ಮೂಲ್ಕಿ ನಗರ ಪಂಚಾಯಿತಿ ಸಭೆ: ವಿವಿಧ ವಿಷಯಗಳ ಬಗ್ಗೆ ಚರ್ಚೆ

| Published : Nov 23 2024, 12:34 AM IST

ಸಾರಾಂಶ

ನ.ಪಂ. ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್ ಮತ್ತು ಫ್ಲೆಕ್ಸ್ ದರವನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಯಿತು ಹಾಗೂ ಅನಧಿಕೃತ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮಿತಿ ಮೀರುತತ್ತಿರುವ ಡ್ರಗ್ಸ್ ಮಾಫಿಯಾ, ವಿದ್ಯುತ್‌ ಇಲಾಖೆ ಸಮಸ್ಯೆ, ಬೀದಿ ನಾಯಿ ಹಾವಳಿ ಹೆಚ್ಚಳ, ಸಿಸಿ ಕ್ಯಾಮರಾ ಅಳವಡಿಕೆ ಮತ್ತಿತರ ವಿಷಯಗಳ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ಚರ್ಚಿಸಲಾಯಿತು. ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು.

ನಗರ ಪಂಚಾಯಿತಿ ವ್ಯಾಪ್ತಿಯ ಪಡುಬೈಲು, ಚಿತ್ರಾಪು ಮತ್ತಿತರ ಕಡೆಗಳಲ್ಲಿ ಡ್ರಗ್ಸ್ ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಮಕ್ಕಳಿಗೆ ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ನಾಮ ನಿರ್ದೇಶಿತ ಸದಸ್ಯ ಭೀಮಾ ಶಂಕರ್, ಬಾಲಚಂದ್ರ ಕಾಮತ್ ಮಾತನಾಡಿ ಹೆದ್ದಾರಿಯಲ್ಲಿ ಮೂಲ್ಕಿಯ ಅಪಾಯಕಾರಿ ಜಂಕ್ಷನ್ ಬಳಿ ರಸ್ತೆ ದಾಟಲು ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ, ಈ ಬಗ್ಗೆ ಅನೇಕ ಬಾರಿ ಟ್ರಾಫಿಕ್ ಪೊಲೀಸರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮೂಲ್ಕಿ ಬಸ್‌ ನಿಲ್ದಾಣದ ಬಳಿ ಹೆದ್ದಾರಿ ಬದಿ ಅಪಾಯಕಾರಿಯಾಗಿರುವ ಸರ್ಕಾರಿ ಬಸ್ ನಿಲುಗಡೆಯನ್ನು ಲಯನ್ಸ್ ಕ್ಲಬ್ ಕಟ್ಟಡದ ಬಳಿ ಸ್ಥಳಾಂತರಿಸಲು ಹಾಗೂ ಶನಿವಾರ ಕಾರ್ನಾಡ್ ಸಂತೆ ಬಳಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು. ನ.ಪಂ. ವ್ಯಾಪ್ತಿಯಲ್ಲಿ ಅಳವಡಿಸಲಾದ ಬ್ಯಾನರ್ ಮತ್ತು ಫ್ಲೆಕ್ಸ್ ದರವನ್ನು ಪರಿಷ್ಕರಣೆ ಮಾಡಲು ನಿರ್ಧರಿಸಲಾಯಿತು ಹಾಗೂ ಅನಧಿಕೃತ ಬ್ಯಾನರ್ ಅಳವಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಘನ ತ್ಯಾಜ್ಯ ನಿರ್ವಹಣೆ ಉಪನಿಯಮ 2019ನ್ನು ನಗರ ಪಂಚಾಯತಿಯಲ್ಲಿ ಅಳವಡಿಸುವ ಬಗ್ಗೆ ಮುಖ್ಯಾಧಿಕಾರಿ ಮಧುಕರ್ ಮಾಹಿತಿ ನೀಡಿದರು. ಸಭೆಯಲ್ಲಿ ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಹರ್ಷರಾಜ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರು ಸಭೆಯಲ್ಲಿ ಹಾಜರಿದ್ದರು.