ಚಕ್ಕಡಿ ರಸ್ತೆ ಕುರಿತು ಮುನೇನಕೊಪ್ಪರ ಹೇಳಿಕೆ ಆಧಾರ ರಹಿತ: ಕೋನರಡ್ಡಿ

| Published : Aug 19 2024, 12:52 AM IST

ಚಕ್ಕಡಿ ರಸ್ತೆ ಕುರಿತು ಮುನೇನಕೊಪ್ಪರ ಹೇಳಿಕೆ ಆಧಾರ ರಹಿತ: ಕೋನರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆದ್ದಾರಿ ಮಾದರಿಯಲ್ಲೇ ಚಕ್ಕಡಿ ರಸ್ತೆ ನಿರ್ಮಿಸಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ಕೆಲಸಗಳನ್ನು ನೋಡಿ ಬಿಜೆಪಿಯವರಿಗೆ ಸಹಿಸದೇ ಈ ರೀತಿಯ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಆರೋಪಿಸಿದರು.

ನವಲಗುಂದ: ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಚಕ್ಕಡಿ ರಸ್ತೆಗಳ ಕುರಿತು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕುಗಳಲ್ಲಿ ಚಕ್ಕಡಿ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಹೆದ್ದಾರಿ ಮಾದರಿಯಲ್ಲೇ ಚಕ್ಕಡಿ ರಸ್ತೆ ನಿರ್ಮಿಸಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ಕೆಲಸಗಳನ್ನು ನೋಡಿ ಬಿಜೆಪಿಯವರಿಗೆ ಸಹಿಸದೇ ಈ ರೀತಿಯ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುನೇನಕೊಪ್ಪ ಅವರು 5 ವರ್ಷ ಶಾಸಕ, ಸಚಿವರಾಗಿ ಅಭಿವೃದ್ಧಿ ಕಾರ್ಯ ಕೈಗೊಂಡ ವೇಳೆ ನಾವು ಯಾವುದೇ ರೀತಿಯ ತಕರಾರು ಮಾಡಿರಲಿಲ್ಲ. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ಯಾರನ್ನೂ ದೂರುವ ಉದ್ದೇಶವಿಲ್ಲ. ಆದರೆ, ನಾನು ಶಾಸಕನಾಗಿ ಆಯ್ಕೆಯಾದ ಕೇವಲ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಬೇಕಿದ್ದರೆ ಎಲ್ಲ ಗ್ರಾಮಗಳಲ್ಲಿನ ರೈತರೊಂದಿಗೆ ಚರ್ಚಿಸಲಿ. ಸ್ವತಃ ರೈತರೇ ಮುಂದೆ ನಿಂತು ರಸ್ತೆಗಳನ್ನು ಮಾಡಿಸಿಕೊಂಡಿದ್ದಾರೆ. 10 ಅಡಿ ಇದ್ದ ರಸ್ತೆಯನ್ನು 30 ಅಡಿ ವರೆಗೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಿದ್ದೇನೆ. ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಸಚಿವ ಎಚ್.ಕೆ. ಪಾಟೀಲ ಹಾಗೂ ಮುಂತಾದ ಶಾಸಕರು, ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಮುಂದಾದರೂ ಮುನೇನಕೊಪ್ಪ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದ್ದಾರೆ.