ಸಾರಾಂಶ
ಮಳೆಗಾಲದ ಪೂರ್ವ ತಯಾರಿ, ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೂಳಿಸುವ ಬಗ್ಗೆ, ಚರಂಡಿ ಹೂಳೆತ್ತುವಿಕೆ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಕಾರ್ನಾಡು ಸಮುದಾಯ ಭವನದಲ್ಲಿ ಜರಗಿದ ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಳೆಗಾಲದ ಪೂರ್ವ ತಯಾರಿ, ಅಪಾಯಕಾರಿ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೂಳಿಸುವ ಬಗ್ಗೆ, ಚರಂಡಿ ಹೂಳೆತ್ತುವಿಕೆ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿಯ ಕಾರ್ನಾಡು ಸಮುದಾಯ ಭವನದಲ್ಲಿ ಜರಗಿದ ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.ನ.ಪಂ. ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.
ನಗರ ಪಂಚಾಯತಿ ಮುಖ್ಯಾಧಿಕಾರಿ ಮಧುಕರ್ ಮಾತನಾಡಿ, ಮಳೆಗಾಲದ ಪೂರ್ವದ ಸಿದ್ಧತೆಗಳ ಕಾಮಗಾರಿ ನಡೆಸಲು ಪಂಚಾಯಿತಿ ಆಡಳಿತ ತೀರ್ಮಾನಿಸಲಾಗಿದ್ದು ಇದಕ್ಕೆ ಪ್ರತಿ ವಾರ್ಡ್ ನ ನಗರ ಪಂಚಾಯಿತಿ ಸದಸ್ಯರ ಸಹಕಾರ ಬೇಕು ಎಂದು ವಿನಂತಿಸಿದರು. ನಗರ ಪಂಚಾಯತಿ ಸದಸ್ಯ ಮಂಜುನಾಥ ಕಂಬಾರ್ ಮಾತನಾಡಿ, ಮೂಲ್ಕಿಯ ಕೆಎಸ್ ರಾವ್ ನಗರದ 13,14 ಮತ್ತು 15ನೇ ವಾರ್ಡ್ ನಲ್ಲಿ ಕುಡಿಯುವ ನೀರಿನ ಪೈಪ್ ಮೇಲೆ ಕೊಳಚೆ ನೀರಿನ ಚರಂಡಿಯಲ್ಲಿ ಹಾದು ಹೋಗಿದ್ದು ತೆರವುಗೊಳಿಸಲು ಅನೇಕ ಬಾರಿ ಮನವಿ ಮಾಡಿದ್ದರೂ ಇದುವರೆಗೂ ತೆರವುಗೊಳಿಸಿಲ್ಲ.ಕೆಲವು ಕಡೆ ಗುತ್ತಿಗೆದಾರರು ಅರ್ಧಂಬರ್ಧ ಚರಂಡಿ ಕೆಲಸ ಮಾಡಿ ಹೋಗಿದ್ದಾರೆ ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.ನಗರ ಪಂಚಾಯಿತಿ ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ, ಚಿತ್ರಾಪು ವಾರ್ಡ್ ನಲ್ಲಿ ಅಣೆಕಟ್ಟಿನಿಂದ ಉಪ್ಪು ನೀರು ಸೋರಿಕೆಯಾಗಿ ಬೆಳೆ ನಾಶವಾಗಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಸದಸ್ಯೆ ರಾಧಿಕಾ ಕೋಟ್ಯಾನ್ ಕೂಡಲೇ ನೂತನ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.ಕಾರ್ನಾಡಿನ ಸಮುದಾಯ ಆರೋಗ್ಯ ಕೇಂದ್ರದ ಎದುರು ನೂತನ ಬಸ್ ತಂಗುದಾಣ ನಿರ್ಮಾಣಕ್ಕೆ ಸಭೆಯಲ್ಲಿ ಚರ್ಚೆ ನಡೆದು ಆಸ್ಪತ್ರೆ ವೈದ್ಯ ಡಾ ಕೃಷ್ಣಾ ಅವರೊಡನೆ ಸಮಾಲೋಚನೆ ನಡೆಸಿ ದಾನಿಗಳ ನೆರವಿನಿಂದ ನಿರ್ಮಿಸುವ ಬಗ್ಗೆ ಸಭೆ ತೀರ್ಮಾನಿಸಿತು.
ಉಪಾಧ್ಯಕ್ಷೆ ಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ. ಮತ್ತಿತರರಿದ್ದರು. ಮುಖ್ಯಾಧಿಕಾರಿ ಮಧುಕರ್ ಕಾರ್ಯಕಲಾಪ ನಡೆಸಿಕೊಟ್ಟರು.