ಬಹುಕೋಟಿ ವಂಚನೆ: ಸದಾಶಿವ ಮುತ್ಯಾ ವಿಚಾರಣೆ

| Published : Mar 23 2025, 01:30 AM IST

ಸಾರಾಂಶ

ಹೊಸ ಬಬಲಾದಿ ಮಠದ ಜಾತ್ರೆ ಹಾಗೂ ಅನ್ನ ಸಂತರ್ಪಣೆಗೂ ಲಕ್ಷಾಂತರ ಹಣವನ್ನು ಆರೋಪಿ ನೀಡಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗೋಕಾಕ ನಗರದ ಮಹಾಲಕ್ಷ್ಮೀ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಮುತ್ಯಾರನ್ನು ಸಿಐಡಿ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಂತರ ಅವರಿಗೆ ನೋಟಿಸ್‌ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ಯಾರನ್ನು ವಶಕ್ಕೆ ಪಡೆದ ಸಿಐಡಿ ಪೊಲೀಸರು ಗೋಕಾಕ ನಗರ ಠಾಣೆಯಲ್ಲಿ ಇಡೀ ರಾತ್ರಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬಂಧಿಸಿದ್ದು ಏಕೆ?:

ಗೋಕಾಕನ ಮಹಾಲಕ್ಷ್ಮಿ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಬ್ಯಾಂಕ್‌ ಪ್ಯೂನ್ ಆಗಿದ್ದ ಸಾಗರ ಸಬಕಾಳೆ ವಿಚಾರಣೆ ವೇಳೆ ಮಾಹಿತಿ ನೀಡಿದ್ದನು. ಸಿಐಡಿ ವಿಚಾರಣೆ ವೇಳೆ ಸಾಗರ ನೀಡಿದ ಮಾಹಿತಿಯಂತೆ ಸದಾಶಿವ ಹಿರೇಮಠ ಸ್ವಾಮೀಜಿ ಖಾತೆಗೆ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿದ್ದು, ₹60 ಲಕ್ಷಕ್ಕೂ ಅಧಿಕ ಹಣ ಸ್ವಾಮೀಜಿ ಹಾಗೂ ಅವರ ಕುಟುಂಬಸ್ಥರಿಗೆ ವರ್ಗಾವಣೆ ಆಗಿದೆ. ಸದಾಶಿವ ಹಿರೇಮಠ ಸ್ವಾಮೀಜಿ, ಸ್ವಾಮೀಜಿಯವರ ಪತ್ನಿ ಹಾಗೂ ಪುತ್ರನ ಖಾತೆಗೆ ಹಣ ವರ್ಗಾವಣೆ ಆಗಿದೆ. ಈ ಹಣದಲ್ಲಿ ಸದಾಶಿವ ಹಿರೇಮಠ ಸ್ವಾಮೀಜಿ ನಿವೇಶನ ಖರೀದಿಸಿದ್ದಾರೆಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ. ಹೊಸ ಬಬಲಾದಿ ಮಠದ ಜಾತ್ರೆ ಹಾಗೂ ಅನ್ನ ಸಂತರ್ಪಣೆಗೂ ಲಕ್ಷಾಂತರ ಹಣವನ್ನು ಆರೋಪಿ ನೀಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸದಾಶಿವ ಹಿರೇಮಠ ಮುತ್ಯಾರನ್ನು ವಶಕ್ಕೆ ಪಡೆದು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು.

ಏನಿದು ಅಕ್ರಮ ಪ್ರಕರಣ?:

ತಾನು ಮಾಡಿದ್ದ ಕಳ್ಳತನಕ್ಕೆ ಪ್ರಾಯಶ್ಚಿತ್ತಕ್ಕಾಗಿ ಸ್ವಾಮೀಜಿ ಬ್ಯಾಂಕ್ ಖಾತೆಗೆ ಆರೋಪಿ ಸಬಕಾಳೆ ವರ್ಗಾವಣೆ ಮಾಡಿದ್ದಾನೆ ಎನ್ನಲಾಗಿದೆ. ಮಹಾಲಕ್ಷ್ಮೀ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಪ್ಯೂನ್‌ ಆಗಿದ್ದ ಸಾಗರ ಸಬಕಾಳೆ ಸೇರಿ ಇತರೆ ಸಿಬ್ಬಂದಿಯಿಂದ ಬ್ಯಾಂಕಿಗೆ ನೂರಾರು ಕೋಟಿ ರು. ವಂಚನೆಯಾಗಿತ್ತು. ಬ್ಯಾಂಕಿನಲ್ಲಿ ಅಕ್ರಮವಾಗಿ ₹76 ಕೋಟಿ ಸಾಲ ಪಡೆದು ಮರಳಿಸದೇ ವಂಚನೆ ಮಾಡಿದ್ದರು. ಈ ಪ್ರಕರಣ ಆರ್‌ಬಿಐ ಅಧಿಕಾರಿಗಳೇ ದಂಗಾಗುವಂತೆ ಮಾಡಿತ್ತು. ಆಡಿಟ್ ವೇಳೆ ಸಾಲಗಾರರ ಸೀಟ್ ಹಾಗೂ ಠೇವಣಿ ಸೀಟ್ ತಿದ್ದುಪಡಿಯನ್ನು ಆರೋಪಿಗಳು ಮಾಡಿದ್ದರು. ಮೂರು ವರ್ಷಗಳ ಆಡಿಟ್ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಾರದಂತೆ ನೋಡಿಕೊಂಡಿದ್ದರು. ಈ ಹಣದಿಂದಲೇ ಗೋಕಾಕ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಜಾಗ ಖರೀದಿಸಿದ್ದರು.

ನಂತರ ಬ್ಯಾಂಕ್ ಅಧ್ಯಕ್ಷರು ನೀಡಿದ ದೂರಿನನ್ವಯ ಪ್ರಕರಣ ಬೆಳಗಾವಿ ಜಿಲ್ಲಾ ಪೊಲೀಸರು ಭೇದಿಸಿದ್ದರು. ಬಳಿಕ ಈ ಪ್ರಕರಣವನ್ನು ರಾಜ್ಯಸರ್ಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿತ್ತು.

ಯಾರಿವರು ಮುತ್ಯಾ?:

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಮುತ್ಯಾ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಲಜ್ಞಾನ ಹೇಳುತ್ತಾ ಬಂದಿದ್ದರು. ಭಕ್ತರು ಕೂಡ ಮುತ್ಯಾರವರು ಹೇಳುವ ಕಾಲಜ್ಞಾನ ನಿಜವಾಗುತ್ತೆ ಎಂದು ನಂಬಿಕೊಂಡೇ ಬಂದಿದ್ದಾರೆ.

ಗೋಕಾಕ ಮಹಾಲಕ್ಷ್ಮೀ ಕೋ ಆಪ್‌ ಅರ್ಬನ್‌ ಬ್ಯಾಂಕಿನ ಅವ್ಯವಹಾರ ಪ್ರಕರಣ ಸಂಬಂಧ ಜಮಖಂಡಿಯ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಮುತ್ಯಾ ಅವರನ್ನು ಪೊಲೀಸರು ಬಂಧಿಸಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು. ವಿಚಾರಣೆಗೆ ಶ್ರೀಗಳು ಹಾಜರಾಗಿದ್ದಾರೆ. ಶ್ರೀಗಳು, ಮಠದ ಹೆಸರನ್ನು ಹಾಳು ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಮಠಗಳಿಗೆ ಅನೇಕರು ದೇಣಿಗೆ ನೀಡುತ್ತಾರೆ. ಆ ಹಣವನ್ನು ಭಕ್ತರ ಅನ್ನಸಂತರ್ಪಣೆಗಾಗಿ ಶ್ರೀಗಳು ಬಳಸಿಕೊಂಡಿದ್ದಾರೆ. ಮಠದ ಮತ್ತು ಶ್ರೀಗಳ ಕುರಿತು ಹರಡಿರುವ ಸುದ್ದಿ ಧಕ್ಕೆ ತರುವ ಕೆಲಸ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ.

ಮಲ್ಲಿಕಾರ್ಜುನ ಚೌಕಾಶಿ, ಸದಾಶಿವ ಮುತ್ಯಾ ಪರ ವಕೀಲ