ಸಾರಾಂಶ
ಶಿರಸಿ: ನಗರ ವ್ಯಾಪ್ತಿಯ ಕೊಳಚೆ ನೀರು ಶುದ್ಧೀಕರಣವಾಗದೇ ನೇರವಾಗಿ ನಗರದಂಚಿನ ಗ್ರಾಮಗಳ ಜಲಮೂಲಗಳನ್ನು ಸೇರುತ್ತಿದ್ದು, ಇದರಿಂದ ಆ ಭಾಗಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.ನಗರದ ಯಲ್ಲಾಪುರ ರಸ್ತೆ ಭಾಗದ ನೀರು ನೈಸರ್ಗಿಕವಾಗಿ ಕರಿಗುಂಡಿ ಭಾಗಕ್ಕೆ ಹರಿಯುತ್ತಿತ್ತು. ಕಾರಣಾಂತರಗಳಿಂದ ನೀರು ಹರಿಯುವ ಮಾರ್ಗವನ್ನು ಬದಲಾಯಿಸಿ, ವಿದ್ಯಾನಗರ, ವಿಶಾಲನಗರ, ಮರಾಠಿಕೊಪ್ಪ ಕುಂಬ್ರಿತಗ್ಗು ಮೂಲಕ ಪುಟ್ಟನಮನೆಯ ಕೃಷಿಭೂಮಿಗೆ ಹರಿಸುತ್ತಿರುವುದರಿಂದ ಆ ಭಾಗದ ತೆರೆದ ಬಾವಿಗಳ ನೀರು ಮಲೀನವಾಗಿ ಕುಡಿಯಲು ಬಾರದಂತಾಗಿದ್ದು, ಜಲಮೂಲಗಳಿಗೆ ಕೊಳಚೆ ನೀರು ಸೇರುತ್ತಿದೆ. ಅಲ್ಲಿನ ನಿವಾಸಿಗಳಿಗೆ ರೋಗದ ಭಯ ಕಾಡುತ್ತಿದ್ದು, ನಗರ ಪ್ರದೇಶದ ಕೊಳಚೆ ನೀರು ತೋಟ, ಗದ್ದೆ, ಹಳ್ಳಕ್ಕೆ ಸೇರಿ ಶುದ್ಧ ನೀರಿಗೆ ಕೊಳಚೆ ನೀರು ಸೇರಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.ನಗರಸಭೆ ವಾಪ್ತಿಯಲ್ಲಿ ಸುಮಾರು ೮೦ರಿಂದ ೯೦ ಸಾವಿರ ಜನಸಂಖ್ಯೆಯಿದ್ದು, ನಿತ್ಯ ೨೦ರಿಂದ ೩೦ ಸಾವಿರ ಲೀಟರ್ ನೀರು ತ್ಯಾಜ್ಯ ನೀರಾಗಿ ಚರಂಡಿ ಸೇರುತ್ತದೆ. ಮನೆಬಳಕೆ, ಶೌಚಾಲಯ, ಮೂತ್ರಾಲಯ ಬಳಕೆ, ಆಸ್ಪತ್ರೆಯಿಂದ ಬಿಡುವ ತ್ಯಾಜ್ಯವೂ ಸೇರುತ್ತದೆ. ಗಟಾರದಲ್ಲಿ ಬೀಸಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು, ರಾಸಾಯನಿಕ ವಸ್ತುಗಳು ನೀರಿನ ಮೂಲಕ ಹರಿದು ಗ್ರಾಮೀಣ ಭಾಗದ ಜಲಮೂಲಗಳನ್ನು ಸೇರುತ್ತಿವೆ. ಪೌರಾಡಳಿತ ಹಾಗೂ ನ್ಯಾಯಾಲಯವು ನಗರ ವ್ಯಾಪ್ತಿಯ ತ್ಯಾಜ್ಯ ನೀರನ್ನು ಶುದ್ಧೀಕರಣ ಮಾಡದೇ ಗ್ರಾಮೀಣ ಭಾಗದ ಶುದ್ಧ ನೀರಿಗೆ ಸೇರಿಸಬಾರದು ಎಂಬ ಆದೇಶ ಮಾಡಿದೆ.
ಆದರೆ ಶಿರಸಿ ನಗರಸಭೆಯ ನಿರ್ಲಕ್ಷ್ಯದಿಂದ ನಗರದಂಚಿನ ಪ್ರದೇಶಗಳ ಜಲಮೂಲಗಳನ್ನು ಸೇರಿ ಸಾಂಕ್ರಾಮಿಕ ರೋಗಗಳ ಉತ್ಪತ್ತಿಯ ತಾಣಗಳಾಗಿ ಮಾರ್ಪಟ್ಟಿರುವುದರಿಂದ ಅದೇ ಜಲಮೂಲಗಳನ್ನು ಅವಲಂಬಿಸಿದ ಗ್ರಾಮಸ್ಥರು ನಗರಸಭೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಯಲ್ಲಾಪುರ ರಸ್ತೆ, ಪ್ರಗತಿನಗರ ಭಾಗಗಳ ನೀರು ಕರಿಗುಂಡಿ ಭಾಗಕ್ಕೆ ಮೂಲಕ ಹರಿಯುತ್ತಿತ್ತು. ೨೦೨೨ರಲ್ಲಿ ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿ, ನೀರು ಹರಿಯುವ ಮಾರ್ಗವನ್ನು ತಿರುವು ಮಾಡಿ, ಲಯನ್ಸ್ ನಗರ, ಮರಾಠಿಕೊಪ್ಪ, ಪುಟ್ಟನಮನೆ ಭಾಗಕ್ಕೆ ಬಿಟ್ಟಿರುವುದರಿಂದ ಕೊಳಚೆ ನೀರು ಸಂಪೂರ್ಣ ಗದ್ದೆ ತೋಟಗಳನ್ನು ಆವರಿಸಿಕೊಳ್ಳುತ್ತಿರುವುದರಿಂದ ದಿನನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ನಗರ ವ್ಯಾಪ್ತಿಯ ಮನೆಗಳ ಕೊಳಚೆ ನೀರು ಚರಂಡಿ ಮೂಲಕ ಶುದ್ಧೀಕರಣ ಘಟಕ ಸೇರಿ, ಶುದ್ಧೀಕರಣ ಮಾಡಿ, ಹೊರಗಡೆ ಬಿಡಬೇಕೆಂಬ ಆದೇಶವಿದ್ದರೂ ಅದನ್ನು ಗಾಳಿಗೆ ತೂರಿದ್ದಾರೆ.ಕೊಳಚೆ ನೀರು ಮರಾಠಿಕೊಪ್ಪ, ಪುಟ್ಟನಮನೆ, ಹಾರೇಪಾಲ, ಅಂದಳ್ಳಿ ಗ್ರಾಮದ ಮೂಲಕ ಶಾಲ್ಮಲಾ ನದಿ ಸೇರುತ್ತಿದೆ. ಶುದ್ಧ ನೀರಿಗೆ ಕೊಳಚೆ ನೀರು ಅಲ್ಲಿನ ವಾತಾವರಣ ಮಲೀನವಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಇತ್ತ ಗಮನಿಸಿ, ಈ ಭಾಗದ ಜನರಿಗೆ ನೆಮ್ಮದಿಯ ಜೀವನ ನಡೆದಲು ದಾರಿ ಮಾಡಿಕೊಡಬೇಕೆಂದು ಪುಟ್ಟನಮನೆ ನಿವಾಸಿ ವಿಶ್ವನಾಥ ಹೆಗಡೆ ವಿನಂತಿಸಿದ್ದಾರೆ.ಚರ್ಮರೋಗದ ಭೀತಿ: ನಗರದ ಕೊಳಚೆ ನೀರು ಕೃಷಿ ಭೂಮಿಯನ್ನು ಸೇರುತ್ತಿರುವುದರಿಂದ ಕೃಷಿ ಚಟುವಟಿಕೆಗೆ ಕಾರ್ಮಿಕರು ಬರುತ್ತಿಲ್ಲ. ಒಂದೊಮ್ಮೆ ಧೈರ್ಯ ಮಾಡಿ, ಕೆಲಸಕ್ಕೆ ಕೈ ಹಾಕಿದರೆ ಮೈಕೈ ತುರಿಕೆ, ಚರ್ಮ ರೋಗ, ಸಾಂಕ್ರಾಮಿಕ ರೋಗದ ಭಯ ಕಾಡುತ್ತಿದೆ. ಸೊಳ್ಳೆಗಳ ಕಾಟದಿಂದ ರೋಗಗಳಿಂದ ಆಸ್ಪತ್ರೆಗೆ ಸೇರುವ ಸ್ಥಿತಿ ಇದೆ.ಬಾವಿಗೆ ಸೇರುತ್ತಿರುವ ಕೊಳಚೆ ನೀರುವಿದ್ಯಾನಗರ, ವಿಶಾಲನಗರ ಭಾಗಗಳಲ್ಲಿ ಪ್ರತಿ ಮನೆಯಲ್ಲಿಯೂ ತೆರೆದ ಬಾವಿಗಳಿದ್ದು, ಕಳೆದ ೪ ವರ್ಷಗಳ ಹಿಂದೆ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದರು. ಅವೈಜ್ಞಾನಿಕವಾಗಿ ಚರಂಡಿ ತಿರುವು ಮಾಡಿ, ಈ ಭಾಗಕ್ಕೆ ಕೊಳಚೆ ನೀರು ಹರಿಯುವಂತೆ ಮಾಡಿರುವುದರಿಂದ ಬಾವಿಗಳೆಲ್ಲವೂ ಕಲುಷಿತಗೊಂಡಿವೆ.