ಸಾರಾಂಶ
ಶ್ರೀನಿವಾಸನಗರ ಸೇರಿದಂತೆ ಚೌಡೇಶ್ವರಿ ನಗರ, ಇಂದಿರಾನಗರ, ಹೊಯ್ಸಳ ನಗರ ಹೀಗೆ ಈ ಭಾಗದಲ್ಲಿ ಬರುವ ಹತ್ತಾರು ಬಡಾವಣೆಗಳ ಜನತೆಗೆ ಗರುಡಗಿರಿ ರಸ್ತೆಯಿಂದ ಟಿ ಎಚ್ ರಸ್ತೆಗೆ ನೇರವಾಗಿ ಸಂಚಾರ ಮಾಡಲು ನಗರಸಭೆ ರಸ್ತೆ ನಿರ್ಮಿಸಿ ಕೊಟ್ಟರೆ ಈ ಭಾಗದ ಜನತೆಗೆ ಅನುಕೂಲವಾಗುವುದಲ್ಲದೆ ಈ ಬಡಾವಣೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ ಹಿನ್ನೆಲೆ ಗರುಡನಗಿರಿ ರಸ್ತೆಯಿಂದ ಶ್ರೀನಿವಾಸ ನಗರ ಬಡಾವಣೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 206 ಟಿ ಎಚ್ ರಸ್ತೆಗೆ ಸಂಪರ್ಕಿಸುವ ನೇರ ರಸ್ತೆ ಅಭಿವೃದ್ಧಿಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಗರುಡನಗಿರಿ ರಸ್ತೆಯಿಂದ ಶ್ರೀನಿವಾಸ ನಗರ ಬಡಾವಣೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 206 ಟಿ ಎಚ್ ರಸ್ತೆಗೆ ಸಂಪರ್ಕಿಸುವ ನೇರ ರಸ್ತೆ ಅಭಿವೃದ್ಧಿಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು.ವಾರ್ಡ್‌ವಾರು ವಿಸಿಟ್ ಮುಂದುವರಿಸಿರುವ ನಗರಸಭೆ ಆಡಳಿತ ಗುರುವಾರ ಮುಂಜಾನೆ 17ನೇ ವಾರ್ಡಿನಲ್ಲಿ ಸಂಚಾರ ನಡೆಸಿತು. ಈ ಸಂದರ್ಭದಲ್ಲಿ ಸೇರಿದ್ದ ಜನತೆ ಶ್ರೀನಿವಾಸನಗರ ಸೇರಿದಂತೆ ಚೌಡೇಶ್ವರಿ ನಗರ, ಇಂದಿರಾನಗರ, ಹೊಯ್ಸಳ ನಗರ ಹೀಗೆ ಈ ಭಾಗದಲ್ಲಿ ಬರುವ ಹತ್ತಾರು ಬಡಾವಣೆಗಳ ಜನತೆಗೆ ಗರುಡಗಿರಿ ರಸ್ತೆಯಿಂದ ಟಿ ಎಚ್ ರಸ್ತೆಗೆ ನೇರವಾಗಿ ಸಂಚಾರ ಮಾಡಲು ನಗರಸಭೆ ರಸ್ತೆ ನಿರ್ಮಿಸಿ ಕೊಟ್ಟರೆ ಈ ಭಾಗದ ಜನತೆಗೆ ಅನುಕೂಲವಾಗುವುದಲ್ಲದೆ ಈ ಬಡಾವಣೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.
ಬಡಾವಣೆಯ ಜನತೆಯ ಮನವಿಯನ್ನು ಆಲಿಸಿದ ಅಧ್ಯಕ್ಷ ಸಮಿವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಹಾಗೂ ವಾರ್ಡ್‌ನ ಸದಸ್ಯ ಜಿಟಿ ಗಣೇಶ್ ಈ ರಸ್ತೆ ನಿರ್ಮಾಣಕ್ಕೆ ರಸ್ತೆಗೆ ಅಡ್ಡವಾಗಿ ಮೂರು ಮನೆಗಳಿದ್ದು ಈ ರಸ್ತೆ ನಿರ್ಮಾಣಕ್ಕೆ ಇದು ಅಡ್ಡಿ ಆಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಈಗಾಗಲೇ ನಗರಸಭೆ ಈ ಮೂರು ಮನೆ ಮಾಲೀಕರೊಂದಿಗೆ ಮಾತನಾಡಿ ಜನತೆಯ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ರಸ್ತೆ ಅಭಿವೃದ್ಧಿಗೆ ತಾವು ಸಹಕಾರ ನೀಡುವಂತೆ ಮನವಿ ಮನವಿ ಮಾಡಿರುವುದಲ್ಲದೆ ನಿಮಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ನಗರಸಭೆ ಸುಬ್ರಹ್ಮಣ್ಯ ಬೆಟ್ಟದ ತಪ್ಪಲಿನಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಶ್ರಯ ಮನೆಗಳಲ್ಲಿ ಮೂರು ಮನೆಗಳನ್ನು ತಮಗೆ ನೀಡಲಾಗುವುದೆಂದು ಭರವಸೆ ನೀಡಿರುವುದಾಗಿ ಜನತೆಗೆ ತಿಳಿಸಿದರು.ಅಧ್ಯಕ್ಷರ ಸಲಹೆಗೆ ಈ ಮೂರು ಮನೆಗಳ ಮಾಲೀಕರು ಸಹಮತ ವ್ಯಕ್ತಪಡಿಸಿದ್ದು ಅಂದುಕೊಂಡಂತೆ ಎಲ್ಲವು ಆದರೆ ಶ್ರೀನಿವಾಸನಗರ ಚೌಡೇಶ್ವರಿ ನಗರ ಇಂದಿರಾನಗರ ಹೊಯ್ಸಳ ನಗರ ಸೇರಿದಂತೆ ಈ ಭಾಗದ ಬಡಾವಣೆಗಳ ಜನತೆಯ ಬಹು ದಿನಗಳ ಅಪೇಕ್ಷೆ ಸಾಕಾರ ರೂಪ ಪಡೆಯಲಿದೆ.
ಈ ಕುರಿತು ಸುದ್ದಿಗಾರರೊಂದಿಗೆ ನಗರಸಭೆ ಅಧ್ಯಕ್ಷ ಎಂ ಸಮಿವುಲ್ಲಾ ಮಾತನಾಡಿ, ನಗರದ ಜನತೆಯ ಅಪೇಕ್ಷೆಗೆ ಅನುಗುಣವಾಗಿಯೇ ನಗರಸಭೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶ್ರೀನಿವಾಸನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಗರುಡನಗಿರಿ ರಸ್ತೆಯಿಂದ ಟಿ ಎಚ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬದ್ಧರಾಗಿದ್ದು ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.