಿಂದ ಪೂಜೆ ಮಾಡಿಸುತ್ತೇವೆ ಎನ್ನುತ್ತಾರೆ ಬ್ಯಾಲಹುಣ್ಸಿ ಗ್ರಾಮಸ್ಥರು.

ಮೊಹರಂ ಕೊನೆ ದಿನ ಹಲವಾರು ಕಡೆಗಳಲ್ಲಿ ಭಕ್ತರು ಹುಲಿವೇಷ, ಹಿಡಿಂಬಿ ಸೇರಿದಂತೆ ನಾನಾ ವೇಷಗಳನ್ನು ಹೊತ್ತು, ಮನೆ ಮನೆಗೆ ಹೋಗಿ ಹುಲಿ ಕುಣಿತದ ಮೂಲಕ ಜನರಿಗೆ ಮನೋರಂಜನೆ ನೀಡಿದರು. ನಂತರದಲ್ಲಿ ಪೀರಲು ದೇವರು ಹಾಗೂ ಡೋಲಿಯನ್ನು ಮೆರವಣಿಗೆ ಮೂಲಕ ನದಿ ತೀರಕ್ಕೆ ತೆಗೆದುಕೊಂಡು ಹೋಗಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ವಿಸರ್ಜಿಸಿದರು.