ಸಾರಾಂಶ
ಮುಂಡರಗಿ: ಕೊಪ್ಪಳ ಜಿಲ್ಲೆಯ ಕಿನ್ನಾಳ ಹತ್ತಿರದ ಹಿರೇಹಳ್ಳ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಸೋಮವಾರ ಕೊಪ್ಪಳ ಜಿಲ್ಲೆ ನ್ಯಾಯಾಲಯದ ಸಿಬ್ಬಂದಿ ಮುಂಡರಗಿಯಲ್ಲಿರುವ ನೀರಾವರಿ ಇಲಾಖೆ ಕಚೇರಿಯ ಕೆಲವು ಸಾಮಗ್ರಿಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಕಚೇರಿ ಜಪ್ತಿ ಮಾಡಲು ಆದೇಶಿಸಿತ್ತು.ಕೆಲವು ವರ್ಷಗಳ ಹಿಂದೆ ಹಿರೇಹಳ್ಳ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿತ್ತು. ಅದರಲ್ಲಿ ಕೊಪ್ಪಳದ ಮೂವರು ರೈತರ ಸುಮಾರು 10 ಎಕರೆ ಜಮೀನನ್ನೂ ಸ್ವಾಧೀನ ಪಡೆದಿತ್ತು. ಅವರಿಗೆ ಸಂಪೂರ್ಣ ಪರಿಹಾರ ನೀಡದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಕಳೆದ ತಿಂಗಳು ಕಚೇರಿಯನ್ನು ಜಪ್ತಿ ಮಾಡಲು ಆದೇಶಿಸಿತ್ತು.
ಕಾಲುವೆ ಕಾಮಗಾರಿಗಾಗಿ ನೀರಾವರಿ ಇಲಾಖೆ 2006ರಲ್ಲಿ ಕೊಪ್ಪಳದ ಭೀಮವ್ವ, ಮುಸ್ತಾಫಾ ಮನಿಯಾರ್, ಅಮರೇಶ ಮಡಿವಾಳ ಎನ್ನುವವರ 10 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಈ ಮೂವರಿಗೆ ಸೇರಿ 2009ರಲ್ಲಿ ₹12 ಲಕ್ಷ ನೀಡಿತ್ತು. ಉಳಿದ ಪರಿಹಾರ ನೀಡಿರಲಿಲ್ಲ. ಜಮೀನು ಕಳೆದುಕೊಂಡಿದ್ದ ಮೂರು ಕುಟುಂಬದವರು ನಿರಂತರವಾಗಿ ನೀರಾವರಿ ಇಲಾಖೆಗೆ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.2019ರಲ್ಲಿ ನ್ಯಾಯಾಲಯವು ಮೂವರು ರೈತರಿಗೆ ಸೇರಿ ₹7 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ಇಲಾಖೆ ಪರಿಹಾರ ನೀಡದ ಹಿನ್ನೆಲೆಯಲ್ಲಿ 2021ರಲ್ಲಿ ಮೂವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದ್ದರಿಂದ ಕೊಪ್ಪಳ ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರು ಕಚೇರಿ ಸಾಮಗ್ರಿಗಳನ್ನು ಜಪ್ತಿ ಮಾಡಲು ಆದೇಶಿಸಿದ್ದರು.
ಅರ್ಜಿದಾರರ ಪರ ವಕೀಲರು ಹಾಗೂ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಹಿರಿಯ ವಕೀಲ ಎ.ವಿ. ಕಣವಿ ಹಾಗೂ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.