ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ರಾಜ್ಯದ ಎರಡನೆಯ ದೊಡ್ಡ ನಗರ ಎನಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮೇಯರ್- ಉಪಮೇಯರ್ ಚುನಾವಣೆಯ ಕಾವು ರಂಗೇರಿದೆ. ಪಾಲಿಕೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಮೇಯರ್ ಪಟ್ಟಕ್ಕಾಗಿ ಭಾರೀ ಪ್ರಮಾಣದಲ್ಲಿ ಲಾಬಿ ನಡೆಯುತ್ತಿದೆ. ಇನ್ನು ಕಾಂಗ್ರೆಸ್‌ನಲ್ಲಿ ಯಾವುದೇ ಬಗೆಯ ಚಟುವಟಿಕೆಗಳು ಕಂಡು ಬರುತ್ತಿಲ್ಲ.24ನೆಯ ಮೇಯರ್: ಮಹಾನಗರ ಪಾಲಿಕೆಯ 24ನೆಯ ಅವಧಿಯ ಹಾಗೂ ಈ ಅವಧಿಯ ನಾಲ್ಕನೆಯ ಮೇಯರ್- ಉಪಮೇಯರ್‌ಗಾಗಿ ಚುನಾವಣೆ ನಡೆಯುತ್ತಿದೆ. ಜೂ. 30ರಂದು ಮಹೂರ್ತ ನಿಗದಿಯಾಗಿದೆ. ಮೇಯರ್‌ಗಿರಿ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಮೇಯರ್ ಸ್ಥಾನವು ಒಬಿಸಿ ಬ ವರ್ಗಕ್ಕೆ ಮೀಸಲಾಗಿದೆ.
ಮೇಯರ್‌ಗಿರಿ ಯಾರಿಗೆ?: ಮೇಯರ್‌ಗಿರಿಗಾಗಿ ಪೂರ್ವ ಕ್ಷೇತ್ರದ ಪೂಜಾ ಶೇಜವಾಡ್ಕರ್, ಶೀಲಾ ಕಾಟ್ಕರ್, ಪ್ರೀತಿ ಖೋಡೆ, ರಾಧಾಬಾಯಿ ಸಫಾರೆ, ಸೆಂಟ್ರಲ್ ಕ್ಷೇತ್ರದ ಮೀನಾಕ್ಷಿ ವಂಟಮೂರಿ, ಧಾರವಾಡದ ಜ್ಯೋತಿ ಪಾಟೀಲ ರೇಸಿನಲ್ಲಿದ್ದಾರೆ.ಈ ಅವಧಿಯಲ್ಲಿ ಈವರೆಗೆ ಆದ ಮೂರು ಜನ ಮೇಯರ್‌ಗಳಲ್ಲಿ ಧಾರವಾಡ ಕ್ಷೇತ್ರದ ಈರೇಶ ಅಂಚಟಗೇರಿ, ಸೆಂಟ್ರಲ್ ಕ್ಷೇತ್ರದ ವೀಣಾ ಬರದ್ವಾಡ, ಪಶ್ಚಿಮ ಕ್ಷೇತ್ರ ರಾಮಪ್ಪ ಬಡಿಗೇರ್ ಆಗಿದ್ದಾರೆ. ಇದೀಗ ಉಳಿದಿರುವುದು ಪೂರ್ವ ಕ್ಷೇತ್ರ ಮಾತ್ರ.
ಪೂರ್ವ ಕ್ಷೇತ್ರದಿಂದ ಕಳೆದ ಅವಧಿಯಲ್ಲಿನ ಸುಧೀರ ಸರಾಫ್, ಅದಕ್ಕಿಂತ ಮುಂಚೆ ರಾಧಾಬಾಯಿ ಸಫಾರೆ ಆಗಿದ್ದರು. ಅದಾದ ಬಳಿಕ ಪೂರ್ವ ಕ್ಷೇತ್ರಕ್ಕೆ ಅವಕಾಶವೇ ಸಿಕ್ಕಿಲ್ಲ. ಪೂರ್ವ ಕ್ಷೇತ್ರಕ್ಕೇ ನೀಡಬೇಕು ಎಂಬ ಬೇಡಿಕೆಯನ್ನು ಈ ಕ್ಷೇತ್ರದ ಸದಸ್ಯರು ಇಟ್ಟಿದ್ದಾರೆ.ಈ ನಡುವೆ ರಾಧಾಬಾಯಿ ಸಫಾರೆ ಹೊರತುಪಡಿಸಿ ಎಲ್ಲರೂ ಮೊದಲ ಬಾರಿಗೇ ಆಯ್ಕೆಯಾದವರು. ಪಾಲಿಕೆ ಸಮರ್ಥವಾಗಿ ನಿಭಾಯಿಸಬೇಕು. ಹೀಗಾಗಿ ಹಿರಿಯರಾಗಿರುವ ಸಫಾರೆ ಅವರಿಗೆ ಪಟ್ಟ ಕಟ್ಟಿದರೆ ಸೂಕ್ತ ಎಂಬ ಅಭಿಪ್ರಾಯವನ್ನು ಒಂದು ಗುಂಪು ವ್ಯಕ್ತಪಡಿಸಿದರೆ, ಮತ್ತೊಂದು ಗುಂಪು ಈಗಾಗಲೇ ಸಫಾರೆ ಅವರು ಒಂದು ಬಾರಿ ಮೇಯರ್ ಆಗಿರುವುದರಿಂದ ಹೊಸಬರಿಗೆ ಅವಕಾಶ ಕಲ್ಪಿಸಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಪಶ್ಚಿಮ ಕ್ಷೇತ್ರದವರಾದರೂ ರಾಮಪ್ಪ ಬಡಿಗೇರ್ ಹುಬ್ಬಳ್ಳಿಯವರೇ ಆಗಿರುವುದರಿಂದ ಹುಬ್ಬಳ್ಳಿಗೆ ಮೇಯರ್‌ಗಿರಿ ಕೊಡಬೇಡಿ ಧಾರವಾಡಕ್ಕೆ ಕೊಡಿ ಎಂಬ ಮಾತು ಕೇಳಿ ಬರುತ್ತಿದೆ. ಹೀಗಾಗಿ ಜ್ಯೋತಿ ಪಾಟೀಲ ಹೆಸರು ಮುನ್ನೆಲೆಗೆ ಬರುತ್ತಿದೆ.ಉಪಮೇಯರ್‌ಗಿರಿ ಬ ವರ್ಗಕ್ಕೆ ಮೀಸಲಾಗಿದೆ. ಬಿ ವರ್ಗಕ್ಕೆ ಮೀಸಲಾಗಿರುವ ಸಂತೋಷ ಚವ್ಹಾಣ, ಶಂಕರ ಶೇಳಕೆ ಈ ಇಬ್ಬರು ಇದೀಗ ರೇಸ್‌ನಲ್ಲಿದ್ದಾರೆ. ಶೇಳಕೆ ಈಗಾಗಲೇ ನಗರ ಯೋಜನಾ ಸ್ಥಾಯಿ ಸಮಿತಿಯಲ್ಲಿರುವುದರಿಂದ ಚವ್ಹಾಣ ಹೆಸರು ಮುಂಚೂಣಿಯಲ್ಲಿದೆ. ಆದರೆ, ಮೇಯರ್‌ಗಿರಿ ಹುಬ್ಬಳ್ಳಿಗೆ ನೀಡಿದರೆ ಧಾರವಾಡಕ್ಕೆ ಉಪಮೇಯರ್ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಶೇಳಕೆ ಪ್ರಯತ್ನ ನಡೆಸಿದ್ದಾರೆ.
ಹಿಂದಿನ ದಿನ ಅಂತಿಮ: ಎಲ್ಲರೂ ತಮಗೆ ಪಟ್ಟಕ್ಕೇರಿಸಿ ಎಂದು ಲಾಬಿ ನಡೆಸುತ್ತಾ, ನಾಯಕರ ಬಳಿ ಎಡತಾಕುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಎನಿಸಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಹಿರಿಯ ಸದಸ್ಯರು ಚರ್ಚೆ ನಡೆಸಿ ಚುನಾವಣೆ ಹಿಂದಿನ ದಿನ ಅಂದರೆ ಜೂ. 29ರಂದು ಅಂತಿಮಗೊಳಿಸಲಿದ್ದಾರೆ. ಯಾರನ್ನೇ ಆಯ್ಕೆ ಮಾಡಲಿ. ಅಳೆದು ತೂಗಿ ಆಯ್ಕೆ ಮಾಡುವುದಂತೂ ಖಚಿತ ಎಂದು ಪಕ್ಷದ ಮೂಲಗಳು ತಿಳಿಸುತ್ತವೆ.ಕಾಂಗ್ರೆಸ್ ಕಥೆಯೇನು?: ಈ ನಡುವೆ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಆದರೆ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನಲ್ಲಿ ಮಾತ್ರ ಯಾವುದೇ ಬಗೆಯ ಚಟುವಟಿಕೆಗಳು ಈ ನಿಟ್ಟಿನಲ್ಲಿ ಕಾಣಿಸುತ್ತಿಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ಮೇಯರ್- ಉಪಮೇಯರ್ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಆದರೆ, ಯಾರನ್ನು ಕಣಕ್ಕಿಳಿಸುವುದು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ಇನ್ನೆರಡು ದಿನ ಬಿಟ್ಟು ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಎಷ್ಟೆಷ್ಟು?: 82 ಸಂಖ್ಯೆ ಬಲದ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 1 ಜೆಡಿಎಸ್, 6 ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರ ಪೈಕಿ ಇಬ್ಬರು ಕಾಂಗ್ರೆಸ್ ಬೆಂಬಲಿತರಾಗಿದ್ದರೆ, ಮೂವರು ಈಗಾಗಲೇ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನ ಒಬ್ಬರು ಕೂಡ ಬಿಜೆಪಿಗೆ ಬೆಂಬಲಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಪಕ್ಷೇತರರ ಪೈಕಿ ಒಬ್ಬರು ತಟಸ್ಥವಾಗಿ ಉಳಿದಿದ್ದು, ಆಗಿನ ಪರಿಸ್ಥಿತಿ ನೋಡಿಕೊಂಡು ಮತ ಚಲಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಮೂವರು ಸದಸ್ಯರನ್ನು ಹೊಂದಿರುವ ಎಐಎಂಐಎಂ ಕೂಡ ಹಿಂದಿನಂತೆ ಕಣಕ್ಕೆ ಇಳಿಯಲಿದೆ.ಏನೇ ಆಗಲಿ ಪಾಲಿಕೆಯಲ್ಲಿ ಮೇಯರ್- ಉಪಮೇಯರ್ ಚುನಾವಣೆಗೆ ಚಟುವಟಿಕೆಗಳಂತೂ ಬಿರುಸುಗೊಂಡಿರುವುದಂತೂ ಸತ್ಯ.
ವಿಪ್ ಜಾರಿ: ಈ ನಡುವೆ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಎಲ್ಲರಿಗೂ ಈಗಾಗಲೇ ವಿಪ್ ಜಾರಿ ಮಾಡಿದ್ದಾರೆ.ಮೇಯರ್- ಉಪಮೇಯರ್ ಚುನಾವಣೆಗೆ ಸಂಬಂಧಪಟ್ಟಂತೆ ಈವರೆಗೂ ನಾವ್ಯಾರು ಸಭೆ ನಡೆಸಿಲ್ಲ. ಜೂ. 29ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ, ತಾವು ಸಭೆ ನಡೆಸಲಿದ್ದೇವೆ. ಬಳಿಕ ಸದಸ್ಯರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.