ಸಾರಾಂಶ
ಗದಗ: ವಿದ್ಯಾರ್ಥಿಯು ಆಧ್ಯಾತ್ಮಿಕ ಜ್ಞಾನ ಪಡೆದರೆ ಪ್ರಾಪಂಚಿಕ ಜ್ಞಾನ ತಾನಾಗಿಯೇ ದೊರೆಯುತ್ತದೆ ಎಂದು ಬೆಂಗಳೂರು ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಮಲ್ಲಿಕಾರ್ಜುನ. ಆರ್ ಹೇಳಿದರು.
ಅವರು ಕೆಎಲ್ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಆಧುನಿಕ ವಿದ್ಯಾಭ್ಯಾಸವು ಗಳಿಕೆಯ ವಿದ್ಯಾಭ್ಯಾಸವಾಗಿ ಬಿಟ್ಟಿದೆ ಹೊರತು ವಿದ್ಯಾರ್ಥಿಗಳಲ್ಲಿ ನಿಜವಾದ ಜ್ಞಾನ ಬಿತ್ತುತ್ತಿಲ್ಲ. ಕೇವಲ ಪುಸ್ತಕದ ಕೃತಕ ಜ್ಞಾನ ಬಿತ್ತುತ್ತ ಪ್ರಾಪಂಚಿಕ ಜ್ಞಾನ ಬಿತ್ತದೆ ಅಲ್ಪ ಜ್ಞಾನಿಗಳಾಗಿ ಬೆಳೆಯದಿರಿ. ಪ್ರತಿಯೊಬ್ಬ ವಿದ್ಯಾರ್ಥಿಯು ಆಧ್ಯಾತ್ಮಿಕ ಜ್ಞಾನ ಪಡೆದರೆ ಪ್ರಾಪಂಚಿಕ ಜ್ಞಾನ ತಾನಾಗಿಯೇ ದೊರೆಯುತ್ತದೆ. ಜ್ಞಾನವು ಕೇವಲ ಪರೀಕ್ಷೆಗೆ ಸೀಮಿತವಾಗದೆ ಸಮಾಜಕ್ಕೂ ವಿಸ್ತರಿಸಬೇಕು. ವಿದ್ಯಾರ್ಥಿ ತನಗೆ ದೊರೆತಿರುವ ಜ್ಞಾನವನ್ನು ನಿಸ್ವಾರ್ಥದಿಂದ ಸಮಾಜಕ್ಕೆ ಹಂಚಬೇಕು. ತನ್ನ ಏಳಿಗೆಯ ಜತೆಗೆ ಬೇರೆಯವರ ಏಳಿಗೆ ಬಯಸುತ್ತಾ ಅದರಲ್ಲಿ ಖುಷಿ ಕಾಣಬೇಕು. ಸಕಾರಾತ್ಮಕ ಆಲೋಚನೆಗಳಿಂದ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಸಾಧನೆಯ ಮಾರ್ಗ ಕಂಡುಕೊಳ್ಳಬೇಕು. ಜೀವನದಲ್ಲಿ ಗುರಿ ಮುಖ್ಯವಲ್ಲ, ಆ ಗುರಿಯ ಪ್ರಯಾಣ ಮುಖ್ಯ ಎಂದರು.
ಯುವ ಉದ್ಯಮಿ, ನಟ ಆರ್ಯನ್.ಡಿ.ಜಗದೀಶ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರಿ ಒಂದೇ ಇದ್ದರೆ ಸಾಲದು ಅದರ ಹಿಂದೆ ಗುರು ಇರಬೇಕು. ಜೀವನದಲ್ಲಿ ಸಾಹಸ ಮಾಡಿದರೆ ಸಾಧನೆ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ. ಶಿಕ್ಷಕರು ವಿದ್ಯಾರ್ಥಿ ಜೀವನದ ಪ್ರಮುಖ ಅಂಗ. ಶಿಕ್ಷಕರನ್ನು ಗೌರವಿಸಿ ಅದುವೇ ನಿಮಗೆ ಜೀವನದ ಹಾದಿ ತೋರಿಸುತ್ತದೆ ಎಂದರು.ಈ ವೇಳೆ ಕಳೆದ ವರ್ಷ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು. ವಿಪ ಸದಸ್ಯ ಎಸ್.ವಿ. ಸಂಕನೂರ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಹಾಗೂ ಸರ್ವ ಸದಸ್ಯರು ಇದ್ದರು.
ಪ್ರಾ. ಪ್ರೊ.ಪಿ.ಜಿ. ಪಾಟೀಲ ಸ್ವಾಗತಿಸಿದರು. ಪ್ರೊ.ನಾಗರಾಜ್ ಬಳಿಗೇರ ಹಾಗೂ ಪ್ರೊ. ಬಿ.ಆರ್.ಚಿನಗುಂಡಿ ನಿರೂಪಿಸಿದರು.