ಹರಿಹರದಲ್ಲಿ ಪೌರಾಯುಕ್ತರಿಂದ ಪೌರಕಾರ್ಮಿಕರಿಗೆ ನಿಂದನೆ ಆರೋಪ

| Published : May 09 2025, 12:39 AM IST

ಸಾರಾಂಶ

ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಅವರು ಪೌರ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಆರೋಪಿಸಿ ತಾಲೂಕು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರು ಗುರುವಾರ ಕರ್ತವ್ಯಕ್ಕೆ ಹಾಜರಾಗದೆ ನಗರಸಭೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಕರ್ತವ್ಯಕ್ಕೆ ಗೈರು ಹಾಜರಾಗಿ ಪೌರಕಾರ್ಮಿಕರ ಆಕ್ರೋಶ । ನಗರಸಭೆ ಮುಂದೆ ಪ್ರತಿಭಟನೆ । ಕ್ರಮಕ್ಕೆ ಶಾಸಕರಿಗೆ ಮನವಿ

ಕನ್ನಡಪ್ರಭ ವಾರ್ತೆ ಹರಿಹರ

ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ಅವರು ಪೌರ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಆರೋಪಿಸಿ ತಾಲೂಕು ಕರ್ನಾಟಕ ರಾಜ್ಯ ಪೌರ ಸೇವಾ ನೌಕರರು ಗುರುವಾರ ಕರ್ತವ್ಯಕ್ಕೆ ಹಾಜರಾಗದೆ ನಗರಸಭೆ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಸಂಘದ ಅಧ್ಯಕ್ಷ ಹುಚ್ಚಂಗೆಪ್ಪ ಮಾತನಾಡಿ, ಪೌರಾಯುಕ್ತರಾದ ಸುಬ್ರಹ್ಮಣ್ಯ ಶೆಟ್ಟಿ ಅವರು ಇತ್ತೀಚೆಗೆ ಕರ್ತವ್ಯ ನಿರತ ಬಿಲ್ ಕಲೆಕ್ಟರ್ ಆದ ಪರಸಪ್ಪ ಬಿ. ಎಂಬುವರಿಗೆ ಜಿಲ್ಲಾಧಿಕಾರಿಯಿಂದ ಶೋಕಾಸ್ ನೋಟಿಸ್‌ ಬರುವಂತೆ ಮಾಡಿದ್ದಾರೆ.ದೀ ಬಗ್ಗೆ ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಇದರಿಂದ ನೌಕರನು ಮಾನಸಿಕವಾಗಿ ಮನನೊಂದ ಕಾರಣ ಆರೋಗ್ಯದಲ್ಲಿ ಏರುಪೇರಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಪೌರಕಾರ್ಮಿಕರಿಗೆ ಏಕವಚನದಿಂದ ಮಾತಾಡುವುದು. ಅಧಿಕಾರ ದರ್ಪ ತೋರುವುದು ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಬಿಲ್ ಕಲೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಂಬಣ್ಣ ಎಂಬಾತನಿಗೆ ಇದೇ ಪೌರಾಯುಕ್ತರು ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ ಅನ್ವಯ ಸದರಿ ಸಿಬ್ಬಂದಿಯು ಮಾನಸಿಕ ಒತ್ತಡದಿಂದ ಮನನೊಂದು ಆರೋಗ್ಯದಲ್ಲಿ ಏರುಪೇರಾಗಿ ಮರಣ ಹೊಂದಿದ್ದ ಎಂದು ಆರೋಪಿಸಿದರು.

ಕೂಡಲೇ ಪೌರಾಯುಕ್ತರನ್ನು ಬೇರೆಡೆಗೆ ವರ್ಗಾವಣೆ ಮಾಡಿ, ಇಲ್ಲಿನ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹಾಗೂ ನಗರಸಭಾ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅವರಿಗೆ ಮನವಿ ಸಲ್ಲಿಸಿದರು.

ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಗೌರವಾಧ್ಯಕ್ಷ ಸದಾಶಿವ ಪಿ.ಎಚ್, ಉಪಾಧ್ಯಕ್ಷರಾದ ಪಿ.ಎಚ್. ರಾಮಕೃಷ್ಣಪ್ಪ, ಡಿ.ಹನುಮಂತಪ್ಪ, ಹನುಮಂತಪ್ಪ ಕೊಪ್ಪಳ, ಜಂಟಿ ಕಾರ್ಯದರ್ಶಿ ಬಿ. ದಯಾನಂದ, ಸಹ ಕಾರ್ಯದರ್ಶಿ ವೈ.ಎನ್.ಬಸವರಾಜ್, ಖಜಾಂಚಿ ಎಂ.ರವಿ, ಪೌರ ಕಾರ್ಮಿಕರಾದ ಎಚ್.ಎಂ.ಬಸವರಾಜ್, ಸೋಮನಾಥ ಆರ್., ರಾಮ್ ಕುಮಾರ್, ಜಗದೀಶ್ ಅಡ್ಡೇರ್, ರಾಜಶೇಖರ್ ಎಸ್, ನಾಮದೇವಪ್ಪ ಎಚ್ ಎಚ್, ಶಿವರಾಮ್, ರಜಾಕ್ ಸಾಬ್, ಸೌಭಾಗ್ಯಮ್ಮ, ಆಂಜನೇಯ ಕೆ,,ಶಿವಮೂರ್ತಿ ಎಚ್., ಜಿ. ಮಹೇಶ್ವರಪ್ಪ, ಎಚ್.ಮಂಜುನಾಥ್, ಪ್ರೇಮ್ ಕುಮಾರ್, ಎಂ.ಹನುಮಂತಪ್ಪ, ನೇತ್ರಾವತಿ, ದೇವಿಕಾ, ನಾಗರಾಜ್, ರಾಮು, ನಾಗರಾಜ್, ಲಲಿತಾ, ಗುತ್ಯೆಪ್ಪ, ಬಸವರಾಜ್ ಇತರರು ಇದ್ದರು.