ಮಾತೃಭಾಷೆಯಿಂದ ಬಹುಭಾಷಾ ಪ್ರಾವೀಣ್ಯತೆ ಸಾಧ್ಯ: ಡಾ.ಕೆ.ವಿ.ಜಯಕುಮಾರ್

| Published : Sep 29 2024, 01:37 AM IST

ಮಾತೃಭಾಷೆಯಿಂದ ಬಹುಭಾಷಾ ಪ್ರಾವೀಣ್ಯತೆ ಸಾಧ್ಯ: ಡಾ.ಕೆ.ವಿ.ಜಯಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದ ಬಿಇ ವಿದ್ಯಾರ್ಥಿಗಳಿಗಾಗಿ ಶನಿವಾರ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮ ಮಾತೃಭಾಷೆಯಲ್ಲಿ ಸಂಪೂರ್ಣ ಪಾಂಡಿತ್ಯ ಪಡೆಯುವ ಮೂಲಕ ಎಂತಹ ಬಹು ಭಾಷೆಯಲ್ಲಿಯು ಪ್ರಾವೀಣ್ಯತೆ ಪಡೆಯಲು ಸಾಧ್ಯ ಎಂದು ಐಐಟಿ ಧಾರವಾಡದ ಪ್ರಾಧ್ಯಾಪಕ ಡಾ.ಕೆ.ವಿ.ಜಯಕುಮಾರ್ ಅಭಿಪ್ರಾಯಪಟ್ಟರು.

ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶಾತಿ ಪಡೆದ ಬಿಇ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಿಮ್ಮ ಮನೆಗಳಲ್ಲಿ ಮಾತೃಭಾಷೆಯಲ್ಲಿಯೇ ಮಾತನಾಡಲು ಪ್ರಯತ್ನಿಸಿ. ಆಂಗ್ಲರಿಗಿಂತಲೂ ಇಂಗ್ಲೀಷ್ ಭಾಷೆಯನ್ನು ಉತ್ಕೃಷ್ಟವಾಗಿ ಮಾತನಾಡ ಬಲ್ಲ ಶಕ್ತಿ ಭಾರತೀಯರಿಗಿದೆ. ಒಂದು ವಿದ್ಯಾಸಂಸ್ಥೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದ್ದು, ಹಿರಿಯ ವಿದ್ಯಾರ್ಥಿಗಳ ಸಂಘ ಹೆಚ್ಚು ಸಕ್ರಿಯರಾಗಿರುವಂತೆ ವಿದ್ಯಾಸಂಸ್ಥೆ ಕಾಳಜಿ ವಹಿಸಬೇಕಿದೆ.

ಬೋಧನೆಯಲ್ಲಿ ವಿಭಿನ್ನತೆ ಎಂಬುದು ಅತಿ ಮುಖ್ಯ. ಕೆಲವೊಮ್ಮೆ ಹಿರಿಯ ಉಪನ್ಯಾಸಕರಿಗಿಂತ, ಕಿರಿಯ ಉಪನ್ಯಾಸಕರು ವಿದ್ಯಾರ್ಥಿಗಳನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಕಾರಣ ವಿಭಿನ್ನತೆಯ ಬೋಧನೆ ಮತ್ತು ನಾವೀನ್ಯಯುತ ಚಿಂತನೆ.

ಯೌವ್ವನವೆಂಬುದು ಬದುಕಿನ ಸೂಕ್ಷ್ಮ ವಿಚಾರವಾಗಿದ್ದು, ಬಹುಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕಾಗಿ ನಿಮ್ಮ ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ಬಳಸಿಕೊಳ್ಳಿ. ಚಂಚಲತೆ ಎಂಬುದು ಎಂದಿಗೂ ನಿಮ್ಮನ್ನು ಕಾಡದಿರಲಿ ಎಂದು ಶುಭ ಹಾರೈಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಎನ್ಇಎಸ್ ಸಂಸ್ಥೆ ಮಾನವ ಸಂಪನ್ಮೂಲದ ಜೊತೆಗೆ ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡುತ್ತಿದೆ. ವೃತ್ತಿ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುತ್ತಿರುವ ವಿದ್ಯಾರ್ಥಿಗಳು ದಯಮಾಡಿ ಎಂದಿಗೂ ನಿಮ್ಮ ತಂದೆ ತಾಯಿಗಳ ಆಶಯಗಳಿಗೆ ಮೋಸ ಮಾಡುವಂತಹ ಯೋಚನೆ ಮಾಡಬೇಡಿ. ತಾಯಿ ಮಕ್ಕಳ ದೈನಂದಿನ ಅಗತ್ಯ ನೋಡಿಕೊಂಡರೆ, ತಂದೆ ಭವಿಷ್ಯದ ಅಗತ್ಯತೆಯನ್ನು ನೋಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಮುನ್ನಡೆಯಿರಿ ಎಂದು ಹೇಳಿದರು.

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಲಾಭದ ಉದ್ದೇಶವಿಲ್ಲದೆ ಸರ್ವರಿಗೂ ಶಿಕ್ಷಣದ ಪ್ರಯೋಜನ ಸಿಗಬೇಕೆಂಬ ಸದುದ್ದೇಶದೊಂದಿಗೆ ಪ್ರಾರಂಭಗೊಂಡ ಎನ್ಇಎಸ್ ಸಂಸ್ಥೆ, ಹೊಸತನದ ಯೋಜನೆಗಳನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿ ಸಂಸ್ಥೆ ಮುನ್ನಡೆಯುತ್ತಿದೆ. ವೃತ್ತಿಪರ ಶಿಕ್ಷಣದಲ್ಲಿ ನಿಮ್ಮ ಕಲಿಕೆ ನಿಮ್ಮ ಮೂಲಕವೇ ಆಗ ಬೇಕಾದ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ಸರ್ವತೋಮುಖ ಅಭಿವೃದ್ಧಿಗೆ ಅವಕಾಶವಿರುವ ಎಲ್ಲಾ ಪೂರಕ ವಾತಾವರಣ ಬಳಸಿಕೊಳ್ಳಿ. ಅಂಕಗಳ ಜೊತೆಗೆ ಕೌಶಲ್ಯತೆ ಮತ್ತು ವಿಷಯಾಧಾರಿತ ಜ್ಞಾನವಿದ್ದಾಗ ಮಾತ್ರ ವಿಭಿನ್ನ ಅಭಿಯಂತರರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ಖಜಾಂಚಿಗಳಾದ ಡಿ.ಜಿ.ರಮೇಶ್, ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಎಸ್.ಮಾಧುರಾವ್, ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಎಂ.ಆರ್. ಸೀತಾಲಕ್ಷ್ಮೀ, ಎಂ.ಎಸ್.ಅನಂತದತ್ತ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಕಾಲೇಜಿನ ವಿಟಿಯು ರ್‍ಯಾಂಕ್ ವಿಜೇತ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಹಾನರ್ಸ್ ಪದವಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಣ್ಮನ ಸೆಳೆದ ರೋಬೊಟ್:

ಆರ್ಟಿಫಿಶಿಯಲ್ ಇಂಟಲಿಜೆನ್ಸ್ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದ ರೋಬೊ‌ ನೆರೆದಿದ್ದವರ ಕಣ್ಮನ ಸೆಳೆಯಿತು. ‘ಜೆಎಎಐಸಿಇ’ ಹೆಸರಿನ ರೋಬೊ ತನ್ನ ಎದುರು ನಿಂತು ಕಾಲೇಜಿನ ಕುರಿತು ಕೇಳುತ್ತಿದ್ದ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರಿಸಿತು. ತನಗೆ ಅಳವಡಿಸಿದ್ದ ದೊಡ್ಡ ಸ್ಪೀಕರ್ ಮೂಲಕ ವಾಯ್ಸ್ ಕಮ್ಯಾಂಡ್ ಬಳಸಿ ಪ್ರತಿಕ್ರಿಯಿಸುತ್ತಿತ್ತು.