ಚುನಾಯಿತ ಸದಸ್ಯರ ಹೊರಗಿಟ್ಟಿರುವ ಪುರಸಭೆ: ಸದಸ್ಯ ಗಾದ್ರಿರಾಜು

| Published : Nov 19 2025, 12:30 AM IST

ಸಾರಾಂಶ

ಚನ್ನಗಿರಿ ಪುರಸಭೆಗೆ ಆಡಳಿತ ಅಧಿಕಾರಿಗಳು ನೇಮಕವಾಗದೇ ಇದ್ದರೂ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಎಲ್ಲಾ ಚುನಾಯಿತ ಸದಸ್ಯರನ್ನು ಹೊರಗಿಟ್ಟು ಆಡಳಿತ ನಡೆಸುತ್ತಿದ್ದಾರೆ ಎಂದು ಪುರಸಭೆಯ ಸದಸ್ಯ ಗಾದ್ರಿರಾಜು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿ ಪುರಸಭೆಗೆ ಆಡಳಿತ ಅಧಿಕಾರಿಗಳು ನೇಮಕವಾಗದೇ ಇದ್ದರೂ ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಗಳು ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ ಎಲ್ಲಾ ಚುನಾಯಿತ ಸದಸ್ಯರನ್ನು ಹೊರಗಿಟ್ಟು ಆಡಳಿತ ನಡೆಸುತ್ತಿದ್ದಾರೆ ಎಂದು ಪುರಸಭೆಯ ಸದಸ್ಯ ಗಾದ್ರಿರಾಜು ಆರೋಪಿಸಿದರು.

ಪಟ್ಟಣದ ಪುರಸಭೆಯ ಮುಂಭಾಗದಲ್ಲಿ ಮಂಗಳವಾರ ಚುನಾಯಿತ ಸದಸ್ಯರ ಜತೆ ಪ್ರತಿಭಟನೆಯನ್ನು ನಡೆಸಿ ಮಾತನಾಡಿ, ಈಗಿರುವ ಚುನಾಯಿತ ಸದಸ್ಯರು 2021ರಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದು 2026ರ ಏಪ್ರಿಲ್ 26ಕ್ಕೆ ನಮ್ಮ ಅವಧಿ ಮುಕ್ತಾಯಗೊಳ್ಳಲಿದೆ. ಇನ್ನು 6 ತಿಂಗಳು ನಮ್ಮ ಅವಧಿ ಇದ್ದರೂ ಸಹ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಕೊಠಡಿಗಳಿಗೆ ಬೀಗ ಹಾಕಿ ನಮ್ಮನ್ನು ಅನಾಮಧೇಯರಂತೆ ಕಾಣುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಗೆ ಆಡಳಿತಾಧಿಕಾರಿಗಳು ನೇಮಕಗೊಂಡಿದ್ದರೆ ಅದರ ಆದೇಶ ಪತ್ರವನ್ನು ತೋರಿಸಲಿ ಅದನ್ನು ಬಿಟ್ಟು ನಿಮ್ಮ ಅವಧಿ ಮುಗಿದಿದೆ ಎಂದು ಹೇಳುತ್ತಿರುವುದು ಕಾನೂನು ಬಾಹಿರವಾಗಿದ್ದು ನಮ್ಮ ಅವಧಿಯ ವಿಚಾರವಾಗಿ ಹೈಕೋರ್ಟ ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸಹಾ ಕೋರ್ಟ ನ ಆದೇಶ ವಿಲ್ಲದೆ, ಆಡಳಿತಾಧಿಕಾರಿಗಳ ನೇಮಕದ ಬಗ್ಗೆ ಆದೇಶ ಪ್ರತಿಯನ್ನು ನೀಡದೆ ನಮ್ಮ ಅಧಿಕಾರವನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಪಟ್ಲಿನಾಗರಾಜ್, ಪಾರಿಪರಮೇಶ್, ಅಮೀರ್ ಅಹಮದ್, ಗೌಸ್ ಪೀರ್, ಉಪಾಧ್ಯಕ್ಷೆ ಸರ್ವಮಂಗಳ, ಲತಾ. ಜರಿನಾಭಿ, ಕಾಪೀಪುಡಿ ಶಿವಾಜಿರಾವ್, ನಟರಾಜ್, ಜಿತೇಂದ್ರರಾಜ್, ಕಮಲಾಹರೀಶ್ ಹಾಜರಿದ್ದರು.

ನ.4ರಂದೇ ಚುನಾಯಿತ ಸದಸ್ಯರ ಅಧಿಕಾರ ಕೊನೆ

ಈ ಬಗ್ಗೆ ಪುರಸಭೆಯ ಕರ್ತವ್ಯ ನಿಮಿತ್ತ ದಾವಣಗೆರೆಗೆ ಹೋಗಿದ್ದ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ನ.4ನೇ ತಾರೀಖಿನಂದೇ ಪುರಸಭೆಯ ಚುನಾಯಿತ ಸದಸ್ಯರ ಆಡಳಿತ ಅವಧಿ ಮುಕ್ತಾಯಗೊಂಡಿದ್ದು ನ.5ನೇ ತಾರೀಖಿನಂದು ರಾಜ್ಯ ಸರ್ಕಾರದ ಆದೇಶದಂತೆ ಹೊನ್ನಾಳಿಯ ಉಪ ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದಾರೆ, ಇನ್ನೆರಡು ದಿನಗಳಲ್ಲಿ ಪುರಸಭೆಗೆ ಬಂದು ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಳ್ಳುವರು. ಚುನಾಯಿತ ಸದಸ್ಯರ ಅವಧಿ ಮುಗಿದ ಹಿನ್ನೆಲೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಕೊಠಡಿಗಳಿಗೆ ಚಿಲಕ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.