ಮಕ್ಕಳು ಕನ್ನಡ ಭಾಷೆಯನ್ನು ಕಲಿಯಬೇಕು. ಮಾತೃಭಾಷೆಗೆ ಆಕರ್ಷಿತರಾಗಬೇಕು. ಮಕ್ಕಳು ಕನ್ನಡವನ್ನು ಕಲಿಯುವುದೇ ಶಾಲೆಯಲ್ಲಿ. ಅಂತಹ ಕನ್ನಡ ಶಾಲೆಗಳನ್ನೇ ಮುಚ್ಚಿದರೆ ಮಕ್ಕಳು ಕನ್ನಡ ಕಲಿಯುವುದಾದರೂ ಹೇಗೆ? ಶಾಲೆಗಳನ್ನು ಮುಚ್ಚುತ್ತಾ ಹೋದರೆ, ಕೇವಲ ಆಂಗ್ಲಭಾಷೆಯನ್ನೇ ಕಲಿತರೆ ಕನ್ನಡ ಭಾಷೆ ಬೆಳವಣಿಗೆ ಕಾಣುವುದೇ..?

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಶಾಲೆಗಳಿಗೆ ಹೊಸ ರೂಪ ನೀಡುವ ಮೂಲಕ ಅವುಗಳ ಬೆಳವಣಿಗೆಗೆ ಸಹಕಾರಿಯಾಗಿ ನಿಲ್ಲಬೇಕಾದ ರಾಜ್ಯ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವ ಮೂಲಕ ಅವುಗಳ ಕೊಲೆ ಮಾಡುತ್ತಿದೆ. ಕನ್ನಡ ಶಾಲೆಗಳ ಉಳಿದಾಗ ಭಾಷೆ ಉಳಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಕನ್ನಡ ಸೇನೆ ಕರ್ನಾಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ ಹಾಸ್ಯ ಹಾಗೂ ಮಿಮಿಕ್ರಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ಕನ್ನಡ ಭಾಷೆಯನ್ನು ಕಲಿಯಬೇಕು. ಮಾತೃಭಾಷೆಗೆ ಆಕರ್ಷಿತರಾಗಬೇಕು. ಮಕ್ಕಳು ಕನ್ನಡವನ್ನು ಕಲಿಯುವುದೇ ಶಾಲೆಯಲ್ಲಿ. ಅಂತಹ ಕನ್ನಡ ಶಾಲೆಗಳನ್ನೇ ಮುಚ್ಚಿದರೆ ಮಕ್ಕಳು ಕನ್ನಡ ಕಲಿಯುವುದಾದರೂ ಹೇಗೆ? ಶಾಲೆಗಳನ್ನು ಮುಚ್ಚುತ್ತಾ ಹೋದರೆ, ಕೇವಲ ಆಂಗ್ಲಭಾಷೆಯನ್ನೇ ಕಲಿತರೆ ಕನ್ನಡ ಭಾಷೆ ಬೆಳವಣಿಗೆ ಕಾಣುವುದೇ ಎಂದು ಪ್ರಶ್ನಿಸಿದರು.

ಕನ್ನಡ ಶಾಲೆಗಳಲ್ಲಿ ಮಕ್ಕಳು ಪ್ರಥಮ ಕನ್ನಡ ಶಾಲೆಗಳು ಉಳಿದರೆ ಭಾಷೆಯ ಜೊತೆಗೆ ಕನ್ನಡ ಸಿನಿಮಾ, ಪತ್ರಿಕೆ ಮತ್ತು ಪುಸ್ತಕಗಳು ಉಳಿಯುತ್ತವೆ. ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವ ಮಾತ್ರವಲ್ಲದೆ ಸ್ವಾತಂತ್ರ್ಯೋತ್ಸವ, ಅಂಬೇಡ್ಕರ್ ಮತ್ತು ಗಾಂಧಿ ಜಯಂತಿ ಸೇರಿದಂತೆ ನಾಡು-ನುಡಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ನಡೆಯುತ್ತದೆ. ಶಾಲೆ ಉಳಿಸುವುದು ಎಂದರೆ ಭಾಷೆಯ ಜೊತೆಗೆ ಸೌಹಾರ್ದತೆ ಮತ್ತು ವಿವೇಕದ ಪರಂಪರೆಯನ್ನು ಉಳಿಸಿದಂತೆ ಎಂದು ಅಭಿಪ್ರಾಯಿಸಿದರು.

ಕನ್ನಡ ಭಾಷೆಗೆ ಜಾತ್ಯತೀತ ಆಶಯವಿದೆ. ಕಿಟೆಲ್, ನಿಸಾರ್ ಅಹಮದ್, ಭಾನು ಮುಷ್ತಾಕ್, ಶಿಶುನಾಳ ಶರೀಫ ಸೇರಿದಂತೆ ವಿವಿಧ ಧರ್ಮಗಳವರು ಕನ್ನಡ ಕಟ್ಟಿದ್ದಾರೆ. ಕನ್ನಡ ಉಳಿಸುವುದು ಎಂದರೆ ಸಂವಿಧಾನಾತ್ಮಕ ಸೌಹಾರ್ದತೆಯನ್ನು ಉಳಿಸುವುದು. ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಿದರೆ ಅವರ ಬದುಕು ಹಸನಾಗುವುದರ ಜೊತೆಗೆ ಭಾಷೆಯೂ ಬೆಳೆಯುತ್ತದೆ ಎಂದು ಪ್ರತಿಪಾದಿಸಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಭಾಷೆಯಲ್ಲಿ ಜಾತಿ ಬೆರೆಸಬಾರದು. ಬೆಂಗಳೂರಿನಲ್ಲಿ ಕನ್ನಡ ಕಣ್ಣು ತೆರೆಯಿಸುವ ಕೆಲಸ ಮತ್ತು ಕನ್ನಡ ಜಾಗೃತಿ ಮೂಡಿಸುವ ಕೆಲಸವನ್ನು ಬರಗೂರು ನೇತೃತ್ವದಲ್ಲಿ ಮಾಡೋಣ’ ಎಂದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಮೇಕೆದಾಟು ಯೋಜನೆಗೆ ಮುಂದಿನ ಜೂನ್‌ನಲ್ಲಿ ನಮ್ಮ ಸರ್ಕಾರ ಭೂಮಿಪೂಜೆ ಮಾಡುತ್ತಿದೆ. ಇದಕ್ಕೆ ಡಿಪಿಆರ್ ಸಿದ್ಧವಾಗಿದೆ. ಡಿಸೆಂಬರ್‌ನಲ್ಲಿ ಜಯದೇವ ಆಸ್ಪತ್ರೆ ಮತ್ತು ಕ್ಯಾನ್ಸರ್ ಆಸ್ಪತ್ರೆ ಒಂದೇ ದಿನ ಉದ್ಘಾಟನೆ ಆಗುತ್ತಿರುವುದು ಮಂಡ್ಯ ಜನರಿಗೆ ಸಂತಸದ ವಿಚಾರ ಎಂದರು.

ಕನ್ನಡ ಸೇನೆ ಕರ್ನಾಟಕ ಸಂಘಟನೆ ರಾಜ್ಯ ಅಧ್ಯಕ್ಷ ಕೆ.ಆರ್. ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಕನ್ನಡ ರತ್ನ ಪ್ರಶಸ್ತಿಯನ್ನು ಸಿ.ಕೆ.ಗಿರೀಶ್‌ಗೌಡ, ಶುಭಶ್ರೀ ಪ್ರಸಾದ್ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಮುನ್ನ ನಗರದ ಸರ್ ಎಂವಿ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಕನ್ನಡ ಸೇನೆ ಕರ್ನಾಟಕ ಸಂಘಟನೆ ಪದಾಕಾರಿಗಳು ಹಾಗೂ ಕನ್ನಡಪರ ಚಳವಳಿಗಾರರು ಸೇರಿಕೊಂಡು ಕಲಾ ತಂಡಗಳೊಂದಿಗೆ ಕನ್ನಡ ಜಾಗೃತಿಗಾಗಿ ಮೈಸೂರು-ಬೆಂಗಳೂರು ಹೆದ್ದಾರಿಯ ಮಾರ್ಗವಾಗಿ ಕಲಾಮಂದಿರದವರೆಗೆ ಮೆರವಣಿಗೆ ನಡೆಸಿದರು.

ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಎಚ್.ಡಿ. ಕೋಟೆ ಸೋಮಣ್ಣ, ಕನ್ನಡ ಸೇನೆ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ್, ಮಹಿಳಾ ಅಧ್ಯಕ್ಷೆ ಸೌಭಾಗ್ಯ, ಕಮ್ಮನಾಯಕನಹಳ್ಳಿ ಮಂಜುನಾಥ್, ಕುಮಾರ್, ಖ್ಯಾತ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ, ನಟ ಕೆ.ಆರ್. ಪೇಟೆ ಶಿವರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.