ಕನ್ನಡಪ್ರಭ ವಾರ್ತೆ ಬೆಳಗಾವಿ

ಅಂದಾಜು ₹ 4500 ಕೋಟಿ ವಂಚನೆಯ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರಗೆ ಸಂಬಂಧಿಸಿದ ಶಿವಂ ಅಸೊಸಿಯೇಟ್ಸ್ ಹಗರಣವನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ಭಾನುವಾರ ನಗರಕ್ಕೆ ಆಗಮಿಸಿದ ಸಿಐಡಿ ಡಿಐಜಿ ಭೀಮಾಶಂಕರ ಗುಳೇದ ತನಿಖಾ ವರದಿಯ ಕಡತಗಳನ್ನು ವಶಕ್ಕೆ ಪಡೆದುಕೊಂಡರು. ಈ ಮಧ್ಯೆ ಶನಿವಾರ ರಾತ್ರಿ ಶಿವಾನಂದನನ್ನು ನ್ಯಾಯಧೀಶರ ಎದುರು ಹಾಜರುಪಡಿಸಿದ್ದ ಪೊಲೀಸರು, ಐದು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಬೆಳಗಾವಿಯ ಸಿಐಡಿ ತನಿಖಾ ತಂಡ ನೀಲಣ್ಣವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಿದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎರಡು ಗಂಟೆ ಸಭೆ ನಡೆಸಿದ ಭೀಮಾಶಂಕರ ಗುಳೇದ, ತಮ್ಮ ಮೂವರು ಅಧಿಕಾರಿಗಳೊಂದಿಗೆ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಹಾಗೂ ಮಾರ್ಕೆಟ್ ಎಸಿಪಿ, ಮಾಳಮಾರುತಿ ಸಿಪಿಐ, ಸಿಇಎನ್ ಸಿಪಿಐ ಅವರನ್ನೊಳಗೊಂಡ ನಿಯೋಗದ ಜತೆ ಚರ್ಚಿಸಿದರು. ಬಳಿಕ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸಿದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಭೂಷಣ ಬೋರಸೆ, ಈ ಪ್ರಕರಣ ಅಂತರಾಜ್ಯಕ್ಕೂ ವ್ಯಾಪಿಸಿರುವ ಶಂಕೆ ಇದೆ. ₹50 ಕೋಟಿಗೂಗೆ ಅಧಿಕ ಅವ್ಯವಹಾರ ಆಗಿರುವುದರಿಂದ ಸಹಜವಾಗಿ ಸಿಐಡಿಯ ಡಿಐಜಿ ಬಂದಿದ್ದಾರೆ. ಸಿಐಡಿ ತನಿಖೆಗೆ ವಹಿಸಿದ್ದೇವೆ. ನಾವು ಮಾಡಿರುವ ತನಿಖೆ ಅವರಿಗೆ ನೀಡಿದ್ದೇವೆ. ಸಿಐಡಿ ಡಿಐಜಿ ಫಾರ್ಮಾಲಿಟಿ ಮುಗಿಸಿಕೊಂಡು ಹೋಗಿದ್ದಾರೆ. ಸ್ಥಳೀಯ ಅಧಿಕಾರಿಗಳು ಕಲೆ ಹಾಕಿರುವ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.

ಪ್ರಕರಣದಲ್ಲಿ ರಾಜಕೀಯವಿಲ್ಲ:


ಶಿವಂ ಅಸೋಸಿಯೇಟ್ಸ್ ಮೇಲೆ ದಾಳಿ ಮತ್ತು ಬಂಧನಲ್ಲಿ ಯಾವುದೇ ರಾಜಕೀಯ ಉದ್ದೇಶ, ಪ್ರಭಾವವಿಲ್ಲ. ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರ ಪ್ರಕರಣವನ್ನು ಸರ್ಕಾರ ಅಧಿಕೃತವಾಗಿ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ವರದಿ ನೀಡಿದ ನಂತರವೇ ಈ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಮತ್ತು ನಿಖರ ಮಾಹಿತಿ ಹೊರಬರಲಿದೆ. ಈ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣವಾಗಿ ಸಾರ್ವಜನಿಕರ ಹಣಕಾಸು ವಂಚನೆಗೆ ಸಂಬಂಧಿಸಿದ ವಿಷಯವಾಗಿದೆ. ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಅಥವಾ ಪ್ರೇರೆಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಸಾರ್ವಜನಿಕರು ಕಷ್ಟಪಟ್ಟು ದುಡಿದ ಹಣವನ್ನು ಅನಧಿಕೃತ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಾರದು. ಹಣ ಹೂಡಿಕೆ ಮಾಡುವಾಗ ಸಾರ್ವಜನಿಕರು ಎಚ್ಚರಿಕೆ ಹೆಜ್ಜೆ ಇಡಬೇಕು. ಯಾವುದೇ ಸಂಸ್ಥೆಗಳು ನಿಯಮಬಾಹಿರವಾಗಿ ಅತಿಯಾದ ಆಸೆ ತೋರಿಸಿದಾಗ ಸಾರ್ವಜನಿಕರು ಜಾಗರೂಕರಾಗಿರಬೇಕು. ಇಂತಹ ವಂಚನೆ ತಡೆಯಲು ಕಾನೂನು ಕ್ರಮದ ಜೊತೆಗೆ ಜನರ ಜಾಗೃತಿಯೂ ಮುಖ್ಯವಾಗಿದೆ ಎಂದು ಹೇಳಿದರು.

ಸಂಸದ ಜಗದೀಶ ಶೆಟ್ಟರ ಮಾತನಾಡಿ, ಶಿವಾನಂದ ನೀಲಣ್ಣವರ ಬಹುಕೋಟಿ ಹಣ ದುರಪಯೋಗ ಪ್ರಕರಣ ಸಿಕ್ಕಂತಹ ಸಾಕ್ಷ್ಯಗಳ ಆಧಾರದ ಮೇಲೆ ಕೇಸ್ ಮಾಡಿದ್ದಾರೆ. ಇವೆಲ್ಲವೂ ಅಂತಿಮವಾಗಿ ಕೋರ್ಟ್ ನಲ್ಲಿ ನಿರ್ಧಾರ ಆಗಬೇಕಿದೆ. ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚು ಚರ್ಚೆ ಅವಶ್ಯಕತೆ ಇಲ್ಲ. ಸಿಐಡಿ ಅಧಿಕಾರಿಗಳು ಹೇಗೆ ತನಿಖೆ ಮಾಡಿ, ಸಾಕ್ಷಿ-ಆಧಾರ ಸಂಗ್ರಹಿಸುತ್ತಾರೆ. ಅದರ ಮೇಲೆ ಪ್ರಕರಣದ ಬಗ್ಗೆ ಗೊತ್ತಾಗಲಿದೆ. ಆತನ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯ ಆಗಲಿದೆ ಎಂದಿದ್ದಾರೆ.

ಸಿಐಡಿ ತನಿಖೆ ಆರಂಭಗೊಂಡಿರುವುದರಿಂದ ರಾಜ್ಯ ಸರ್ಕಾರವೇ ನೇರವಾಗಿ ಪ್ರಕರಣ ಮಾನಿಟರ್ ಮಾಡಲಿದ್ದು, ಮುಂದೆ ಇಡಿ, ಐಟಿ ಸಹ ಭಾಗಿಯಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ತಿಳಿಸಿದರು.