ಸಾರಾಂಶ
ಕನ್ನಡಪ್ರಭ ಪತ್ರಿಕೆಯ ವರದಿ ಬಳಿಕ ಕೊನೆಗೂ ಎಚ್ಚೆತ್ತ ಪುರಸಭೆ ಬೀಡಾಡಿ ದನಗಳ ಹಿಡಿದು ಪುರಸಭೆ ಕಚೇರಿ ಆವರಣದಲ್ಲಿ ಕೂಡಿ ಹಾಕಿದ್ದಾರೆ.
ಗುಂಡ್ಲುಪೇಟೆ: ಕನ್ನಡಪ್ರಭ ಪತ್ರಿಕೆಯ ವರದಿ ಬಳಿಕ ಕೊನೆಗೂ ಎಚ್ಚೆತ್ತ ಪುರಸಭೆ ಬೀಡಾಡಿ ದನಗಳ ಹಿಡಿದು ಪುರಸಭೆ ಕಚೇರಿ ಆವರಣದಲ್ಲಿ ಕೂಡಿ ಹಾಕಿದ್ದಾರೆ.
ಕಳೆದ ಜೂ.೧೭ ರಂದು ಕನ್ನಡಪ್ರಭದಲ್ಲಿ ಗುಂಡ್ಲುಪೇಟೇಲಿ ಬೀಡಾಡಿ ದನಗಳ ಹಾವಳಿಯ ಬಗ್ಗೆ ವರದಿ ಬಳಿಕ ಎಚ್ಚೆತ್ತ ಪುರಸಭೆ ದನಗಳ ಹಿಡಿದು ದಂಡ ಹಾಕಿ, ಮುಂದೆ ಬಿಡಬೇಡಿ ಎಂದು ಮುಚ್ಚಳಿಕೆ ಬರೆಸಿಕೊಂಡು ಬಿಟ್ಟಿದ್ದರು.ಆದರೂ ಬೀಡಾಡಿ ದನಗಳ ಹಾವಳಿ ನಿಂತಿಲ್ಲ ಎಂದು ಜು.೧೫ ರಂದು ಕನ್ನಡಪ್ರಭ ವರದಿ ಪ್ರಕಟಿಸಿದ ಬಳಿಕ ೭ ದನಗಳ ಹಿಡಿದು ದಂಡ ಹಾಕಿದ್ದರು. ಮರು ದಿನವೂ ಜಾನುವಾರ ಹಾವಳಿ ನಿಲ್ಲಲಿಲ್ಲ. ಮತ್ತೆ ಕನ್ನಡಪ್ರಭ ಜು.೧೭ ರಂದು ಬೀಡಾಡಿ ದನಗಳ ಕಾಟಕ್ಕೆ ಸವಾರರಿಗೆ ತೊಂದರೆ ಎಂದು ವರದಿ ಪ್ರಕಟಗೊಂಡ ಹಿನ್ನಲೆ ಪುರಸಭೆ ಅಧಿಕಾರಿಗಳು ಎಚ್ಚೆತ್ತು ಪುರಸಭೆ ಸಿಬ್ಬಂದಿ ೧೦ ಜಾನುವಾರುಗಳನ್ನು ಹಿಡಿದು ಪುರಸಭೆ ಆವರಣದೊಳಗೆ ಕೂಡಿ ಹಾಕಿದ್ದಾರೆ. ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ತಡೆಯಲು ಪುರಸಭೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ದಂಡ ಹಾಕಿ ಎಚ್ಚರಿಕೆ ನೀಡಿದರೂ ದನಗಳ ಬಿಡುವುದನ್ನು ನಿಲ್ಲಿಸಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಹೇಳಿದ್ದಾರೆ.
ಪುರಸಭೆ ವ್ಯಾಪ್ತಿಯಲ್ಲಿ ಮೂರು ದಿನ ಕಾರ್ಯಾಚರಣೆ ನಡೆಸಿದಾಗ ೧೯ ಬೀಡಾಡಿ ದನಗಳನ್ನು ಹಿಡಿದು ದಂಡ ಹಾಕಲಾಗಿದ್ದು, ದನಗಳನ್ನು ಇನ್ನು ಮುಂದೆ ಬಿಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟಿದ್ದರೂ ದನ, ಕರುಗಳ ಬಿಡುವುದನ್ನು ನಿಲ್ಲಿಸುತ್ತಿಲ್ಲ ಎಂದರು.ಪಟ್ಟಣದಲ್ಲಿ ಬೀಡಾಡಿ ದನ, ಕರುಗಳನ್ನು ಬಿಟ್ಟವರ ಮೇಲೆ ದಂಡ ಹಾಕಲಾಗಿದೆ. ಆದರೂ ದನಗಳನ್ನು ಬಿಡುವುದನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಮತ್ತೇನಾದರೂ ಬಿಟ್ಟರೆ ಪಿಂಜರಾಪೋಲ್‌ಗೆ ಬಿಡಬೇಕಾಗುತ್ತದೆ. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೂಡ ಬೀಡಾಡಿ ದನಗಳ ಹಾವಳಿಗೆ ಬ್ರೇಕ್ ಹಾಕಿ ಎಂದಿದ್ದಾರೆ.-ಕೆ.ಪಿ.ವಸಂತಕುಮಾರಿ, ಮುಖ್ಯಾಧಿಕಾರಿ