ಸಾರಾಂಶ
ರಾಣಿಬೆನ್ನೂರು: ಸ್ಥಳೀಯ ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ರಘುನಂದನಮೂರ್ತಿ ಸೋಮವಾರ ಸ್ಥಳೀಯ ನಗರಸಭೆಯ 2024-25ನೇ ಸಾಲಿನ ಬಜೆಟ್ ಮಂಡಿಸುವ ಮೂಲಕ ಹಲವಾರು ದಿನಗಳಿಂದ ಮುಂದೂಡಿಕೆಯಾಗುತ್ತ ಬಂದಿದ್ದ ಬಜೆಟ್ ಸಭೆ ನಡೆಯುವುದೋ ಇಲ್ಲವೋ ಎಂಬ ಊಹಾಪೋಹಗಳಿಗೆ ಅಂತ್ಯ ಹಾಡಿದರು.
ನಗರದ ರಸ್ತೆಗಳು ಹಾಗೂ ರಸ್ತೆ ಬದಿ ಚರಂಡಿ ನಿರ್ಮಾಣ, ಎಲ್ಲಾ ನಾಗರಿಕರಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆ, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ, ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ ಪ್ರತ್ಯೇಕ ಅನುದಾನ, ನಗರದಲ್ಲಿನ ಸ್ಮಶಾನಗಳ ಅಭಿವೃದ್ಧಿ ಹಾಗೂ ವಿದ್ಯುತ್ ಚಿತಾಗಾರ, ಗುಡ್ಡದ ಸ್ಮಾರಕ ಭವನ ಅಭಿವೃದ್ಧಿ, ನಗರದ ಆಯ್ದ ಸ್ಥಳಗಳಲ್ಲಿ ಬಸ್ ತಂಗುದಾಣ ನಿರ್ಮಾಣ, ನಗರದ ವಿವಿಧ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಂಡ 172.12 ಲಕ್ಷ ರು.ಗಳ ಉಳಿತಾಯ ಬಜೆಟ್‌ನ್ನು ಜಿಲ್ಲಾಧಿಕಾರಿಗಳು ಮಂಡಿಸಿದರು.ಇಲ್ಲಿನ ನಗರಸಭೆ ಸರ್.ಎಂ. ವಿಶ್ವೇಶ್ವರಯ್ಯ ಸಭಾಭವನದಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಉತ್ತರ ಕರ್ನಾಟದ ಹೆಬ್ಬಾಗಿಲು ಎಂದೇ ಪ್ರಖ್ಯಾತವಾಗಿರುವ ರಾಣಿಬೆನ್ನೂರು ಕೃಷ್ಣಮೃಗಗಳ ಅಭಯಾರಣ್ಯ ನಾಡಾಗಿದೆ. ವಾಣಿಜ್ಯ ಕೇಂದ್ರ ಬಿಂದುವಾದ ನಗರವು ರಾಜ್ಯದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿದ್ದು ದಿನೇ ದಿನೇ ವ್ಯವಹಾರ-ಉದ್ಯೋಗ, ಶಿಕ್ಷಣ ಇತ್ಯಾದಿ ಕಾರಣಗಳಿಂದ ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ವಲಸೆ ಹೆಚ್ಚಾಗುತ್ತಿದೆ.
ನಗರಸಭೆ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಇತ್ಯಾದಿಗಳಿಂದ ಒಟ್ಟು 2302.40 ಲಕ್ಷ ರು.ಗಳ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ ಸರ್ಕಾರದಿಂದ ಎಸ್‌ಎಫ್‌ಸಿ ಮುಕ್ತ ನಿಧಿಯ 260 ಲಕ್ಷ, ಎಸ್‌ಎಫ್‌ಸಿ ವಿದ್ಯುತ್ ಅನುದಾನ 1000.00 ಲಕ್ಷ, ಎಸ್‌ಎಫ್‌ಸಿ ವೇತನ ಅನುದಾನ 500 ಲಕ್ಷ, ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದ 250 ಲಕ್ಷ, ಕೇಂದ್ರ ಸರ್ಕಾರ 15ನೇ ಹಣಕಾಸು ಯೋಜನೆಯಡಿ 500 ಲಕ್ಷ, ಎಸ್‌ಎಫ್‌ಸಿ ಕುಡಿಯುವ ನೀರಿನ ಯೋಜನೆಗಾಗಿ 10 ಲಕ್ಷ, ಅಮೃತ ನಗರ ಯೋಜನೆಯಡಿ 400 ಲಕ್ಷ, ಎಸ್‌ಎಫ್‌ಸಿ ವಿಶೇಷ ಅನುದಾನದ 500 ಲಕ್ಷ ಸೇರಿ ಒಟ್ಟು 2920 ಲಕ್ಷ ಅನುದಾನ ನಿರೀಕ್ಷಿಸಲಾಗಿದೆ.ಇವುಗಳಿಂದ ಪಡೆದ ಅನುದಾನದಲ್ಲಿ ರಸ್ತೆಗಳು, ರಸ್ತೆ ಬದಿ ಚರಂಡಿ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ 650 ಲಕ್ಷ ರು. ಮೀಸಲಿರಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಕುಡಿಯುವ ನೀರಿನ ನಿರ್ವಹಣೆಗಾಗಿ 365 ಲಕ್ಷ, ಬೀದಿ ದೀಪಗಳನ್ನು ಕಲ್ಪಿಸಲು ಹಾಗೂ ನಿರ್ವಹಣೆಗಾಗಿ 155 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣ/ದುರಸ್ತಿಗೆ 25 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ ಲ್ಯಾಂಡ್‌ಫೀಲ್ ಸೈಟ್ ಅಭಿವೃದ್ಧಿಗೆ 190 ಲಕ್ಷ, ಉದ್ಯಾನಗಳ ಅಭಿವೃದ್ಧಿಗೆ 165 ಲಕ್ಷ, ಘನತ್ಯಾಜ್ಯ ನಿರ್ವಹಣೆಗಾಗಿ ಕಾರ್ಮಿಕರ ವೇತನ, ಹೊರಗುತ್ತಿಗೆ ವಾಹನ ಚಾಲಕರ ವೇತನ, ಇಂಧನ, ಪೌರ ಕಾರ್ಮಿಕರಿಗೆ ಉಪಹಾರ ಭತ್ಯೆ, ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸಾ ವೆಚ್ಚ, ವಾಹನಗಳ ದುರಸ್ತಿ ವೆಚ್ಚಕ್ಕಾಗಿ ಒಟ್ಟಾರೆ 40 ಲಕ್ಷ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವ ಗುರಿಯನ್ನು ಪ್ರಸಕ್ತ ಸಾಲಿನ ಬಜೆಟ್ ಒಳಗೊಂಡಿದೆ ಎಂದರು.
ಬಜೆಟ್‌ಗೆ ಕಾಂಗ್ರೆಸ್ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಸೂಚನೆ ಮಾಡಿದರೆ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ಶಶಿಧರ ಬಸೇನಾಯ್ಕ ಅನುಮೋದನೆ ನೀಡಿದರು. ಪೌರಾಯುಕ್ತ ಎಚ್.ಮಹಾಂತೇಶ, ಲೆಕ್ಕ ಅಧೀಕ್ಷಕಿ ವಾಣಿಶ್ರೀ ಉಪಸ್ಥಿತರಿದ್ದರು.ಶ್ರದ್ಧಾಂಜಲಿ: ಸಭೆ ಪ್ರಾರಂಭದಲ್ಲಿ ಇತ್ತೀಚಿಗೆ ಅಗಲಿದ ನಗರಸಭೆ ಮಾಜಿ ಅಧ್ಯಕ್ಷ ರಾಮಣ್ಣ ಕೋಲಕಾರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.