ಸಾರಾಂಶ
ಪದ್ಮಾವತಿ ಅವರ ಕೊನೆಯ ಪುತ್ರ ಎಚ್. ಉಮೇಶ್ ನಾಟಕ ವಿಭಾಗದಲ್ಲಿ ಎಂಎ ಪದವಿ ಗಳಿಸಿದ್ದಾರೆ.
ಮರಿಯಮ್ಮನಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕಳಾಗಿ ಸೇವೆ ಸಲ್ಲಿಸುತ್ತಿರುವ ಪದ್ಮಾವತಿ ಪುತ್ರ ಎಚ್.ಉಮೇಶ್ ಬೆಂಗಳೂರು ವಿವಿಯಿಂದ ನಾಲ್ಕು ಚಿನ್ನದ ಪದಕಗಳೊಂದಿಗೆ ಎಂಎ ಪದವಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪದ್ಮಾವತಿ ಅವರ ಕೊನೆಯ ಪುತ್ರ ಎಚ್. ಉಮೇಶ್ ನಾಟಕ ವಿಭಾಗದಲ್ಲಿ ಎಂಎ ಪದವಿ ಗಳಿಸಿದ್ದಾರೆ. ಅದೂ ನಾಲ್ಕು ಚಿನ್ನದ ಪದಕಗಳೊಂದಿಗೆ. ಕಷ್ಟಪಟ್ಟು ತನ್ನನ್ನು ಓದಿಸಿದ ತಾಯಿಗೆ ಉಮೇಶ್ ಚಿನ್ನದ ಪದಕ ತೊಡಿಸಿ ಸಂಭ್ರಮಿಸಿದರು.ಉಮೇಶನ ಮೂವರು ಅಣ್ಣಂದಿರು ಸ್ಥಳೀಯ ಕಾರ್ಖಾನೆ, ಟೈಲರ್, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತ ತಾಯಿ ಜೊತೆಗೆ ತಮ್ಮನ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ.
ಉಮೇಶ್ ಪದವಿ ನಂತರ 2021ರಲ್ಲಿ ಹೆಗ್ಗೋಡಿನ ನಿನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾನೆ. ಜೊತೆಗೆ ಸ್ಥಳೀಯ ಲಲಿತ ಕಲಾ ರಂಗದ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ವತಿದ್ದ. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದ ಎಂಎ ನಾಟಕ ಸ್ನಾತಕೋತ್ತರ ಪದವಿ (2024-25) ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ, ೪ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾನೆ.ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ಮಗ ಚಿನ್ನದ ಪದಕಗಳನ್ನು ಸ್ವೀಕರಿಸುವುದನ್ನು ನೋಡಿ ಪದ್ಮಾವತಿ ಕಣ್ತುಂಬಿಕೊಂಡರು.
ನನ್ನನ್ನು ಓದಿಸಲು ತಾಯಿ, ಸಹೋದರರ ಶ್ರಮ ಇದೆ. ತಾಯಿ ಪೌರಕಾರ್ಮಿಕಳಾಗಿ ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮತ್ತು ಸಹೋದರ ಆಶಯದಂತೆ ಬದುಕುತ್ತೇನೆ. ಅವರ ತ್ಯಾಗಕ್ಕೆ ಈ ನಾಲ್ಕು ಚಿನ್ನದ ಪದಕಗಳನ್ನು ಅರ್ಪಿಸಿದ್ದೇನೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ಇಚ್ಚೆ ಇದೆ ಎನ್ನುತ್ತಾರೆ ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿ ಎಚ್.ಉಮೇಶ್.