ಸಾರಾಂಶ
ಜಲ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ । ಪ್ರವಾಸಿಗರು, ಸ್ಥಳೀಯರ ಪರದಾಟ
ಕನ್ನಡಪ್ರಭ ವಾರ್ತೆ ಬ್ಯಾಕೋಡು
ಶರಾವತಿ ಹಿನ್ನೀರಿನ ಹಲ್ಕೆ ಮುಪ್ಪಾನೆ ಲಾಂಚ್ ತಾಂತ್ರಿಕ ದೋಷದಿಂದ ಭಾನುವಾರ ಪುನಃ ಸ್ಥಗಿತಗೊಂಡಿದೆ.ಯಾವುದೇ ಮಾಹಿತಿ ನೀಡದೆ ಲಾಂಚ್ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು, ಸ್ಥಳೀಯರು ಮತ್ತು ಪ್ರವಾಸಿಗರು ಪರದಾಡುವಂತಾಯಿತು. ಪದೇ ಪದೇ ಲಾಂಚ್ ಸ್ಥಗಿತಗೊಳ್ಳುತ್ತಿದ್ದು, ಇದು ಕರೂರು ಹೋಬಳಿಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ತುಮರಿ ಗ್ರಾಮದಿಂದ ಕಾರ್ಗಲ್, ಜೋಗಕ್ಕೆ ಸಂಪರ್ಕ ಕಲ್ಪಿಸುವ ಹಲ್ಕೆ ಮುಪ್ಪಾನೆ ಲಾಂಚ್ ಶುಕ್ರವಾರದಿಂದ ಪುನಃ ಸ್ಥಗಿತ ಗೊಂಡಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಅಪಾರ ಪ್ರಮಾಣದ ನೀರು ಶೇಖರಣೆಯಾಗಿದ್ದು, ಮುಪ್ಪಾನೆ ಲಾಂಚ್ ತಟದಲ್ಲಿ ಸಹ ನೀರಿನ ಹರಿವು ಹೆಚ್ಚಿದೆ. ಇದರಿಂದ ಲಾಂಚ್ ಪ್ಲಾಟ್ ಫಾರ್ಮ್ ಇಲ್ಲದೆ ಲಾಂಚ್ ನಿಲುಗಡೆಗೆ ತೊಂದರೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪ್ಲಾಟ್ ಫಾರ್ಮ್ ಇಲ್ಲದೆ ಇದ್ದರಿಂದ ಲಾಂಚ್‌ಗೆ ಮರದ ದಿಣ್ಣೆಗಳು ತಾಗುತ್ತಿದ್ದು ಲಾಂಚ್ ಫ್ಯಾನ್‌ಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.* 3 ದಿನ ಸೇವೆ ಇಲ್ಲ: ಲಾಂಚ್ ಪುನರಾರಂಭ ಇನ್ನು 3 ದಿನ ತಡವಾಗಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಿಂಗಳಲ್ಲಿ ಹತ್ತಾರು ಬಾರಿ ಲಾಂಚ್ ಸ್ಥಗಿತಗೊಂಡು ಕರೂರು ಹೋಬಳಿಯ ಜನತೆಗೆ ಸರಿಯಾಗಿ ಸೇವೆ ನೀಡುತ್ತಿಲ್ಲ ಎಂದು ಜನರು ದೂರಿದ್ದಾರೆ.
ಭಾನುವಾರ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಸಿಗಂದೂರಿಗೆ ತೆರಳಲು ನೂರಾರು ವಾಹನಗಳು ಲಾಂಚ್ ತಟಕ್ಕೆ ಬಂದು ವಾಪಾಸ್ ಹೋಗುವುದು ಸಾಮಾನ್ಯವಾಗಿತ್ತು.
ಕಳೆದ ಬೇಸಿಗೆಯಲ್ಲಿ ಕೂಡ ಲಾಂಚ್‌ನ ಒಳಬಾಗದ ಗೇರ್ ಬಾಕ್ಸ್ ನಲ್ಲಿ ತಾಂತ್ರಿಕ ದೋಷದಿಂದ ವಾರಗಟ್ಟಲೆ ಸಂಪರ್ಕ ಸ್ಥಗಿತಗೊಂಡು ಸಾಕಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮತ್ತೆ ಈಗ ತೊಂದರೆ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ.ಭಾನುವಾರ ಬೆಳಗ್ಗೆಯೇ ಲಾಂಚ್ ಸ್ಥಗಿತಗೊಂಡರೂ, ಜಲ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರದೇ ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಲಾಂಚ್ ಸ್ಥಗಿತದ ಬಗ್ಗೆ ಮಾಹಿತಿ ನೀಡದೇ ಇರುವುರಿಂದ ಜನರು ಲಾಂಚ್ ಸೇವೇ ನಂಬಿ ಬಂದು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ರೀಘವೇ ಲಾಂಚ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.