ನಗರಸಭೆ ಎಲ್ಲಾ ಪೌರಕಾರ್ಮಿಕರಿಗೂ ನಿವೇಶನ

| Published : Oct 05 2024, 01:45 AM IST

ಸಾರಾಂಶ

ಶಿರಾ : ಶಿರಾ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸುಮಾರು 142 ಪೌರಕಾರ್ಮಿಕರಿಗೆ ಕಲ್ಲುಕೋಟೆ ಸರ್ವೇ ನಂ. 100ರಲ್ಲಿ ನಿವೇಶನ ನೀಡಬೇಕೆಂದು ಉದ್ದೇಶಿಸಿದ್ದು, ಹದಿನೈದು ದಿನದಲ್ಲಿ ಎಲ್ಲಾ ಪೌರಕಾರ್ಮಿಕರಿಗೂ ನಿವೇಶನ ನೀಡುವುದರ ಜತೆಗೆ ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು 7 ಲಕ್ಷ ರು. ಹಣವನ್ನು ಮಂಜೂರು ಮಾಡಿಸುತ್ತೇನೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ : ಶಿರಾ ನಗರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸುಮಾರು 142 ಪೌರಕಾರ್ಮಿಕರಿಗೆ ಕಲ್ಲುಕೋಟೆ ಸರ್ವೇ ನಂ. 100ರಲ್ಲಿ ನಿವೇಶನ ನೀಡಬೇಕೆಂದು ಉದ್ದೇಶಿಸಿದ್ದು, ಹದಿನೈದು ದಿನದಲ್ಲಿ ಎಲ್ಲಾ ಪೌರಕಾರ್ಮಿಕರಿಗೂ ನಿವೇಶನ ನೀಡುವುದರ ಜತೆಗೆ ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು 7 ಲಕ್ಷ ರು. ಹಣವನ್ನು ಮಂಜೂರು ಮಾಡಿಸುತ್ತೇನೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಈ ಹಿಂದೆ ಸಚಿವನಾಗಿದ್ದ ಸಂದರ್ಭದಲ್ಲಿ ಶಿರಾ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಲು ಸುಮಾರು 160.25 ಎಕರೆ ಜಮೀನನ್ನು ನಿವೇಶಕ್ಕಾಗಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಅದರಲ್ಲಿ 5176 ನಿವೇಶನಗಳನ್ನು ವಿಂಗಡನೆ ಮಾಡಲು ತೀರ್ಮಾನಿಸಿದ್ದೆ. ಆದರೆ ತಾಂತ್ರಿಕ ತೊಂದರೆಯಿಂದ ಅದು ಈಡೇರಲಿಲ್ಲ. ಆದರೆ ಈಗ ನೆನಗುದಿಗೆ ಬಿದ್ದಿದ್ದ ನಿವೇಶನ ನೀಡುವ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ್ದು ಮೊದಲಿಗೆ ಸುಮಾರು 142 ಪೌರಕಾರ್ಮಿಕರಿಗೆ ಕಲ್ಲುಕೋಟೆ ಸರ್ವೇ ನಂ. 100ರಲ್ಲಿ ನಿವೇಶನ ನೀಡಲಾಗುವುದು ಎಂದು ಹೇಳಿದರು.

ಪೌರಕಾರ್ಮಿಕರನ್ನು ಯಾರೂ ಸಹ ನಿಕೃಷ್ಠವಾಗಿ ಕಾಣಬಾರದು. ಜಾತಿ ಎನ್ನುವುದು ಒಂದು ಭ್ರಮೆ, ಜಾತಿಯನ್ನು ಮನುಷ್ಯರು ಸೃಷ್ಟಿ ಮಾಡಿರುವುದು ಅದನ್ನು ಹೋಗಲಾಡಿಸುವ ಕೆಲಸ ಮಾಡಬೇಕು ಎಂದರು.

ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ, ಸ್ವಚ್ಛತೆ ಕಾಪಾಡಲು ತಮ್ಮ ಜೀವವನ್ನೇ ಪಣಕ್ಕಿಡುವ ಪೌರಕಾರ್ಮಿಕರು ನಿಜವಾದ ಶ್ರಮಜೀವಿಗಳು. ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ತಪಾಸಣಾ ಶಿಬಿರ, ಕ್ರೀಕೆಟ್ ಪಂದ್ಯಾವಳಿಯನ್ನು ಏರ್ಪಡಿಸಿದೆವು. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಆರೋಗ್ಯದ ಕಡೆ ಗಮನ ನೀಡಬೇಕು ಎಂದರು.

ಪೌರಾಯುಕ್ತ ರುದ್ರೇಶ್ ಮಾತನಾಡಿ, ಪೌರಕಾರ್ಮಿಕರು ನಗರದ ಸೈನಿಕರಿದ್ದಂತೆ, ಸೈನಿಕರಿದ್ದರೆ ದೇಶ ಸುರಕ್ಷತೆಯಿಂದ ಇರುತ್ತದೆ. ಅದೇ ರೀತಿ ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಇಡೀ ನಗರ ಆರೋಗ್ಯವಾಗಿರುತ್ತದೆ ಎಂದ ಅವರು, ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರನ್ನು ದೇಶಕ್ಕೆ ಕೊಡುಗೆ ನೀಡಿ ಎಂದರು.

ನಗರಸಭೆ ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ನಿವೃತ್ತ ಪ್ರಾಂಶುಪಾಲ ಡಾ.ವೇಣುಗೋಪಾಲ್, ನಗರಸಭೆ ಸದಸ್ಯರಾದ ಅಜಯ್‌ಕುಮಾರ್, ಬುರಾನ್ ಮೊಹಮದ್, ಉಮಾ ವಿಜಯರಾಜ್, ಗಿರಿಜಾ ವಿಜಯಕುಮಾರ್, ಜಾಫರ್, ಬಿ.ಎಂ.ರಾಧಾಕೃಷ್ಣ, ಸುಶಿಲಾ ವಿರೂಪಾಕ್ಷ, ಮಹೇಶ್, ದೃವಕುಮಾರ್, ಶಿರಾ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಮಾಜಿ ತಾಪಂ ಸದಸ್ಯೆ ಮಂಜುಳಾ ಬಾಯಿ, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಜಯಲಕ್ಷ್ಮಿ, ಮಂಜುನಾಥ್, ನಗರಸಭೆ ಕಂದಾಯ ಅಧಿಕಾರಿ ಮಂಜುನಾಥ್, ಪರಿಸರ ಅಬಿಯಂತರರಾದ ಪಲ್ಲವಿ, ಕಂಪ್ಯೂಟರ್ ಪ್ರೋಗ್ರಾಮರ್ ಚಿದಾನಂದ್, ಆರೋಗ್ಯ ನಿರೀಕ್ಷಕ ಜಗನ್ನಾಥ್, ಮುಖಂಡರಾದ ನಸ್ರುಲ್ಲಾ ಖಾನ್ ಹಾಜರಿದ್ದರು.