ಗದಗ ವಕಾರಸಾಲು ಸರ್ಕಾರಕ್ಕೆ, ಸಚಿವ ಎಚ್ಕೆ ನಡೆಗೆ ನಗರಸಭೆ ಅಧ್ಯಕ್ಷರ ವಿರೋಧ

| Published : Feb 28 2024, 02:35 AM IST

ಗದಗ ವಕಾರಸಾಲು ಸರ್ಕಾರಕ್ಕೆ, ಸಚಿವ ಎಚ್ಕೆ ನಡೆಗೆ ನಗರಸಭೆ ಅಧ್ಯಕ್ಷರ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನಗರಸಭೆಯ ಸಾವಿರಾರು ಕೋಟಿ ಮೌಲ್ಯದ ಆಸ್ತಿ ವಕಾರು ಸಾಲು ಜಾಗೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ತೆಗೆದುಕೊಳ್ಳಲು ನಗರಸಭೆ ಅನುಮತಿ ಇಲ್ಲದೇ, ಕಾನೂನು ಉಲ್ಲಂಘಿಸಿ ವಿಧೇಯಕ ಮಂಡನೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ.

ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ನಗರಸಭೆಯ ಸಾವಿರಾರು ಕೋಟಿ ಮೌಲ್ಯದ ಆಸ್ತಿ ವಕಾರು ಸಾಲು ಜಾಗೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ತೆಗೆದುಕೊಳ್ಳಲು ನಗರಸಭೆ ಅನುಮತಿ ಇಲ್ಲದೇ, ಕಾನೂನು ಉಲ್ಲಂಘಿಸಿ ವಿಧೇಯಕ ಮಂಡನೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ. ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಶೀಘ್ರವೇ ಕಾನೂನು ಹೋರಾಟ ಮಾಡುತ್ತೇವೆ ಎಂದು ನಗರಸಭೆಯ ಅಧ್ಯಕ್ಷೆ ಉಷಾ ದಾಸರ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ನಗರಸಭೆಯ ಅಧ್ಯಕ್ಷರು, ಈ ಭಾಗದ ವಿಧಾನಪರಿಷತ್ ಸದಸ್ಯರು, ಸಂಸದರನ್ನು ಕೇಳದೇ ಏಕ ಪಕ್ಷೀಯವಾಗಿ ಪ್ರಾಧಿಕಾರ ರಚನೆ ಮಾಡಿದ್ದಾರೆ. ಈ ನಿರ್ಧಾರವನ್ನು ನಗರಸಭೆ ಬಲವಾಗಿ ವಿರೋಧಿಸುತ್ತದೆ. ನಗರಸಭೆ ಆಸ್ತಿಯನ್ನು ಉಳಿಸಿಕೊಳ್ಳುವುದು ನಗರಸಭೆಯ ಹಕ್ಕಾಗಿದೆ ಎಂದರು.

ಸಚಿವ ಎಚ್.ಕೆ. ಪಾಟೀಲರು ಕಾನೂನು ಬಲ್ಲವರು. ಆದರೆ, ನಗರಸಭೆ ಹೆಸರಲ್ಲಿ ಇರುವ ಈ ಜಾಗೆಯನ್ನು ನಗರಸಭೆ ಅನುಮತಿ ಇಲ್ಲದೇ ಪ್ರಾಧಿಕಾರ ರಚನೆಗೆ ಮುಂದಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ನಗರದ 34 ಎಕರೆ ವಕಾರಸಾಲು ಸ್ಥಳವು ನಗರಸಭೆಯ ಹೆಸರಲ್ಲೇ ಇದೆ, ಅದಕ್ಕೆ ಬೇಕಾದರೆ ಉತಾರಗಳೂ ಇವೆ. ಹೀಗಿದ್ದರೂ, ಸಚಿವ ಎಚ್.ಕೆ.ಪಾಟೀಲರು ಸದನದಲ್ಲಿ ವಿಪ ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸುವ ವೇಳೆಯಲ್ಲಿ ಆ ಜಾಗೆಯನ್ನು ಸರ್ಕಾರ ತನ್ನ ಸುಪರ್ದಿಗೆ ಪಡೆದಿದೆ. ಅದು ಸರ್ಕಾರದ ಜಾಗೆ ಎಂದು ಹೇಳುವ ಮೂಲಕ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಮತ್ತು ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಜಾಗೆಯನ್ನು ನಗರಸಭೆ ಅನುಮತಿ ಇಲ್ಲದೇ ಸರ್ಕಾರ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಉಷಾ ದಾಸರ ಸ್ಪಷ್ಟಪಡಿಸಿದರು. ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ 250 ಆಶ್ರಯ ಮನೆಗಳನ್ನು ಎಚ್.ಕೆ. ಪಾಟೀಲ ವಿತರಿಸಿದರು. ನಗರಸಭೆಯ ಅಧ್ಯಕ್ಷರು ಆಶ್ರಯ ಕಮಿಟಿ ಸದಸ್ಯರಾಗಿರುತ್ತಾರೆ. ಇದಕ್ಕಾಗಿ ಒಂದು ಸಭೆಯನ್ನು ಕರೆಯದೇ ತಮಗೆ ಬೇಕಾದವರಿಗೆ ಮನೆ ವಿತರಿಸಿ ಸರ್ವಾಧಿಕಾರಿ ವರ್ತನೆ ತೋರಿದರು. ಈಗ ನಗರಸಭೆ ಆಸ್ತಿ ವಿಷಯದಲ್ಲಿಯೂ ಅದೇ ಧೋರಣೆ ತಾಳಿದ್ದಾರೆ. ಸ್ಥಳೀಯ ನಗರಸಭೆ ಅಧ್ಯಕ್ಷರು, ವಿಧಾನಪರಿಷತ್ ಸದಸ್ಯರು, ಸಂಸದರನ್ನು ಪ್ರಾಧಿಕಾರ ಸಮಿತಿಯಲ್ಲಿ ಒಳಗೊಳಿಸದೇ ಸಮತಿ ರಚನೆ ಮಾಡಿದ್ದಾರೆ. ಈ ವಿಷಯದ ವಿರುದ್ಧ ನಗರಸಭೆಯು ನ್ಯಾಯಾಂಗ ಮೊರೆ ಹೋಗಲಿದೆ ಎಂದರು.ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ಈ ಪ್ರಕ್ರಿಯೆ ಪ್ರಜಾಪ್ರಭುತ್ವಕ್ಕೆ ಅಪಮಾನ ಮತ್ತು ನಗರಸಭೆ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಈ ಹಿನ್ನೆಲೆ ವಿಧೇಯಕವನ್ನು ನಗರಸಭೆ ಆಡಳಿತ ಸದಸ್ಯರು ವಿರೋಧಿಸಿ, ಖಂಡಿಸುತ್ತೇವೆ ಎಂದರು.ರಾಘವೇಂದ್ರ ಯಳವತ್ತಿ ಮಾತನಾಡಿ, ಎಚ್.ಕೆ. ಪಾಟೀಲ ಅವರ ಪ್ರಾಧಿಕಾರ ರಚನೆ ವೇಳೆ ನಗರಸಭೆ ಅಭಿಪ್ರಾಯ ಕೇಳಿಲ್ಲ. ಒಟ್ಟಾರೆ ನಗರಸಭೆ ಆಸ್ತಿಮೇಲೆ ಎಚ್.ಕೆ. ಪಾಟೀಲರು ಹಕ್ಕು ಸಾಧಿಸಲು ಪ್ರಯತ್ನ ನಡೆಸಿದ್ದಾರೆ. ನಗರಸಭೆ ಆಡಳಿತದ ಮೇಲೆ ಜನರ ಅಪನಂಬಿಕೆ ಬರುವಂತೆ ಸಚಿವರು ನಡೆದುಕೊಳ್ಳುತ್ತಿದ್ದಾರೆ ಎಂದರು.

ಮುತ್ತಣ್ಣ ಮಶಿಗೇರಿ, ಮಹಾಂತೇಶ ನಲವಡಿ, ಸುನಂದಾ ಬಾಕಳೆ, ಅನಿತಾ ಗಡ್ಡಿ, ವಿಜಯಲಕ್ಷ್ಮಿ ದಿಂಡೂರು, ವಿದ್ಯಾವತಿ ಗಡಗಿ, ನಾಗರಾಜ ತಳವಾರ, ಮಾಧುಸ್ವಾಮಿ ಮೇರವಾಡೆ, ವಿನಾಯಕ ಮಾನ್ವಿ ಹಾಜರಿದ್ದರು.