ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ನಗರಸಭೆಯ 2025-26ನೇ ಸಾಲಿನ 73.99 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ನ್ನು ನಗರಸಭಾಧ್ಯಕ್ಷ ಎಸ್. ಶರವಣ ಮಂಡಿಸಿದರು.ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಶಾಸಕ ಜಿ.ಡಿ. ಹರೀಶ್ ಗೌಡ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ ಅವರು, 2025-26ನೇ ಸಾಲಿಗಾಗಿ 36 ಕೋಟಿ 64 ಲಕ್ಷ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದ್ದು, 53 ಕೋಟಿ 99 ಲಕ್ಷ ರೂ.ಗಳ ಖರ್ಚನ್ನು ನಿರೀಕ್ಷಿಸಲಾಗಿದೆ. ಪ್ರಾರಂಭಿಕ ಶಿಲ್ಕು 18 ಕೋಟಿ 08 ಲಕ್ಷ ಹೊಂದಿದ್ದು, 54 ಕೋಟಿ 73 ಲಕ್ಷ ರೂ.ಗಳು ಜುಮ್ಲಾ ಹೊಂದಿದೆ. ಒಟ್ಟಾರೆ 73.99 ಲಕ್ಷ ರೂ.ಗಳ ಉಳಿತಾಯವನ್ನು ಹೊಂದಲಿದ್ದೇವೆ ಎಂದು ಅವರು ತಿಳಿಸಿದರು.
ನಗರಸಭೆಯ ಸ್ವಂತ ಸಂಪನ್ಮೂಲಗಳಿಂದ ಒಟ್ಟು 8 ಕೋಟಿ 96 ಲಕ್ಷ ರೂ.ಗಳ ಹಣ ಸಂಗ್ರಹಿಸುವ ಗುರಿ ಹೊಂದಲಾಗಿದ್ದರೆ, ಸರ್ಕಾರದಿಂದ ಹಂಚಿಕೆಯಾಗುವ ಅನುದಾನಗಳ ಪೈಕಿ 19.96 ಕೋಟಿ ರೂ.ಗಳು ಸಿಗುವ ನಿರೀಕ್ಷೆ ಹೊಂದಲಾಗಿದೆ. ಪ್ರಮುಖ ಪಾವತಿಗಳ ಪೈಕಿ ಬಂಡವಾಳ ವೆಚ್ಚದಡಿ 26.19 ಕೋಟಿ ರೂ.ಗಳಾಗಿದ್ದು, ರಾಜಸ್ವ ವೆಚ್ಛಗಳು 16.96 ಕೋಟಿ ರೂ.ಗಳಾಗಿವೆ ಎಂದು ಮಾಹಿತಿ ನೀಡಿದರು.ಸ್ವಂತ ಸಂಪನ್ಮೂಲಗಳ ಪೈಕಿ ಆಸ್ತಿ ತೆರಿಗೆಯಿಂದ ಒಟ್ಟು 5 ಕೋಟಿ 40 ಲಕ್ಷ ರೂ.ಗಳ ಕಂದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ನೀರು ಸರಬರಾಜು ಶುಲ್ಕದಿಂದ 93.50 ಲಕ್ಷ ರೂ.ಗಳು, ಅಭಿವೃದ್ದಿ ಶುಲ್ಕದಿಂದ 60.4 ಲಕ್ಷ ರೂ.ಗಳು, ಎಸ್.ಡಬ್ಲ್ಯೂಎಂ ಮತ್ತು ಯುಜಿಡಿ ಸೆಸ್ ಗಳಿಂದ 43 ಲಕ್ಷ ರೂ.ಗಳ ಕಂದಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಸರ್ಕಾರದಿಂದ ಹಂಚಿಕೆಯಾಗುವ ಅನುದಾನದ ಪೈಕಿ 15ನೇ ಹಣಕಾಸು ನಿಧಿಯಿಂದ 4.14 ಕೋಟಿ ರೂ.ಗಳ ನಿರೀಕ್ಷೆಯಿದ್ದು, ಎಸ್.ಬಿ.ಎಂ-2 ಅನುದಾನದಡಿ 2.60 ಕೋಟಿ ರೂ.ಗಳ ಅನುದಾನ ಅಂದಾಜಿಸಲಾಗಿದೆ. ಬಂಡವಾಳ ವೆಚ್ಚದ ಪೈಕಿ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಅತಿಹೆಚ್ಚು ಅಂದರೆ 5.27 ಕೋಟಿ ರೂ. ತೊಡಗಿಸಲು ನಿರ್ಧರಿಸಲಾಗಿದೆ. ಅಲ್ಲದೇ ನೀರು ಸರಬರಾಜು ಅಭಿವೃದ್ಧಿ ಮತ್ತು ನಿರ್ವಹಣೆಗೆ 3.78 ಕೋಟಿ ರೂ.ಗಳನ್ನು ವ್ಯಯಿಸಲಾಗುವುದು ಎಂದು ತಿಳಿಸಿದರು.
ಆಯವ್ಯಯ ಮಂಡಿಸಿದ ನಂತರ ಮಾತನಾಡಿದ ನಗರಸಭಾ ಸದಸ್ಯ ಕೃಷ್ಣರಾಜ ಗುಪ್ತ, ಹುಣಸೂರು ನಗರ ವ್ಯಾಪ್ತಿಯ ಚಿರಶಾಂತಿಧಾಮದಲ್ಲಿ ಮೂಲಸೌಕರ್ಯಗಳು ಅವ್ಯವಸ್ಥೆಯಿಂದ ಕೂಡಿದ್ದು, ಅಂತ್ಯಸಂಸ್ಕಾರ ನಡೆಸಲು ಬಂದು ಬಂಧುಗಳಿಗೆ ನರಕದರ್ಶನವಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಎಲ್ಲಾ ಸ್ಮಶಾನಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ ಎಂದು ಬೇಸರಿಸಿ ಬಜೆಟ್ ನಲ್ಲಿ 20 ಲಕ್ಷಗಳನ್ನು ಮೀಸಲಿರಿಸಿದ್ದು, ಕನಿಷ್ಟ 50 ಲಕ್ಷವನ್ನಾದರೂ ಸ್ಮಶಾನಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದಾಗ, ಶಾಸಕ ಜಿ.ಡಿ. ಹರೀಶ್ ಗೌಡ ಮಧ್ಯೆ ಪ್ರವೇಶಿಸಿ, ನಗಸಭೆಯ ಎಲ್ಲ 31 ವಾರ್ಡ್ ಗಳ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿಗಾಗಿ ಎಂಜಿನಿಯರ್ ಗಳ ಸಹಕಾರದೊಂದಿಗೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿರಿ. ಸ್ಮಶಾನಗಳ ಅಭಿವೃದ್ಧಿಗಾಗಿ ಅನುದಾನ ಇಂತಿಷ್ಟೆ ಎಂದು ನಿಗದಿಪಡಿಸುವುದು ಬೇಡ. ಎಷ್ಟು ಖರ್ಚಾದರೂ ಸರಿಯೇ ಶೀಘ್ರ ಅಭಿವೃದ್ಧಿಪಡಿಸಿ ಸಮಸ್ಯೆ ಬಗೆಹರಿಸಲು ಸೂಚಿಸಿದರು.ನಗರಸಭಾ ಸದಸ್ಯ ದೊಡ್ಡಹೆಜ್ಜೂರು ರಮೇಶ್ ಮಾತನಾಡಿ, ಸಂತೆಮಾಳ ವ್ಯಾಪ್ತಿಯ ಪುಟ್ಟು ಹೊಟೇಲ್ ಸೇರಿದಂತೆ ಮೂರು ಮಳಿಗೆಗಳನ್ನು ಖಾಸಗಿ ವ್ಯಕ್ತಿ ಒಳಬಾಡಿಗೆಗೆ ಬಿಟ್ಟು ತಿಂಗಳಿಗೆ 40 ಸಾವಿರ ರೂ.ಸಂಪಾದನೆ ಮಾಡುತ್ತಿದ್ದಾನೆ. ಟಿಎಪಿಸಿಎಂಎಸ್ ರಸ್ತೆಯಲ್ಲಿ ಲೈನಿಂಗ್ ಅಂಗಡಿ, ಗುಜರಿ ಅಂಗಡಿಯವರು ರಸ್ತೆಯನ್ನೇ ಒತ್ತುವರಿ ಮಾಡಿಕೊಂಡಿದ್ದಾರೆ ಎಂದರು. .
ಇದೇ ವೇಳೆ ಬಿ ಖಾತಾ ಆಂದೋಲನದಡಿ ಬಿ ಖಾತಾ ಪ್ರಮಾಣಪತ್ರ ಪಡೆದ ಫಲಾನುಭವಿಗಳಿಗೆ ಶಾಸಕ ಜಿ.ಡಿ. ಹರೀಶ್ ಗೌಡ ಪ್ರಮಾಣಪತ್ರ ವಿತರಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಲೆಕ್ಕಾಧಿಕಾರಿ ಶಾರದಮ್ಮ, ಕಚೇರಿ ವ್ಯವಸ್ಥಾಪಕ ನಟರಾಜ್, ಎಇಇ ಶರ್ಮಿಳಾ, ಆರ್‌ಐ ಸಿದ್ದಯ್ಯ ಸೇರಿದಂತೆ ನಗರಸಭಾ ಸದಸ್ಯರು ಇದ್ದರು.
ಆಯವ್ಯಯಕ್ಕೆ ಸರ್ವಾನುಮತದ ಒಪ್ಪಿಗೆ ನೀಡಲಾಯಿತು.