ಮೇಲೇಳದ ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌ ಕಾಮಗಾರಿ!

| Published : Jun 19 2024, 01:08 AM IST

ಸಾರಾಂಶ

ಒಂದು ಬದಿಯಲ್ಲಿರುವ ರಸ್ತೆ ಈಗಾಗಲೇ ಭಾಗಶಃ ಕುಸಿದಾಗಿದೆ. ಧರೆ ಕುಸಿದು ರಸ್ತೆ ನಡುವೆ ಇದ್ದ ಮ್ಯಾನ್‌ಹೋಲ್‌ ಕೂಡ ಕುಸಿಯುವ ಹಂತದಲ್ಲಿದೆ. ತಾತ್ಕಾಲಿಕವಾಗಿ ಮರಳಿನ ಗೋಣಿಗಳನ್ನು ಪೇರಿಸಿಡಲಾಗಿದ್ದರೂ ಈ ಮಳೆಗಾಲದಲ್ಲಿ ಈ ರಸ್ತೆ ಕುಸಿಯುವ ಎಲ್ಲ ಸಾಧ್ಯತೆಗಳಿವೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಹಂಪನಕಟ್ಟೆಯ ಹಳೆ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ನೇತೃತ್ವದಲ್ಲಿ ಎರಡೂವರೆ ವರ್ಷಗಳ ಹಿಂದೆ ಆರಂಭವಾದ ನಗರದ ಪ್ರಥಮ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದೆ. ಸದ್ಯಕ್ಕಂತೂ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಆಳವಾಗಿ ಅಗೆದು ಹಾಕಿದ್ದರಿಂದ ರಸ್ತೆಯೊಂದು ಅರೆಕುಸಿದಿದ್ದು, ಇಡೀ ರಸ್ತೆ ಆಹುತಿಯಾಗುವ ಹಂತ ತಲುಪಿದೆ. ಅಕ್ಕಪಕ್ಕದ ಕಟ್ಟಡಗಳಿಗೂ ಮಳೆಗಾಲದಲ್ಲಿ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ.

ಕೆಲವು ವರ್ಷಗಳಿಂದೀಚೆಗೆ ತೀವ್ರ ವಾಹನ ದಟ್ಟಣೆ, ಪಾರ್ಕಿಂಗ್‌ ಸಮಸ್ಯೆಯಿಂದ ಮಂಗಳೂರು ನಗರದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಪರಿಹಾರವಾಗಿ ರೂಪು ತಳೆದದ್ದೇ ಈ ಮಲ್ಟಿಲೆವೆಲ್‌ ಕಾರು ಪಾರ್ಕಿಂಗ್‌ ಯೋಜನೆ. ವ್ಯವಸ್ಥಿತವಾಗಿ ಕಾಮಗಾರಿ ನಡೆಸಿದ್ದರೆ 36 ತಿಂಗಳೊಳಗೆ ಮುಗಿದು ಈಗಾಗಲೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಇನ್ನೂ ತಳಪಾಯದ ಕಾಮಗಾರಿಯೇ ಪೂರ್ಣಗೊಂಡಿಲ್ಲ.

ಕಾಮಗಾರಿ ಆರಂಭವಾಗುವ ಮೊದಲು ಈ ಪ್ರದೇಶದಲ್ಲಿ ತಳ್ಳುಗಾಡಿಗಳು, ಸಣ್ಣಪುಟ್ಟ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಕೂಲವಾಗಿತ್ತು. ಉಳಿದ ಜಾಗದಲ್ಲಿ ವಾಹನಗಳು ಪಾರ್ಕ್‌ ಮಾಡುತ್ತಿದ್ದವು. ಇನ್ನು ಈ ಕಾಮಗಾರಿ ಮುಗಿಯಲು ಇನ್ನೆಷ್ಟು ವರ್ಷ ಕಾಯಬೇಕೋ? ಇತ್ತ ಹೊಸ ಯೋಜನೆಯ ಕನಸೂ ಸದ್ಯಕ್ಕೆ ಈಡೇರಲ್ಲ, ಅತ್ತ ಸಾಕಷ್ಟು ಜನರಿಗೆ ಉಪಯೋಗ ಆಗುತ್ತಿದ್ದ ಜಾಗ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

ಸ್ಮಾರ್ಟ್‌ ಸಿಟಿಗೆ ಕಳಂಕ: ಸುಮಾರು 1.55 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಖಾಸಗಿ- ಸರ್ಕಾರಿ ಸಹಭಾಗಿತ್ವದಲ್ಲಿ 94 ಕೋಟಿ ರು. ವೆಚ್ಚದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 400 ಕಾರುಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಒಪ್ಪಂದದಂತೆ ಕಾರು ಪಾರ್ಕಿಂಗ್‌ ನಂತರ ಮೇಲಿನ ಅಂತಸ್ತುಗಳಲ್ಲಿ ವಾಣಿಜ್ಯ ಸಂಕೀರ್ಣ ಅಭಿವೃದ್ಧಿಪಡಿಸಲು ಅವಕಾಶ ನೀಡಲಾಗಿತ್ತು.

ಅಪಾಯಕ್ಕೆ ಆಹ್ವಾನ: ಕಾಮಗಾರಿಗಾಗಿ ಇಡೀ ಜಾಗವನ್ನು 20 ಮೀ.ಗೂ ಹೆಚ್ಚು ಆಳ ಮಾಡಲಾಗಿದ್ದು, ಅಲ್ಲಿಂದ ಪಂಚಾಂಗ ಹಾಕುವ ಕಾರ್ಯ ಅರೆಬರೆ ಆಗಿದೆ. ಅಷ್ಟು ಆಳವಾಗಿ ಗುಂಡಿ ತೋಡಿದರೂ ಒಂದು ಬದಿಯಲ್ಲಿ ಮಾತ್ರ ತಡೆಗೋಡೆ ಕಟ್ಟಲಾಗಿದೆ. ಉಳಿದ ಮೂರೂ ಬದಿಗಳು ಅಪಾಯಕ್ಕೆ ಸಿಲುಕಿವೆ. ಒಂದು ಬದಿಯಲ್ಲಿರುವ ರಸ್ತೆ ಈಗಾಗಲೇ ಭಾಗಶಃ ಕುಸಿದಾಗಿದೆ. ಧರೆ ಕುಸಿದು ರಸ್ತೆ ನಡುವೆ ಇದ್ದ ಮ್ಯಾನ್‌ಹೋಲ್‌ ಕೂಡ ಕುಸಿಯುವ ಹಂತದಲ್ಲಿದೆ. ತಾತ್ಕಾಲಿಕವಾಗಿ ಮರಳಿನ ಗೋಣಿಗಳನ್ನು ಪೇರಿಸಿಡಲಾಗಿದ್ದರೂ ಈ ಮಳೆಗಾಲದಲ್ಲಿ ಈ ರಸ್ತೆ ಕುಸಿಯುವ ಎಲ್ಲ ಸಾಧ್ಯತೆಗಳಿವೆ.

ಇತ್ತೀಚಿನ ಮಳೆಗೆ ಮತ್ತೆ ಧರೆ ಕುಸಿತಗೊಂಡಿದ್ದು ತಳಪಾಯದ ಮೇಲೆ ಕೆಸರು ಮಣ್ಣು ಚದುರಿ ಅಸ್ತವ್ಯಸ್ತವಾಗಿದೆ. ರಸ್ತೆ ಮಾತ್ರವಲ್ಲ, ಸುತ್ತಲೂ ಇರುವ ಕಟ್ಟಡಗಳಿಗೆ ಕೂಡ ಇದು ಯಮರೂಪಿಯೇ ಆಗಿ ಬಾಯ್ದೆರೆದು ನಿಂತಂತಿದೆ. ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗುವ ಅಪಾಯವೂ ಇದೆ.

ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌ ಪರಿಕಲ್ಪನೆಯನ್ನು ಮೊದಲಿಗೆ (2008) ಪ್ರಸ್ತಾಪಿಸಿದ್ದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ. ಆದರೆ ವಿವಿಧ ಕಾರಣಗಳಿಂದ ಅದರ ಅನುಷ್ಠಾನ ವಿಳಂಬವಾಗಿತ್ತು. ಬಳಿಕ ಮಂಗಳೂರು ಮಹಾನಗರ ಪಾಲಿಕೆಯು 2014ರಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮುಡಾದಿಂದ ಪ್ರಸ್ತಾವನೆ ಹಿಂತೆಗೆದು ಸ್ವತಂತ್ರವಾಗಿ ಅಥವಾ ಸರ್ಕಾರಿ- ಖಾಸಗಿ ಮಾದರಿಯ ಮೂಲಕ ಯೋಜನೆ ಕಾರ್ಯಗತಗೊಳಿಸಲು ನಿರ್ಧರಿಸಿತ್ತು. ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ಮಂಗಳೂರು ನಗರ ಆಯ್ಕೆ ಮಾಡಿದ ನಂತರ ಯೋಜನೆಯನ್ನು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ಗೆ ಹಸ್ತಾಂತರಿಸಲಾಗಿತ್ತು.

------ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌ ಕಾಮಗಾರಿ ಜಾಗದಲ್ಲಿ ನೀರು, ಕೇಬಲ್‌ ಇತ್ಯಾದಿ ಹಲವು ಬಗೆಯ ಲೈನ್‌ಗಳಿದ್ದು, ಅವುಗಳನ್ನು ಸ್ಥಳಾಂತರ ಮಾಡಲು ಸಮಯ ತಗುಲಿತ್ತು. ಇನ್ನೂ ಕೆಲವು ಸಮಸ್ಯೆಗಳಿಂದಾಗಿ ವಿಳಂಬವಾಗಿತ್ತು. ಇನ್ನು ಮಳೆಗಾಲ ಮುಗಿದ ಕೂಡಲೆ ಕಾಮಗಾರಿ ತ್ವರಿತಗೊಳಿಸಲಾಗುವುದು.- ಅರುಣ್‌ ಪ್ರಭ, ಮಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಜಿಎಂ (ಟೆಕ್ನಿಕಲ್‌)