ಜನ ಪ್ರತಿನಿಧಿಗಳು ಜನರ ಕನಸು ನನಸು ಮಾಡಬೇಕು

| Published : Sep 09 2025, 01:00 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಕರು ಸರ್ಕಾರಿ ಸಂಬಳಕ್ಕೆ ಸೀಮಿತವಾಗುತ್ತಿದ್ದು ಇದು ಆತಂಕಕಾರಿ ವಿಚಾರ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದೇಶವನ್ನಾಳುವ ನಾಯಕರು ಮತ್ತು ಚುನಾಯಿತ ಜನಪ್ರತಿನಿಧಿಗಳು ಅಕ್ಷರ ಆರೋಗ್ಯಕ್ಕೆ ಆದ್ಯತೆ ನೀಡಿ ಜನರ ಕನಸನ್ನು ನನಸು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್ ಹೇಳಿದರು.

ಪಟ್ಟಣದ ಪುರಸಭಾ ಬಯಲು ರಂಗಮಂದಿರದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಶಿಕ್ಷಕನು ತನ್ನ ಕರ್ತವ್ಯ ಅರಿತು ಕೆಲಸ ಮಾಡಿದರೆ ಸಾಕ್ಷರತ ಸಮಾಜ ನಿರ್ಮಾಣ ಮಾಡಬಹುದು ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಕರು ಸರ್ಕಾರಿ ಸಂಬಳಕ್ಕೆ ಸೀಮಿತವಾಗುತ್ತಿದ್ದು ಇದು ಆತಂಕಕಾರಿ ವಿಚಾರ. ನಿಮ್ಮನ್ನು ನಂಬಿ ಬರುವ ಮಕ್ಕಳಿಗೆ ಭೋದನೆ ಮಾಡಿ ಅವರ ಬದುಕನ್ನು ಹಸನು ಮಾಡಿ ಎಂದು ಸಲಹೆ ನೀಡಿದರು.

ಇಲ್ಲಿವರೆಗೆ ರಾಜ್ಯದ 6 ಸಾವಿರ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಎಚ್. ವಿಶ್ವನಾಥ್ ನಮ್ಮ ನಾಡಿನ ಶೇ. 60ರಷ್ಟು ಖಾಸಗಿ ಶಾಲೆಗಳು ಸಚಿವರು ಮತ್ತು ಶಾಸಕರಿಗೆ ಸೇರಿದ್ದು ಅವರು ಹಣದ ದಾಹದಿಂದ ಬಡ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಬಾಗಿಲು ಮುಚ್ಚಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ರಾಜಕಾರಣಿಗಳ ಮಕ್ಕಳು ವಿದೇಶದಲ್ಲಿ ಓದುತ್ತಿದ್ದು ಅವರು ಸಭೆ ಸಮಾರಂಭಗಳಲ್ಲಿ ಪ್ರತಿಯೊಬ್ಬ ಕನ್ನಡಿಗರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಎಂದು ಪುಕ್ಕಟ್ಟೆ ಸಲಹೆ ನೀಡುತ್ತಿದ್ದು ಭವಿಷ್ಯದಲ್ಲಿ ಎಲ್ಲರೂ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಕರೆ ನೀಡಿದರು.

ಶಿಕ್ಷಕರ ದಿನಾಚರಣೆ ಆಹ್ವಾನ ಪತ್ರಿಕೆ ಪ್ರಕಟಿಸಿರುವ ಬಗೆಯನ್ನು ತೀವ್ರವಾಗಿ ಖಂಡಿಸಿದ ವಿಶ್ವನಾಥ್ ಇದೇನು ಮತದಾರರ ಪಟ್ಟಿಯೋ ಇಲ್ಲ ಶಿಕ್ಷಕ ದಿನಾಚರಣೆಯ ಕರೆಯೋಲೆಯೊ ಎಂದು ತೀಕ್ಷವಾಗಿ ಕೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ರವಿಶಂಕರ್ ಮಾತನಾಡಿ, ಜಗತ್ತಿನ ಎಲ್ಲಾ ಜನರು ಶಿಕ್ಷಿತರಾಗಿ ತಮ್ಮ ಬದುಕು ಕಟ್ಟಿಕೊಳ್ಳಲು ಅಕ್ಷರ ಕಲಿಸುವ ಶಿಕ್ಷಕರೇ ಕಾರಣರಾಗಿದ್ದು ಅವರನ್ನು ನಾವೆಲ್ಲರೂ ಗೌರವಿಸಿ ಪೂಜಿಸಬೇಕೆಂದರು.

ಸಮಾಜದಲ್ಲಿ ಇತರರಿಗೆ ಇರದ ಗೌರವ ಶಿಕ್ಷಕರಿಗಿದ್ದು ಅದಕ್ಕೆ ಚ್ಯುತಿ ಬಾರದ ರೀತಿ ನಡೆದುಕೊಳ್ಳಬೇಕು ಎಂದು ಕಿವಿ‌ಮಾತು ಹೇಳಿದರು.

ಈ ವೇಳೆ ನಿವೃತ್ತ ಶಿಕ್ಷಕ ಟಿ. ಪುರುಷೋತ್ತಮ್, ಬಿಇಒ ಕಚೇರಿಯಲ್ಲಿ ಈ ಹಿಂದೆ ದಶಕಗಳ ಕಾಲ ಹಿರಿಯ ಅಧೀಕ್ಷಕರಾಗಿ ಕೆಲಸ ನಿರ್ವಹಿಸಿದ್ದ ಅರ್ಜುನೇಗೌಡರ ಮಗ ಲಕ್ಷ್ಮಣ್ ಸೇರಿದಂತೆ ವಿವಿಧ ಸಾಧಕರನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್‌ಜಿ. ಸುರೇಂದ್ರಮೂರ್ತಿ, ರುಕಿಯಾ ಬೇಗಂ, ಇಒವಿಸ.ಪಿ. ಕುಲದೀಪ್, ಡಿಡಿಪಿಐ ಎಸ್.ಟಿ. ಜವರೇಗೌಡ, ಬಿಇಒ ಆರ್. ಕೃಷ್ಣಪ್ಪ, ಪುರಸಭೆ ಅಧ್ಯಕ್ಷ ಶಿವು ನಾಯಕ್, ಉಪಾಧ್ಯಕ್ಷೆ ಪಲ್ಲವಿ ಆನಂದ್, ಸದಸ್ಯರಾದ ನಟರಾಜು, ಶಂಕರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಹದೇವ್, ಉದಯಶಂಕರ್, ವಕ್ತಾರ ಸೈಯದ್ ಜಾಬೀರ್, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಭಾಸ್ಕರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ನಿರ್ದೇಶಕ ಒಂಟಿಮನೆ ನಾಗರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಶೇಖರ್, ಟಿ. ಮರಿಯಪ್ಪ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜಿ.ಜೆ. ರೇವಣ್ಣ, ಶಿಕ್ಷಣ ಸಂಯೋಜಕ ದಾಸಪ್ಪ, ಜನಾರ್ಧನ್ ಸೇರಿದಂತೆ ಕ್ಷೇತ್ರದ ಎಲ್ಲಾ ಶಿಕ್ಷಕರು ಇದ್ದರು.