ಸಾರಾಂಶ
ಗುಂಪು ಹತ್ಯೆ ಪ್ರಕರಣದಿಂದ ತತ್ತರಿಸಿದ್ದ ಮಂಗಳೂರಿನಲ್ಲಿ ನಾಲ್ಕೇ ದಿನದ ಅಂತರದಲ್ಲಿ ಇನ್ನೊಂದು ಭೀಕರ ಹತ್ಯೆ ಗುರುವಾರ ಸಂಭವಿಸಿದೆ.
ಮಂಗಳೂರು : ಗುಂಪು ಹತ್ಯೆ ಪ್ರಕರಣದಿಂದ ತತ್ತರಿಸಿದ್ದ ಮಂಗಳೂರಿನಲ್ಲಿ ನಾಲ್ಕೇ ದಿನದ ಅಂತರದಲ್ಲಿ ಇನ್ನೊಂದು ಭೀಕರ ಹತ್ಯೆ ಗುರುವಾರ ಸಂಭವಿಸಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ನಡೆದಿದ್ದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಎಂಬಾತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಇದು ಫಾಜಿಲ್ ಹತ್ಯೆಗೆ ನಡೆಸಿದ ಪ್ರತೀಕಾರದ ಕೊಲೆ ಎಂದು ಹೇಳಲಾಗುತ್ತಿದೆ.
ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ ನಾಲ್ವರ ತಂಡವೊಂದು ಬಜಪೆಯಲ್ಲಿ ತಲವಾರಿನಲ್ಲಿ ಕೊಚ್ಚಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್ ಶೆಟ್ಟಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎದುರು ಭಾರಿ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಮತ್ತಿತತರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದಾರೆ, ಮಂಗಳೂರು ನಗರಕ್ಕೆ ಹೆಚ್ಚಿನ ಪಡೆಯನ್ನು ಕರೆಸಲಾಗಿದೆ. ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದಾರೆ.
ನಡುರಸ್ತೆಯಲ್ಲೇ ಕೊಲೆ:
ಮಂಗಳೂರು ಹೊರವಲಯದ ಬಜಪೆಯ ಕಿನ್ನಿಪದವು ಎಂಬಲ್ಲಿ ರಾತ್ರಿ 8.30ರ ಸುಮಾರಿಗೆ ದಾಳಿ ನಡೆದಿದ್ದು, ದುಷ್ಕರ್ಮಿಗಳು ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ತಲವಾರಿನಿಂದ ಕೊಚ್ಚಿ ಕೊಂದು ಹಾಕಿದ್ದಾರೆ. ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲದೆ, ಸ್ಥಳೀಯ ಮಹಡಿಯಿಂದ ಯಾರೋ ಮಾಡಿದ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ.
ಸುಹಾಸ್ ಶೆಟ್ಟಿ, ಇನ್ನೋವಾ ಕಾರಿನಲ್ಲಿ ಸ್ನೇಹಿತರೊಂದಿಗೆ ಬಜಪೆಯ ಕಿನ್ನಿಕಂಬಳ ಬಳಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಬೆನ್ನಟ್ಟಿದ್ದಾರೆ. ದುಷ್ಕರ್ಮಿಗಳು ಸ್ವಿಫ್ಟ್ ಮತ್ತು ಮೀನಿನ ಪಿಕಪ್ ವಾಹನದಲ್ಲಿ ಸುಹಾಸ್ ಶೆಟ್ಟಿಯ ಕಾರನ್ನು ಅಡ್ಡಗಟ್ಟಿದ್ದಾರೆ. ದಾಳಿಯ ಮುನ್ಸೂಚನೆ ಅರಿತು ವೇಗವಾಗಿ ಕಾರು ಚಲಾಯಿಸಿದ್ದಕ್ಕೆ ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಹೇರ್ ಕಟ್ಟಿಂಗ್ ಸಲೂನ್‌ಗೆ ನುಗ್ಗಿದೆ. ಈ ವೇಳೆ ಸುಹಾಸ್ ಶೆಟ್ಟಿ ಕಾರಿನಿಂದ ಇಳಿಯುತ್ತಿದ್ದಂತೆ ನಾಲ್ಕರಿಂದ ಐದು ಮಂದಿ ಇದ್ದ ತಂಡ ಆತನನ್ನು ಬೆನ್ನಟ್ಟಿ ಸಾರ್ವಜನಿಕರ ಎದುರೇ ತಲವಾರಿನಿಂದ ಮನಸೋ ಇಚ್ಛೆ ಕಡಿದು ಹತ್ಯೆ ಮಾಡಿದೆ. ಬಳಿಕ ತಂಡ ಪರಾರಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಇನ್ನೋರ್ವ ಸ್ನೇಹಿತ ಕೂಡ ಗಾಯಗೊಂಡಿದ್ದಾಗಿ ಹೇಳಲಾಗಿದೆ.
2022ರ ಜುಲೈ 28 ರಂದು ಸುರತ್ಕಲ್ ಪೇಟೆಯಲ್ಲಿ ಫಾಜಿಲ್‌ನ ಹತ್ಯೆಯಾಗಿತ್ತು. ಈ ಕೇಸಿನಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದಲ್ಲಿದ್ದು, ಗೋರಕ್ಷಣೆಯಲ್ಲಿ ಸಕ್ರಿಯನಾಗಿದ್ದ. ಬಳಿಕ ಈತ ಸಂಘಟನೆಯಿಂದ ದೂರ ಉಳಿದಿದ್ದ.